ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿರಿಯಾಪಟ್ಟಣ ಉತ್ತಮ ಪ್ರತಿಕ್ರಿಯೆ

Last Updated 29 ಸೆಪ್ಟೆಂಬರ್ 2020, 6:42 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲ್ಲೂಕು ಘಟಕದ ನೇತೃತ್ವದಲ್ಲಿ ದಸಂಸ ಮತ್ತು ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಬೆಂಬಲದೊಂದಿಗೆ ಸೋಮವಾರ ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಂಗಡಿಗಳು ಸ್ವಯಂಪ್ರೇರಿತರಾಗಿ ಮುಚ್ಚಿದ್ದವು, ಕೆಲವು ವ್ಯಾಪಾರಸ್ಥರು ಅಂಗಡಿ ತೆರೆದು ವಹಿವಾಟು ನಡೆಸಲು ಮುಂದಾದಾಗ ಪ್ರತಿಭಟನಕಾರರು ಮನವಿ ಮಾಡಿ ಬಂದ್ ಮಾಡಿಸಲು ಯಶಸ್ವಿಯಾದರು.

ಮೆಡಿಕಲ್ ಸ್ಟೋರ್, ಹಾಲು ಉತ್ಪನ್ನಗಳ ಮಾರಾಟ ಕೇಂದ್ರ ವಹಿವಾಟು ನಡೆಸಿದವು. ಕೆಎಸ್ಆರ್‌ಟಿಸಿ ಬಸ್ಸುಗಳು ಎಂದಿನಂತೆ ಸಂಚರಿಸಿದರೂ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬೆರಳೆಣಿಕೆಯಷ್ಟು ಆಟೊ ಮತ್ತು ಟ್ಯಾಕ್ಸಿಗಳು ಸೇವೆ ನೀಡಿದವು. ಬಹುತೇಕರು ಬೆಂಬಲ ವ್ಯಕ್ತಪಡಿಸಿ ಸಂಚಾರ ನಿಲ್ಲಿಸಿದವು. ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್ ಗಳು ತೆರೆದಿದ್ದರೂ ಸಾರ್ವಜನಿಕರು ಹಾಗೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ವಾಹನಗಳು ಮತ್ತು ದ್ವಿಚಕ್ರ ಸವಾರರು ಎಂದಿನಂತೆ ಓಡಾಡುತ್ತಿದ್ದುದು ಕಂಡುಬಂದಿತು.

ರೈತ ಸಂಘ ಮತ್ತು ವಿವಿಧ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಪಟ್ಟಣದ ಎಪಿಎಂಸಿ ಆವರಣದಿಂದ ಪ್ರತಿಭಟನ ಮೆರವಣಿಗೆ ನಡೆಸಿ ಬಿ.ಎಂ.ರಸ್ತೆಯ ಮೂಲಕ ಸಾಗಿ ಬಂದು ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ರಚಿಸುವ ಮೂಲಕ ಕೆಲಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲೋಕೇಶ್ ರಾಜೇ ಅರಸ್, ‘ರೈತರಿಗೆ ಮರಣ ಶಾಸನವಾಗಿರುವ ರೈತ ವಿರೋಧಿ ಸುಗ್ರೀವಾಜ್ಞೆಯನ್ನು ಹಿಂಪಡೆಯದಿದ್ದಲ್ಲಿ ಬೀದಿ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ತಾ.ಪಂ. ಸದಸ್ಯರಾದ ಟಿ.ಈರಯ್ಯ, ಎಸ್.ರಾಮು ಮಾತನಾಡಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣಶೆಟ್ಟಿ, ಮುಖಂಡರಾದ ಎಚ್.ಎಸ್. ಬೋರಲಿಂಗೇಗೌಡ, ದೇವರಾಜ್, ಸೀಗೂರು ವಿಜಯಕುಮಾರ್, ಕರಡಿಪುರ ಕುಮಾರ್, ಶ್ರೀನಿವಾಸ್ ಆರ್.ತುಂಗಾ, ರಹಮತ್ ಜಾನ್ ಬಾಬು, ತಮ್ಮಣ್ಣಯ್ಯ, ಪಿ.ಮಹದೇವ್, ಚೌತಿ ಮಲ್ಲಣ್ಣ, ಸಿ.ಎಸ್.ಜಗದೀಶ್, ಪ್ರಕಾಶ್ ರಾಜೇ ಅರಸ್, ಮಂಜುನಾಥ್ ಸಿಂಗ್, ರವಿ, ಕಾಮರಾಜ್, ಚೆಲುವಯ್ಯ, ಆರ್.ಡಿ.ಮಹದೇವ್, ರಾಜಯ್ಯ, ಅಣ್ಣಯ್ಯ, ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT