ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದ್ದು ಮಾಡುತ್ತಿದೆ ಝಣ ಝಣ ಕಾಂಚಾಣ

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಕೋಲಾರ: ರಾಜ್ಯದ ರಾಜಧಾನಿಗೆ ಹತ್ತಿರದಲ್ಲಿರುವ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರು ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕಿದ್ದೇ ಹೆಚ್ಚು.

ಕೆ.ಪಟ್ಟಾಭಿರಾಮನ್‌, ಪಿ.ವೆಂಕಟಗಿರಿಯಪ್ಪ ಅವರಂತಹ ರಾಜಕೀಯ ಮುತ್ಸದ್ದಿಗಳನ್ನು ಆರಿಸಿ ಕಳುಹಿಸಿದ ಕ್ಷೇತ್ರದಲ್ಲಿ ಈಗ ಜನಪರ ರಾಜಕಾರಣ ಮೂಲೆಗುಂಪಾಗಿದೆ. ರಿಯಲ್‌ ಎಸ್ಟೇಟ್‌ ಉದ್ಯಮ, ಕೈಗಾರಿಕಾ ಚಟುವಟಿಕೆಗಳು ಗರಿಗೆದರಿದ್ದು, ಭೂಮಿಗೆ ಚಿನ್ನದ ಬೆಲೆ ಬಂದಿದೆ. ಜಾತಿ, ಹಣ ಹಾಗೂ ತೋಳ್ಬಲದ ಕೈ ಮೇಲಾಗಿದ್ದು, ಎಲ್ಲೆಲ್ಲೂ ಝಣ ಝಣ ಕಾಂಚಾಣದ್ದೇ ಸದ್ದು.

ಕ್ಷೇತ್ರದಲ್ಲಿ ಆರಂಭಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಪಕ್ಷೇತರರ ಪಾರುಪತ್ಯವಿತ್ತು. ತುರ್ತು ಪರಿಸ್ಥಿತಿಯ ನಂತರ ರಾಜಕೀಯ ಚಿತ್ರಣ ಬದಲಾಯಿತು. ಕಾಂಗ್ರೆಸ್‌ ವರ್ಚಸ್ಸು ಕುಗ್ಗಿ ಜನತಾ ಪರಿವಾರ (ಜನತಾ ಪಕ್ಷ, ಜನತಾ ದಳ ಹಾಗೂ ಸಂಯುಕ್ತ ಜನತಾ ದಳ) ಮುನ್ನೆಲೆಗೆ ಬಂದಿತು. ಬಿಜೆಪಿಗೆ ಈವರೆಗೂ ಜಯದ ಖಾತೆ ತೆರೆಯಲು ಸಾಧ್ಯವಾಗಿಲ್ಲ.

ಒಕ್ಕಲಿಗ ಸಮುದಾಯವು ರಾಜಕೀಯವಾಗಿ ಹೆಚ್ಚು ಪ್ರಾಬಲ್ಯ ಹೊಂದಿದೆ. 1952ರಿಂದ 1978ರ ಅವಧಿಯಲ್ಲಿ ನಡೆದ ಆರು ಚುನಾವಣೆಗಳಲ್ಲಿ ಕಾಂಗ್ರೆಸ್‌ ಹಾಗೂ ಪಕ್ಷೇತರರಿಗೆ ತಲಾ ಮೂರು ಬಾರಿ ಜಯದ ಮಾಲೆ ಒಲಿದಿತ್ತು.

1962ರ ಚುನಾವಣೆವರೆಗೂ ತಾಲ್ಲೂಕಿನ ವೇಮಗಲ್‌ ಭಾಗವು ಕ್ಷೇತ್ರದ ವ್ಯಾಪ್ತಿಯಲ್ಲೇ ಇತ್ತು. 1967ರಲ್ಲಿ ವೇಮಗಲ್‌ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಯಿತು. 1983 ಮತ್ತು 1985ರ ಚುನಾವಣೆಗಳಲ್ಲಿ ಜನತಾ ಪಕ್ಷದ ಕೆ.ಆರ್‌.ಶ್ರೀನಿವಾಸಯ್ಯ ಸತತ ಎರಡು ಬಾರಿ ಗೆಲುವು ಸಾಧಿಸುವುದರೊಂದಿಗೆ ಕೋಲಾರ ಕ್ಷೇತ್ರದಲ್ಲಿ ಜನತಾ ಪರಿವಾರದ ಶಕೆ ಆರಂಭವಾಯಿತು.

ಹ್ಯಾಟ್ರಿಕ್‌ ಸಾಧನೆ: 1994ರಿಂದ 2004ರ ಅವಧಿಯಲ್ಲಿ ನಡೆದ ಮೂರೂ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ  ಕೆ.ಶ್ರೀನಿವಾಸಗೌಡ ಹ್ಯಾಟ್ರಿಕ್‌ ಸಾಧನೆ ಮಾಡಿದರು. ಅವರು 1994ರಲ್ಲಿ ಜನತಾ ದಳದಿಂದ, 1999ರಲ್ಲಿ ಸಂಯುಕ್ತ ಜನತಾ ದಳದಿಂದ (ಜೆಡಿಯು) ಹಾಗೂ 2004ರಲ್ಲಿ ಕಾಂಗ್ರೆಸ್‌ ಪಾಳಯದಿಂದ ಅಖಾಡಕ್ಕೆ ಇಳಿದಿದ್ದರು. ಶ್ರೀನಿವಾಸಗೌಡರು ಪಕ್ಷ ಬದಲಿಸಿದರೂ ಮತದಾರರ ನಿಷ್ಠೆ ಬದಲಾಗಲಿಲ್ಲ.

ಪಕ್ಷೇತರರ ಯುಗ: 1967ರ ನಂತರ ನಾಲ್ಕು ದಶಕಗಳ ಕಾಲ ಕ್ಷೇತ್ರದಲ್ಲಿ ಪಕ್ಷೇತರರು ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. 2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ ವೇಮಗಲ್‌ ಭಾಗವನ್ನು ಮತ್ತೆ ಕ್ಷೇತ್ರದ ವ್ಯಾಪ್ತಿಗೆ ಸೇರಿಸಲಾಯಿತು. ಆಗ ಕ್ಷೇತ್ರಕ್ಕೆ ವಲಸೆ ಬಂದ ವರ್ತೂರು ಪ್ರಕಾಶ್‌ ಪಕ್ಷೇತರರಾಗಿ ಕಣಕ್ಕಿಳಿದು ಕಾಂಗ್ರೆಸ್‌ ಪಾಳಯದ ಕೆ.ಶ್ರೀನಿವಾಸಗೌಡರ ವಿರುದ್ಧ ಜಯ ಗಳಿಸಿದರು. ಆ ಮೂಲಕ ಕ್ಷೇತ್ರದಲ್ಲಿ ಪಕ್ಷೇತರರ ಯುಗ ಪುನರಾರಂಭವಾಯಿತು. ವರ್ತೂರು ಪ್ರಕಾಶ್‌ 2010ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಜವಳಿ ಖಾತೆ ಸಚಿವರಾದರು.

ಶ್ರೀನಿವಾಸಗೌಡರು 2013ರ ಚುನಾವಣೆ ವೇಳೆ ಕಾಂಗ್ರೆಸ್‌ ತೊರೆದು ಜೆಡಿಎಸ್‌ ತೆಕ್ಕೆಗೆ ಜಾರಿದರೂ ವಿಜಯಲಕ್ಷ್ಮಿ ಒಲಿಯಲಿಲ್ಲ. ಮತ್ತೊಮ್ಮೆ ಪಕ್ಷೇತರರಾಗಿ ಅದೃಷ್ಟ ಪರೀಕ್ಷೆಗಿಳಿದ ವರ್ತೂರು ಪ್ರಕಾಶ್‌ ಗೆಲುವು ಸಾಧಿಸಿದರು.

ಅಭಿವೃದ್ಧಿ ಕುಂಠಿತ: ‘ವರ್ತೂರು ಪ್ರಕಾಶ್‌ ಮೊದಲ ಬಾರಿ ಶಾಸಕರಾದ ಅವಧಿಯಲ್ಲಿ ಕ್ಷೇತ್ರದಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಆಗ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆದವು. ಆದರೆ, ಎರಡನೇ ಬಾರಿ ಶಾಸಕರಾದಾಗ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಮತದಾರರು ಹೇಳುತ್ತಾರೆ.

ದಲಿತ ಕಾಲೊನಿಗಳಲ್ಲಿ ರಸ್ತೆ ನಿರ್ಮಾಣ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಸರ್ಕಾರಿ ಶಾಲಾ ಕಟ್ಟಡಗಳ ದುರಸ್ತಿಯಂತಹ ಸಣ್ಣಪುಟ್ಟ ಅಭಿವೃದ್ಧಿ ಕೆಲಸಗಳನ್ನು ಹೊರತುಪಡಿಸಿದರೆ ಗಮನಾರ್ಹ ಕೆಲಸಗಳು ಆಗಿಲ್ಲ. ಕ್ಷೇತ್ರದ ವಿಚಾರವಾಗಿ ಶಾಸಕರು ಸದನದಲ್ಲಿ ಧ್ವನಿ ಎತ್ತಿದ್ದು ಸಹ ಕಡಿಮೆ.

ಸತತ ಬರ ಪರಿಸ್ಥಿತಿಯಿಂದ ಎದುರಾದ ಕುಡಿಯುವ ನೀರಿನ ಸಮಸ್ಯೆಯ ಪರಿಹಾರಕ್ಕಾಗಿ ಶಾಸಕರ ನಿಧಿಯಿಂದ ಸುಮಾರು 1,200 ಕೊಳವೆ ಬಾವಿಗಳನ್ನು ಕೊರೆಸಿದ್ದು ಹಾಗೂ ಖಾಸಗಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಿಸಿದ್ದೇ ಪ್ರಮುಖ ಸಾಧನೆಗಳು.

ಹಳಸಿದ ಸಂಬಂಧ: ಕ್ಷೇತ್ರದಲ್ಲಿ ಒಂದು ದಶಕದಲ್ಲಿ ರಾಜಕೀಯವಾಗಿ ಸಾಕಷ್ಟು ಬದಲಾವಣೆಯ ನೀರು ಹರಿದಿದೆ. ಮತದಾರರು ಮತ್ತೊಂದು ಚುನಾವಣೆಗೆ ಮುಖಾಮುಖಿಯಾಗಿದ್ದಾರೆ. ‘ಕೈ’ ಪಾಳಯ ಸೇರುವ ಯತ್ನದಲ್ಲಿ ವಿಫಲರಾಗಿ ‘ನಮ್ಮ ಕಾಂಗ್ರೆಸ್‌’ ಪಕ್ಷ ಸ್ಥಾಪಿಸಿರುವ ವರ್ತೂರು ಪ್ರಕಾಶ್‌ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಕುರುಬ ಸಮುದಾಯದ ಅವರು ಅದೇ ಸಮುದಾಯಕ್ಕೆ ಸೇರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಹಿಂದೆ ಪರಮಾಪ್ತರಾಗಿದ್ದರು. ಈಗ ಇಬ್ಬರ ಸಂಬಂಧ ಹಳಸಿದ್ದು, ಸಿದ್ದರಾಮಯ್ಯ ವಿರುದ್ಧ ವರ್ತೂರು ಪ್ರಕಾಶ್‌ ನಿರಂತರ ವಾಗ್ದಾಳಿ ನಡೆಸುತ್ತಿದ್ದಾರೆ. ತಮ್ಮ ವಿರುದ್ಧ ತೊಡೆ ತಟ್ಟಿರುವ ವರ್ತೂರು ಪ್ರಕಾಶ್‌ಗೆ ಸೋಲಿನ ರುಚಿ ತೋರಿಸಬೇಕೆಂಬ ಹಟಕ್ಕೆ ಬಿದ್ದಿರುವ ಸಿದ್ದರಾಮಯ್ಯ, ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್‌ನಿಂದ ಕುರುಬ ಸಮುದಾಯದ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಬಗ್ಗೆ ಚರ್ಚೆ ನಡೆದಿದೆ.

ಗೌಡರಿಗೆ ‘ಕೈ’ ಗಾಳ?: ಜೆಡಿಎಸ್‌ ಪಾಳಯದಲ್ಲಿ ಶ್ರೀನಿವಾಸಗೌಡರು ಪ್ರಬಲ ಆಕಾಂಕ್ಷಿಯಾಗಿದ್ದು, ಪಕ್ಷದಲ್ಲಿನ ಕೆಲ ಸ್ಥಳೀಯ ಮುಖಂಡರು ಅವರಿಗೆ ಟಿಕೆಟ್‌ ತಪ್ಪಿಸಲು ಲಾಬಿ ನಡೆಸಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಶ್ರೀನಿವಾಸಗೌಡರ ಹೆಸರು ಘೋಷಣೆಯಾಗಿಲ್ಲ. ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಅವರು ‘ಕಾಂಗ್ರೆಸ್‌ ದೋಣಿ’ಯಲ್ಲಿ ಒಂದು ಕಾಲಿಟ್ಟಿದ್ದಾರೆ ಎಂಬ ಗುಸುಗುಸು ಕೇಳಿ ಬರುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಅವರಿಗೆ ಆಪ್ತರಾಗಿರುವ ಅವರನ್ನು ಕಾಂಗ್ರೆಸ್‌ಗೆ ಸೆಳೆಯುವ ಪ್ರಯತ್ನ ನಡೆದಿದೆ. ಕಾದು ನೋಡುವ ತಂತ್ರ ಅನುಸರಿಸುತ್ತಿರುವ ಶ್ರೀನಿವಾಸಗೌಡ ಜೆಡಿಎಸ್‌ನಲ್ಲಿ ಟಿಕೆಟ್‌ ಕೈತಪ್ಪಿದರೆ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ.

ಬಿಜೆಪಿ ಹಿಂದಿನ ಚುನಾವಣೆಗಳಲ್ಲಿ ಹೊರಗಿನ ಅಭ್ಯರ್ಥಿಗಳಿಗೆ ಮಣೆ ಹಾಕಿತ್ತು. ಹೀಗಾಗಿ, ಈ ಬಾರಿ ಸ್ಥಳೀಯರಿಗೇ ಟಿಕೆಟ್‌ ಕೊಡಬೇಕೆಂಬ ಕೂಗು ಕಮಲ ಪಾಳಯದಲ್ಲಿ ಬಲವಾಗಿದೆ. ರಾಜ್ಯ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಓಂಶಕ್ತಿ ಚಲಪತಿ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟರೆಡ್ಡಿ ಹಾಗೂ ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಮತ್ತೊಂದೆಡೆ, ಚಿತ್ರನಟ ಸಾಯಿಕುಮಾರ್‌ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಲಾಬಿ ನಡೆಸಿದ್ದಾರೆ.

ಕಾಂಗ್ರೆಸ್‌ ಪಾಳಯಕ್ಕೆ ಬಹುತೇಕ ಚುನಾವಣೆಗಳಲ್ಲಿ ಆಂತರಿಕ ಬೇಗುದಿಯೇ ಮುಳುವಾಗಿದೆ. ಸ್ವಪಕ್ಷೀಯರೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿ ಎದುರಾಳಿ ಅಭ್ಯರ್ಥಿಗಳು ಗೆಲ್ಲುವಂತೆ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಸದ್ಯ ಪಕ್ಷದಿಂದ ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗಿರುವ ಹಲವು ಸದಸ್ಯರು ವರ್ತೂರು ಪ್ರಕಾಶ್‌ ಬಣದಲ್ಲಿ ಗುರುತಿಸಿಕೊಂಡಿದ್ದು, ಚುನಾವಣೆ ವೇಳೆಗೆ ಆಂತರಿಕ ಕಲಹ ತಾರಕಕ್ಕೇರುವ ಲಕ್ಷಣ ಗೋಚರಿಸುತ್ತಿದೆ.

***

ನಾನು ಎರಡು ಬಾರಿ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದರೂ ಸರ್ಕಾರದ ಮೇಲೆ ಒತ್ತಡ ತಂದು ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಕ್ಷೇತ್ರದ ಅತಿ ದೊಡ್ಡ ಸವಾಲುಗಳು. ಸತತ ಬರ ಪರಿಸ್ಥಿತಿ ನಡುವೆಯೂ ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಿ ನೀರಿನ ಸಮಸ್ಯೆಯ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಲಭ್ಯ ಆರ್ಥಿಕ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಜನರ ಮೂಲಸೌಕರ್ಯ ಬೇಡಿಕೆ ಈಡೇರಿಸಿದ್ದೇನೆ.

ವರ್ತೂರು ಪ್ರಕಾಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT