ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನರ್ಹಗೊಂಡಿದ್ದೇನೆ ಎಂದ ಅಧ್ಯಕ್ಷರು!

ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದಲ್ಲಿ ‘ವಿನೋದ’ ಕವಿಗೋಷ್ಠಿ– ನಗೆಬುಗ್ಗೆ ಚಿಮ್ಮಿಸಿದ ಕವಿಗಳು
Last Updated 5 ಅಕ್ಟೋಬರ್ 2019, 9:35 IST
ಅಕ್ಷರ ಗಾತ್ರ

ಮೈಸೂರು: ದಸರಾ ಮಹೋತ್ಸವದ ಪ್ರಯುಕ್ತ, ಶುಕ್ರವಾರ ಇಲ್ಲಿನ ಜಗನ್ಮೋಹನ ಅರಮನೆಯಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದ್ದ ‘ವಿನೋದ ಕವಿಗೋಷ್ಠಿ’, ತಿಳಿಹಾಸ್ಯದ ಹೂರಣದೊಳಗೆ ಪ್ರಸಕ್ತ ವಿದ್ಯಮಾನಗಳಿಗೆ ತುಸು ಖಾರವಾಗಿಯೇ ಪ್ರತಿಕ್ರಿಯಿಸಿತು.

ಭ್ರಷ್ಟಾಚಾರ, ಶಾಸಕರ ಪಕ್ಷಾಂತರದ ವಿಷಯಗಳನ್ನು ವಿನೋದದ ಮೂಲಕವಾಗಿಯೇ ಧ್ವನಿಪೂರ್ಣವಾಗಿ ಕವಿಗಳು ಖಂಡಿಸಿ, ಗಮನ ಸೆಳೆದರು.

ಕವಿ ಸುಬ್ರಾಯ ಚೊಕ್ಕಾಡಿ, ತಮ್ಮ ಅಧ್ಯಕ್ಷೀಯ ಭಾಷಣವನ್ನೂ ಪ್ರಸಕ್ತ ರಾಜಕೀಯ ವಿದ್ಯಮಾನಗಳ ವಿಡಂಬನೆಗೇ ಮೀಸಲಿರಿಸಿದರು.

‘ನಾನು ಪೂರ್ವಾಶ್ರಮದಲ್ಲಿ ಯಾವಾಗಲೋ ಬರೆದ ಹಾಸ್ಯಕವನಗಳನ್ನು, ಜಾರಿ ನಿರ್ದೇಶನಾಲಯ (ಇ.ಡಿ)ದವರಂತೆ ಡುಂಡಿರಾಜ್ ಹುಡುಕಿ ತೆಗೆದು ನನ್ನ ಮುಂದಿರಿಸಿ, ನೀವು ಹಾಸ್ಯ ಸಾಹಿತಿ ಎಂದು ಒಪ್ಪಲೇಬೇಕೆಂದು ತಾಕೀತು ಮಾಡಿದರು. ಅವರ ವಾದಕ್ಕೆ ಒಪ್ಪಿ ಈಗ ಅಧ್ಯಕ್ಷತೆ ವಹಿಸಿಕೊಂಡೆ’ ಎಂದು ಹೇಳುವ ಮೂಲಕ ನಗೆಯುಕ್ಕಿಸಿದರು.

‘ಮೊದಲು ಹಾಸ್ಯ ಸಾಹಿತಿಯಾಗಿದ್ದ ನಾನು ನಂತರ ಗಂಭೀರ ಕವನಗಳನ್ನು ಬರೆದೆ. ಈಗ ಮತ್ತೆ ಹಾಸ್ಯ ಸಾಹಿತಿಯಾಗಿದ್ದೇನೆ. ಒಂದು ಕಡೆ ಹಾಸ್ಯ ಮತ್ತೊಂದು ಕಡೆ ಗಂಭೀರ ಸಾಹಿತ್ಯಕ್ಕೆ ಅರ್ಹವಾಗದೇ ಅನರ್ಹಗೊಂಡಿದ್ದೇನೆ’ ಎಂದು ಹೇಳುವ ಮೂಲಕ ನಗೆಯ ಬುಗ್ಗೆಯನ್ನೇ ಚಿಮ್ಮಿಸಿದರು.

‘ಸ್ವಲ್ಪವೂ ಸುಳಿವು ನೀಡದೇ ಐನೂರು ಸಾವಿರದ ನೋಟು ರದ್ದು ಮಾಡಿದರು ಮೋದಿ ಗುಟ್ಟು ರಟ್ಟಾಗದಿರಲು ಕಾರಣ ಅವರ ಮನೆಯಲ್ಲಿ ಇಲ್ಲ ಮಡದಿ’ ಎಂಬ ಹನಿಗವನವನ್ನು ಡುಂಡಿರಾಜ್ ಓದುವ ಮೂಲಕ ತಿಳಿ ನಗೆ ಹೊಮ್ಮಿಸಿದರು.

‘ಅಂದಿನ ರಾಜರು ನಮ್ಮನ್ನು ಪ್ರೀತಿಯಿಂದ ಆಳಿದ ಒಡೆಯರ್ ಒಡೆಯರ್ ಒಡೆಯರ್ ಇಂದಿನ ನಾಯಕರು ದೇಶವನ್ನೇ ಒಡೆವರ್, ಪಕ್ಷವನ್ನೇ ಒಡೆವರ್, ರಾಜ್ಯವನ್ನೇ ಒಡೆವರ್’ ಎಂದು ಹಾಸ್ಯ ಸಾಹಿತಿ ಎನ್.ರಾಮನಾಥ್ ತಮ್ಮ ಹನಿಗವನದ ಮೂಲಕ ಪ್ರಸಕ್ತ ರಾಜಕೀಯ ನಾಯಕರಿಗೆ ಬಿಸಿ ಮುಟ್ಟಿಸಿದರು.

ದ.ರಾ.ಬೇಂದ್ರೆಯವರ ‘ಕುಣಿಯೋಣು ಬಾರಾ’ ಪದ್ಯದ ಧಾಟಿಯಲ್ಲಿಯೇ ಡುಂಡಿರಾಜ್ ಬರೆದ ‘ನುಂಗೋಣು ಬಾರಾ ನುಂಗೋಣು ಬಾ’ ಪದ್ಯವನ್ನು ಬಿ.ವಿ.ಪ್ರದೀಪ್ ಮತ್ತು ಬಿ.ವಿ.ಪ್ರವೀಣ್ ಸೋದರರು ಹಾಡುವ ಮೂಲಕ ಭ್ರಷ್ಟರನ್ನು ತಮಾಷೆಯಾಗಿಯೇ ತರಾಟೆಗೆ ತೆಗೆದುಕೊಂಡರು.

ಕವಿಗೋಷ್ಠಿ ಉದ್ಘಾಟಿಸಿದ ಅ.ರಾ.ಮಿತ್ರ, ‘ಸುಂದರಿ ಸುಮಧುರೆ ಶಿಕ್ಷಿತೆ ಸಂಪನ್ನೆ ಎಂದರೆ ಅವಳೇ ಪರಪತ್ನಿ’ ಎಂಬಂತಹ ಸ್ಥಿತಿಯಲ್ಲಿ ಸಮಾಜ ಇದೆ. ಯಾರಿಗೂ ತಮ್ಮಲ್ಲಿರುವ ವಸ್ತುವಿನ ಮಹತ್ವ ತಿಳಿಯದೇ ಪರರ ವಸ್ತುಗಳತ್ತಲೇ ದೃಷ್ಟಿಸುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT