ಭಾನುವಾರ, ಸೆಪ್ಟೆಂಬರ್ 26, 2021
27 °C
ಸಚಿವರಿಗೆ ತಲುಪದ ಬಡಜನರ ಅಳಲು l ಸೂರಿಗಾಗಿ ಹಾಡಿ ಜನರ ಆಗ್ರಹ

ಮೈಸೂರು: ಮಳೆಯಲ್ಲಿ ಮರೆಯಾದ ಹಾಡಿ ಕಣ್ಣೀರು!

ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ನಮ್ಮ ಹಾಡಿಯಲ್ಲಿ ಮೂವತ್ತು ಕುಟುಂಬಗಳಿವೆ. ಎಲ್ಲರ ಮನೆ ಚಾವಣಿಯೂ ಸೋರುತ್ತದೆ. ಸಂಘ, ಸಂಸ್ಥೆಗಳು ಕೊಟ್ಟಿದ್ದ ಪ್ಲಾಸ್ಟಿಕ್‌ ಕವರ್‌ಗಳು ಮುಂಗಾರಿನ ಗಾಳಿಗೆ ತೂರಿ ಹೋಗಿವೆ. ಕೆಲವು ಹರಿದಿವೆ. ತೊಟ್ಟಿಕ್ಕುವ ಮಳೆ ನೀರಿನಲ್ಲೇ ದಿನದೂಡುತ್ತಿದ್ದೇವೆ..’

–ಜಿಲ್ಲಾ ಕೇಂದ್ರದಿಂದ 99 ಕಿ.ಮೀ ದೂರದಲ್ಲಿರುವ ಎಚ್‌.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿಯ ಮೂಲೆ ವೂರು ಹಾಡಿ ನಿವಾಸಿ ಜಯಾ ಸಂಕಟದಿಂದ ನುಡಿದಾಗ ಅವರ ಕಣ್ಣ ಹನಿ ಮತ್ತು ಮಳೆಹನಿ ಎರಡೂ ಒಂದಾಗಿದ್ದವು.

‘ಮಳೆ ನೀರು ಬೀಳದಂತಹ ಒಂದು ಸೂರು, ಸರಾಗವಾಗಿ ನಡೆಯಲು ದಾರಿ ಕೊಡಿ ಸ್ವಾಮಿ ಎಂದು ಕೈಮುಗಿದು ಕೇಳೋಣ ಎಂದರೆ ಸಚಿವರು ನಮ್ಮ ಕಡೆಗೆ ನೋಡದೆಯೇ ಹೊರಟುಬಿಟ್ಟರು’ ಎಂದು ಅವರು ಸಂಕಟದಿಂದ ನುಡಿದರು. 

‘ಗೋಡೆಗಳು ಮಳೆ ನೀರಿನಿಂದ ಬಿರುಕು ಬಿಟ್ಟಿವೆ. ನೆಲವೆಲ್ಲ ಶೀತವಿಡಿದು ಮಕ್ಕಳು, ಮುದುಕರ ಆರೋಗ್ಯ ಕೆಡುತ್ತಿದೆ. ಮನೆಯ ಹೊರಗೆ ನೀರು ನಿಂತಿದ್ದು ನಡೆದಾಡಲೂ ಆಗದ ಸ್ಥಿತಿ ಇದೆ’ ಎಂದು ಕಷ್ಟಗಳನ್ನು ಬಿಡಿಸಿಟ್ಟರು.

ಪಂಚಾಯ್ತಿ ವ್ಯಾಪ್ತಿ ಯಲ್ಲಿರುವ ಮಚ್ಚೂರು, ಹೊಸೂರು, ಗೋಳೂರು, ಆನೆಮಾಳ, ವಡಕನಮಾಳ, ಕಡೆಗದ್ದೆ, ತಿಮ್ಮನಹೊಸಹಳ್ಳಿ ಹಾಗೂ ಕಾಕನಕೋಟೆ ಗ್ರಾಮದ ಜನರೂ ಇದೇ ಬಗೆಯ ಕಷ್ಟಕರ ಜೀವನ ನಡೆಸುತ್ತಿದ್ದಾರೆ.

ಸೀಮೆಎಣ್ಣೆ ದೀಪವೇ ಬೆಳಕು: ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ. ವಿದ್ಯುತ್ ಇರುವೆಡೆ ವಿದ್ಯುತ್ ಪೂರೈಕೆ ಅಪರೂಪ ಎನ್ನುವ ಪರಿಸ್ಥಿತಿ ಇದೆ.

‘ಸೀಮೆಎಣ್ಣೆ ದೀಪವೇ ನಮಗೆ ಬೆಳಕು. ಪಡಿತರ ವಿತರಣೆಯಡಿ ಕೊಡುತ್ತಿರುವ ಒಂದು ಲೀಟರ್ ಸೀಮೆಎಣ್ಣೆ ವಾರಕ್ಕೇ ಖಾಲಿಯಾಗುತ್ತದೆ. ಮೇಣದಬತ್ತಿ, ಹರಳೆಣ್ಣೆ ದೀಪಗಳನ್ನೆ ಉರಿಸಬೇಕಾಗಿದೆ. ಸರ್ಕಾರೇತರ ಸಂಸ್ಥೆಗಳು ಕೊಟ್ಟಿರುವ ಸೌರದೀಪಗಳಲ್ಲಿ ಹಲವು ಕೆಟ್ಟಿವೆ’ ಎಂದು ಜಯಾ ಹೇಳಿದರು.

’ಇಲ್ಲಿನ ಜನರಲ್ಲಿ ಬಹುತೇಕರಿಗೆ ದಿನಗೂಲಿಯೇ ಬದುಕಿಗೆ ಆಸರೆ. ಕೇರಳದಲ್ಲೂ ಕರ್ನಾಟಕದವರನ್ನು ಕೊರೊನಾ ಭೀತಿಯಿಂದ ಸೇರಿಸುತ್ತಿಲ್ಲ. ಇದರಿಂದ ಅವರೆಲ್ಲ ಜೀವನ ನಿರ್ವ ಹಣೆಗೆ ಪರದಾಡುತ್ತಿದ್ದಾರೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು.

ವೈದ್ಯರು ಇಲ್ಲ: ಸಮೀಪದ ಆನೆಮಾಳ ಹಾಡಿಯಲ್ಲಿ ಸುಸಜ್ಜಿತವಾದ ಆರೋಗ್ಯ ಕೇಂದ್ರವಿದೆ, ಆದರೆ ಕಾಡಿನ ನಡುವಿನ ಆ ಕೇಂದ್ರಕ್ಕೆ ಬರಲು ವೈದ್ಯರು ಹಿಂಜರಿಯುತ್ತಾರೆ. ಬಂದವರು ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗುತ್ತಾರೆ. ಹೀಗಾಗಿ, ಆರೋಗ್ಯ ಕೆಟ್ಟರೆ ಕೇರಳದ ಮಾನಂದವಾಡಿ, ಕಾಟಿಕೊಳದ ಆಸ್ಪತ್ರೆಗೆ ಹೋಗಬೇಕು’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಿಕ್ಕಮ್ಮಣ್ಣಿ ಅಳಲು ತೋಡಿಕೊಂಡರು.

‘ವಸತಿ ಯೋಜನೆ ಅಡಿ ಸಹಾಯಧನ ಪಡೆದಿರುವ ಬಹಳ ಮಂದಿ ಮನೆ ಕಟ್ಟದೆ ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ’ ಎಂದು ತಹಶೀಲ್ದಾರ್‌ ನರಗುಂದ ಪ್ರತಿಪಾದಿಸಿದರು.

ಹಾಡಿಯತ್ತ ಬಾರದ ಸಚಿವ: ‘ರಾಜಕೀಯ, ದಸರಾ ಮಾತುಗಳು ನಮ್ಮ ಹಾಡಿಗಳ ಹತ್ತಿರ ಬೇಡ ಸ್ವಾಮಿ. ನಮ್ಮ ಕಷ್ಟದ ಬಗ್ಗೆ ಸ್ವಲ್ಪ ಕೇಳಿ’ ಎಂಬ ಹಾಡಿ ಜನರ ಮಾತುಗಳು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ಕಿವಿಯನ್ನು ಮುಟ್ಟಲಿಲ್ಲ.

ಎಚ್.ಡಿ.ಕೋಟೆ ತಾಲ್ಲೂಕಿನ ಬಾವಲಿ ಚೆಕ್‌ಪೋಸ್ಟ್‌ನ ಪರಿಶೀಲನೆಗಾಗಿ ಶನಿವಾರ ಬಂದಿದ್ದ ಸಚಿವರ ಬಳಿ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸೇರಿದ್ದ ಹಾಡಿ ಜನರು ಅವಕಾಶ ಸಿಗದೇ ನಿರಾಶರಾಗಿ, ಸುರಿಯುವ ಮಳೆಯಲ್ಲೇ ವಾಪಸಾದರು. ಚೆಕ್‌ಪೋಸ್ಟ್‌ ಮಾತ್ರ ವೀಕ್ಷಿಸಿ ತೆರಳಿದ ಸಚಿವರು ಸೋರುತ್ತಿದ್ದ ಗುಡಿಸಲುಗಳತ್ತ ತಿರುಗಿಯೂ ನೋಡಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.