ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈಪ್‌ಲೈನ್‌ ಅನಿಲ ಎಷ್ಟು ಸುರಕ್ಷಿತ? ತಜ್ಞರು ಏನೆನ್ನುತ್ತಾರೆ? ಇಲ್ಲಿದೆ ವಿವರ

ಎಲ್‌ಪಿಜಿ ಸಿಲಿಂಡರ್‌ಗಿಂತ ಅಪಾಯ ಕಡಿಮೆ; ಎಚ್ಚರ ಅಗತ್ಯ
Last Updated 2 ಫೆಬ್ರುವರಿ 2022, 19:30 IST
ಅಕ್ಷರ ಗಾತ್ರ

ಮೈಸೂರು:‘ಎಲ್‌ಪಿಜಿ ಸಿಲಿಂಡರ್‌ಗಿಂತಲೂ ಪೈಪ್‌ಲೈನ್‌ ಅನಿಲವು ಕಡಿಮೆ ಅಪಾಯಕಾರಿ. ಆದರೆ ಸುರಕ್ಷತಾ ಕ್ರಮಗಳನ್ನು ಎರಡೂ ಸಂದರ್ಭಗಳಲ್ಲಿ ಕೈಗೊಳ್ಳಲೇಬೇಕು’ ಎನ್ನುತ್ತಾರೆ ತಜ್ಞರು.

ಎಲ್‌ಪಿಜಿ ಗಾಳಿಗಿಂತ ಭಾರ. ಸಿಲಿಂಡರ್‌ನಿಂದ ಸೋರಿಕೆಯಾದರೆ ವಾತಾವರಣದಲ್ಲೆ ಹೆಚ್ಚು ಕಾಲ ಇದ್ದು, ಬೆಂಕಿ ಹರಡುವ ಸಾಧ್ಯತೆ ಹೆಚ್ಚು. ಆದರೆ, ನೈಸರ್ಗಿಕ ಅನಿಲವು ಗಾಳಿಗಿಂತ ಹಗುರ. ಹೀಗಾಗಿ ಸೋರಿಕೆಯಾಗುತ್ತಿದ್ದಂತೆಯೆ ಗಾಳಿಯಲ್ಲಿ ವೇಗವಾಗಿ ಮೇಲಕ್ಕೆ ಹೋಗುತ್ತದೆ. ಒಂದು ವೇಳೆ ಬೆಂಕಿ ಅವಘಡವಾದರೂ ಸಿಲಿಂಡರ್‌ ಸ್ಫೋಟದಂತಹ ಭಾರಿ ಅನಾಹುತವೇನೂ ನಡೆಯುವುದಿಲ್ಲ.

‘ಮೈಸೂರಿಗಿಂತಲೂ ತೀರಾ ಚಿಕ್ಕದಾದ ರಸ್ತೆಗಳು, ಓಣಿಗಳಿರುವ ಮುಂಬೈ ಹಾಗೂ ದೆಹಲಿಯಂತಹ ಮಹಾನಗರಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಸಂಪರ್ಕಗಳನ್ನು ನೀಡಲಾಗಿದೆ. ಎಲ್ಲೂ ಸಿಲಿಂಡರ್ ಸ್ಫೋಟದಂತಹ ಅನಾಹುತಗಳು ನಡೆದಿಲ್ಲ’ ಎಂದು ಯೋಜನೆಯನ್ನು ಅನುಷ್ಠಾನಗೊಳಿಸುತ್ತಿರುವ ಅಟ್ಲಾಂಟ ಗಲ್ಫ್ ಮತ್ತು ಫೆಸಿಫಿಕ್ (ಎಜಿ ಅಂಡ್ ಪಿ) ಕಂಪನಿಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ದೆಹಲಿಯಲ್ಲಿ ಬಸ್‌ಗಳಿಗೂ ಇದೇ ಅನಿಲ ಬಳಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇದು ಪೆಟ್ರೋಲ್, ಡಿಸೆಲ್, ಎಲ್‌ಪಿಜಿಗಿಂತ ಹೆಚ್ಚು ಸುರಕ್ಷಿತ ಎಂಬುದರಲ್ಲಿ ಯಾವುದೇ ಅನುಮಾನ ಇಲ್ಲ’ ಎಂದು ಪ್ರತಿಪಾದಿಸಿದರು.

ಕೊಳವೆ ಹೇಗೆ ಅಳವಡಿಸುತ್ತಾರೆ?

ಹೆಬ್ಬಾಳದ ಮುಖ್ಯ ಘಟಕದಿಂದ ಉಕ್ಕಿನ ಕೊಳವೆಗಳ ಮೂಲಕ ನೈಸರ್ಗಿಕ ಅನಿಲವನ್ನು ನಗರದೊಳಗೆ ತರಲಾಗುತ್ತದೆ. ನಗರದ ರಸ್ತೆಗಳಲ್ಲಿ ಹೆಚ್ಚು ಸುರಕ್ಷಿತ ಎನಿಸುವ ಮೀಡಿಯಂ ಡೆನ್ಸಿಟಿ ಪಾಲೇಥಿಲೇನ್ (ಎಂಡಿಪಿ- ಮಧ್ಯಮ ದರ್ಜೆಯ ಪ್ಲಾಸ್ಟಿಕ್‌ ಕೊಳವೆ) ಮೂಲಕ ಸರಬರಾಜು ಮಾಡಲಾಗುತ್ತದೆ. ಪ್ರತಿ ಮನೆಗೂ ರೆಗ್ಯೂಲೇಟರ್‌ ಇದ್ದು, ಇಲ್ಲಿಂದ ತೀರಾ ಕಡಿಮೆ ಒತ್ತಡದಲ್ಲಿ ಅನಿಲವು ಮನೆಯನ್ನು ಕೊಳವೆ ಮೂಲಕ ಪ್ರವೇಶಿಸುತ್ತದೆ.

ಎಲ್‌ಪಿಜಿಗೆ ಹೋಲಿಸಿದರೆ ಕೊಳವೆಯಲ್ಲಿರುವ ಒತ್ತಡ ತೀರಾ ಕಡಿಮೆ ಇರುತ್ತದೆ. ಹಾಗಾಗಿ, ಸ್ಫೋಟಗೊಳ್ಳುವ ಸಾಧ್ಯತೆ ತೀರಾ ಕಡಿಮೆ. ಜತೆಗೆ, ಕನಿಷ್ಠ 1 ಕಿ.ಮೀನಿಂದ 3 ಕಿ.ಮೀ ವ್ಯಾಪ್ತಿಯಲ್ಲಿ ವಾಲ್ವ್‌ಗಳಿದ್ದು, ಎಲ್ಲಿ ಕೊಳವೆಗೆ ಧಕ್ಕೆಯಾಗಿ ಸೋರಿಕೆಯಾಗುತ್ತದೆಯೋ ಅಂತಹ ಕಡೆ ಸುಲಭವಾಗಿ ಅನಿಲ ಪೂರೈಕೆಯನ್ನು ಸ್ಥಗಿತಗೊಳಿಸಬಹುದು.

ಅಗೆಯುವುದು ಹೇಗೆ?

ಮೊದಲು 20ರಿಂದ 25 ಮೀಟರ್‌ ಆಳದವರೆಗೂ ಅಗೆದು ಅಲ್ಲಿರುವ ಎಲ್ಲ ಕೊಳವೆಗಳನ್ನು ಪರಿಶೀಲಿಸಲಾಗುತ್ತದೆ. ಬಳಿಕ ನೆಲಮಟ್ಟದಿಂದ 1.1 ಮೀಟರ್‌ ಆಳದಲ್ಲಿ ನೈಸರ್ಗಿಕ ಅನಿಲವನ್ನು ಪೂರೈಸುವ ಕೊಳವೆಯನ್ನು ಹೂಳಲಾಗುತ್ತದೆ. ಅದರ ಮೇಲೆ ಮಣ್ಣು ಹಾಕಿ ‘ವಾರ್ನಿಂಗ್ ಮ್ಯಾಟ್‌’ ಹಾಸಲಾಗುತ್ತದೆ. ಆ ಮ್ಯಾಟ್‌ನಲ್ಲಿ ಕಂಪನಿಯ ಹೆಸರು, ಇಲ್ಲಿ ಅಗೆಯಬಾರದು ಎಂಬ ಎಚ್ಚರಿಕೆ ಸಂದೇಶ, ಅಗೆಯಲೇ ಬೇಕಾದರೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಯನ್ನೂ ಹಾಕಲಾಗುತ್ತದೆ. ಗುಂಡಿಯನ್ನು ಸಂಪೂರ್ಣವಾಗಿ ಮುಚ್ಚಿದ ನಂತರ,ಇಲ್ಲಿ ಅಗೆಯುವುದು ಅಪಾಯ ಎಂಬ ಸಂಗತಿ ಮೇಲ್ನೋಟಕ್ಕೇ ತಿಳಿಯುವ ರೀತಿಯಲ್ಲಿ ಹಲವೆಡೆ ಎಚ್ಚರಿಕೆ ಫಲಕಗಳನ್ನು ಹಾಕಲಾಗುತ್ತದೆ.

(ನಾಳಿನ ಸಂಚಿಕೆಯಲ್ಲಿ ‘ಅನಾಹುತ ನಿರ್ವಹಣೆ ಹೇಗೆ’)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT