ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ನಿಷೇಧ

Last Updated 13 ಸೆಪ್ಟೆಂಬರ್ 2019, 14:00 IST
ಅಕ್ಷರ ಗಾತ್ರ

ಮೈಸೂರು:ಇಲ್ಲಿನ ರೈಲು ನಿಲ್ದಾಣದಲ್ಲಿ ಒಂದು ಬಾರಿ ಬಳಸಿ ಬೀಸಾಡುವ ಪ್ಲಾಸ್ಟಿಕ್‌ ಅನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ. ಇದಕ್ಕೆ ಪೂರ್ವಾಭಾವಿಯಾಗಿ ಈಗಾಗಲೇ ಇಲ್ಲಿ ಪ್ಲಾಸ್ಟಿಕ್ ಬಾಟಲ್ ಕ್ರಷಿಂಗ್ ಮಷಿನ್‌ ಇಡಲಾಗಿದೆ. ಜತೆಗೆ, ಪ್ಲಾಸ್ಟಿಕ್‌ ಕವರ್‌ಗಳನ್ನು ತೆಗೆದುಕೊಂಡು ಹೋಗುವವರಿಗೆ ಬಟ್ಟೆ ಬ್ಯಾಗ್‌ಗಳನ್ನು ನೀಡುವ ಯೋಜನೆಗೂ ಚಾಲನೆ ನೀಡಲಿದೆ.

ಪ್ಲಾಸ್ಟಿಕ್‌ ನಿಷೇಧ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲಿ ಪ್ರಸ್ತಾಪಿಸಿದ್ದರು. ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆಯಂದು ದೇಶದಲ್ಲಿ ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ಅನ್ನು ನಿಷೇಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕೆ ಪೂರಕವಾಗಿ ರೈಲ್ವೆ ಇಲಾಖೆ ತನ್ನ ವ್ಯಾಪ್ತಿಯ ನಿಲ್ದಾಣಗಳಲ್ಲಿ ಇಂತಹ ಪ್ಲಾಸ್ಟಿಕ್‌ ಬಳಸದಿರಲು ನಿರ್ಧರಿಸಿದೆ.

ಇದರ ಅಂಗವಾಗಿ ‘ಸ್ವಚ್ಛತಾ ಅಭಿಯಾನ’ವನ್ನು ಸೆ.11ರಿಂದ ಇಲ್ಲಿನ ರೈಲು ವಿಭಾಗೀಯ ಕಚೇರಿಯಲ್ಲಿ ಆರಂಭಿಸಿದೆ. ಅಭಿಯಾನವು ಅ.11ರವರೆಗೂ ಇರಲಿದೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಅಪರ್ಣ ಗರ್ಗ್ ಅವರು ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸ್ವಚ್ಛತೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ, ಇದರ ಮಹತ್ವದ ಕುರಿತು ಹೇಳಿದ್ದಾರೆ. ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಿಂದ ಇರ್ವಿನ್ ರಸ್ತೆಯ ಮೂಲಕ ಮೈಸೂರು ರೈಲು ನಿಲ್ದಾಣದವರೆಗೆ ‘ವಾಕಥಾನ್’ ಸಹ ನಡೆದಿದ್ದು, ಜನರಲ್ಲಿ ಅರಿವು ಮೂಡಿಸುವ ಪ್ರಕ್ರಿಯೆ ಆರಂಭವಾಗಿದೆ.

ಮೊದಲ ಹಂತದಲ್ಲಿ ಜನರಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವುದನ್ನು ಪ್ರಧಾನ ಉದ್ದೇಶವನ್ನಾಗಿ ಹೊಂದಲಾಗಿದೆ. ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ಕವರ್‌ಗಳನ್ನು ಪ್ರಯಾಣಿಕರು ಹಿಡಿದುಕೊಂಡು ಬಂದರೆ ಅವರಿಗೆ ಬಟ್ಟೆ ಬ್ಯಾಗ್ ನೀಡಿ ತಿಳಿ ಹೇಳಲಾಗುತ್ತದೆ. ಮತ್ತೆ ಅವರು ಕವರ್‌ನೊಂದಿಗೆ ನಿಲ್ದಾಣದಲ್ಲಿ ಕಾಣಿಸಿಕೊಂಡರೆ ದಂಡ ವಿಧಿಸುವ ಕುರಿತೂ ಚಿಂತನೆ ನಡೆದಿದೆ.

ಸದ್ಯ, ಪ್ಲಾಸ್ಟಿಕ್ ಬಾಟಲಿ ಬಳಕೆ ಕುರಿತು ನಿಶ್ಚಿತ ತೀರ್ಮಾನವಾಗಿಲ್ಲ. ಒಂದು ಬಾರಿ ಬಳಸುವ ಪ್ಲಾಸ್ಟಿಕ್‌ ಬಾಟಲಿಗಳಿಗೆ ಪರ್ಯಾಯ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ, ಪ್ಲಾಸ್ಟಿಕ್ ಕ್ರಷಿಂಗ್ ಯಂತ್ರವನ್ನು ನಿಲ್ದಾಣದಲ್ಲಿ ಇಡಲಾಗಿದೆ. ನೀರು ಕುಡಿದ ನಂತರ ಬಾಟಲಿಯನ್ನು ಎಲ್ಲೆಂದರಲ್ಲಿ ಎಸೆಯದೇ, ಕಸದ ಡಬ್ಬಿಗೂ ಹಾಕದೇ, ಈ ಯಂತ್ರಕ್ಕೆ ಹಾಕಬೇಕು. ಆಗ ಈ ಪ್ಲಾಸ್ಟಿಕ್‌ ಮರು ಬಳಕೆಯಾಗುವುದಿಲ್ಲ. ನಿಲ್ದಾಣ ಮಾತ್ರವಲ್ಲ ರೈಲ್ವೆ ಇಲಾಖೆಯ ಕಚೇರಿಗಳಲ್ಲೂ ಪ್ಲಾಸ್ಟಿಕ್ ಬಳಸದಿರಲು ನಿರ್ಧರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT