ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವೈಯರ್ ಸುಟ್ಟು ತಂತಿ ತೆಗೆಯುತ್ತಾರೆ, ದೂರು ನೀಡಿದರೆ ಹೆದರಿಸುತ್ತಾರೆ‘

ಹೊಗೆ, ವಾಸನೆಯಿಂದ ನಲುಗಿದ ಜನತೆ
Last Updated 23 ಜೂನ್ 2021, 19:30 IST
ಅಕ್ಷರ ಗಾತ್ರ

ಮೈಸೂರು: ನಗರದ ಹೊರವಲಯದ ರಾಜೀವ್‌ನಗರ 3ನೇ ಹಂತದ ಆಸುಪಾಸಿನಲ್ಲಿ ವಾಯುಮಾಲಿನ್ಯ ಮಿತಿ ಮೀರಿದ್ದು, ಜನಸಾಮಾನ್ಯರು ವೈದ್ಯಕೀಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ಖಾಲಿ ನಿವೇಶನದಲ್ಲಿ ನಿತ್ಯವೂ ವೈಯರ್‌ ಹಾಗೂ ಕೆಟ್ಟು ಹೋದ ಎಲೆಕ್ಟ್ರಾನಿಕ್ ಯಂತ್ರೋಪಕರಣಗಳಿಗೆ ಬೆಂಕಿ ಹಾಕಲಾಗುತ್ತಿದೆ. ಈ ಬೆಂಕಿಯಿಂದ ಹೊರಸೂಸುವ ವಾಸನೆ, ಹೊಗೆಗಳು ಇನ್ನಿಲ್ಲದಂತೆ ಕಾಡುತ್ತಿವೆ’ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.

‘ಮುಡಾ’ಗೆ ಸೇರಿರುವ ಈ ಖಾಲಿ ನಿವೇಶನಗಳಲ್ಲಿ ರಾಶಿ ರಾಶಿ ತ್ಯಾಜ್ಯವನ್ನು ತಂದು ಸುರಿಯಲಾಗುತ್ತಿದೆ. ಜತೆಗೆ, ಬೇರೆಡೆಯ ಗುಜರಿ ಅಂಗಡಿಗಳಿಂದಲೂ ಎಲೆಕ್ಟ್ರಾನಿಕ್ ಯಂತ್ರಗಳು, ವೈಯರ್‌ಗಳನ್ನು ತಂದು ಇಲ್ಲಿ ರಾಶಿ ಮಾಡಲಾಗುತ್ತದೆ. ರಾತ್ರಿ ವೇಳೆ ಇದಕ್ಕೆ ಬೆಂಕಿ ಹಚ್ಚುತ್ತಾರೆ. ಬೆಳಿಗ್ಗೆಯವರೆಗೂ ಬೆಂಕಿ ಉರಿಯುತ್ತದೆ. ನಂತರ ಬೂದಿಯಲ್ಲಿ ಸಿಗುವ ವೈಯರ್‌ ಹಾಗೂ ಎಲೆಕ್ಟ್ರಾನಿಕ್ ಯಂತ್ರಗಳಲ್ಲಿರುವ ತಾಮ್ರದ ತಂತಿಗಳು ಹಾಗೂ ಕಬ್ಬಿಣವನ್ನು ಹೆಕ್ಕುತ್ತಾರೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.

ರಾಜೀವ್‌ನಗರ 3ನೇ ಹಂತ ಹಾಗೂ ಸಮೀಪದ ಭಾರತ್‌ನಗರದಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಕುಟುಂಬಗಳಿವೆ. ಈಗ ಆರಂಭವಾಗಿರುವ ಮುಂಗಾರಿನ ಗಾಳಿಯು ವೈಯರ್ ಸುಟ್ಟ ವಾಸನೆಯನ್ನು ಬಹು ದೂರದವರೆಗೂ ಹೊತ್ತು ತರುತ್ತಿದೆ. ಹಗಲಿನ ವೇಳೆ ಬೆಂಕಿ ಹಾಕಿದರೆ ಕಾರ್ಖಾನೆಯ ಚಿಮಣಿಯಿಂದ ಹೊಗೆ ಹೊರ ಹೊಮ್ಮುವಂತೆ ಹೊಗೆಯ ಕಾರ್ಮೋಡಗಳೇ ಇಲ್ಲಿ ಸೃಷ್ಟಿಯಾಗುತ್ತಿವೆ.

ಹೊಗೆ ಮತ್ತು ವಾಸನೆಗಳಿಂದ ಸ್ಥಳೀಯರಲ್ಲಿ ಅಸ್ತಮಾ ಕಾಯಿಲೆ ಸಾಮಾನ್ಯ ಎನ್ನುವಂತಾಗಿದೆ. ಉಸಿರಾಟದ ತೊಂದರೆಯಿಂದ ಹಲವು ಮಂದಿ ಬಳಲುತ್ತಿದ್ದಾರೆ. ಕ್ಯಾನ್ಸರ್‌ನಂತಹ ಕಾಯಿಲೆಗಳು ಬರಬಹುದು ಎನ್ನುವ ಆತಂಕದಲ್ಲಿ ಜನರು ಜೀವನವನ್ನು ದೂಡುತ್ತಿದ್ದಾರೆ.

ನೋಡಿಯೋ ನೋಡದಂತಿರುವ ಪೊಲೀಸರು!

ಇಲ್ಲಿನ ಸಮೀಪದ ಉದಯಗಿರಿ ಹಾಗೂ ಮೈಸೂರು ದಕ್ಷಿಣ ಠಾಣೆಯ ಪೊಲೀಸರು ಈ ದೃಶ್ಯಗಳನ್ನು ನೋಡಿದರೂ ನೋಡದಂತೆ ಇದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ. ‘ಹೊಗೆ ಎಂದು ದೂರು ನೀಡಲು ಹೋದರೆ, ನಿಮ್ಮ ಮನೆಗೆ ತೀರಾ ಸಮೀಪದಲ್ಲಿ ಬೆಂಕಿ ಹಾಕಿದ್ದಾರಾ ಎನ್ನುತ್ತಾರೆ. ದೂರದಲ್ಲೆಲ್ಲೋ ಹಾಕಿರುವ ಬೆಂಕಿಗೆ ಏಕಿಷ್ಟು ಚಿಂತೆ ಎನ್ನುತ್ತಾರೆ’ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT