ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡರಿಗೆ ಬಿಸಿ ಮುಟ್ಟಿಸಿದ ಪೊಲೀಸರು

6 ಮಂದಿ ಕಿಡಿಗೇಡಿಗಳನ್ನು ಬಂಧಿಸಿದ ಕೆ.ಆರ್.ಉಪವಿಭಾಗದ ಪೊಲೀಸರು
Last Updated 25 ಮೇ 2019, 19:50 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಪುಂಡರ ಕಾಟಕ್ಕೆ ಕಡಿವಾಣ ಹಾಕಲು ಪೊಲೀಸರ ನಿರ್ಧರಿಸಿದ್ದು, ಕೆ.ಆರ್.ಉಪವಿಭಾಗದ ಪೊಲೀಸರು ಒಟ್ಟು 6 ಮಂದಿ ಕಿಡಿಗೇಡಿಗಳ ಹೆಡೆಮುರಿ ಕಟ್ಟಿದ್ದಾರೆ.

ಶುಕ್ರವಾರ ರಾತ್ರಿ 11.20ರಲ್ಲಿ ಕುವೆಂಪುನಗರದ ಜ್ಞಾನಗಂಗಾ ಶಾಲೆಯ ಸಮೀಪ ಸಂದೀಪ್‌ ಎಂಬ ವ್ಯಕ್ತಿಯ ಮೇಲೆ ಮದ್ಯ ಸೇವಿಸಿದ್ದ ಮೂವರು ಹಲ್ಲೆ ನಡೆಸಿದ್ದರು. ಪ್ರಕರಣ ದಾಖಲಿಸಿಕೊಳ್ಳುತ್ತಲೇ ಚುರುಕಿನ ಕಾರ್ಯಾಚರಣೆ ನಡೆಸಿದ ಇನ್‌ಸ್ಪೆಕ್ಟರ್ ರಾಜು ನೇತೃತ್ವದ ಪೊಲೀಸರ ತಂಡವು ಜಯನಗರದ ನಿವಾಸಿಗಳಾದ ವಿನೋದ್ (22), ವೆಂಕಟೇಶ್ (26) ಹಾಗೂ ಚಿಕ್ಕಹರದನಹಳ್ಳಿಯ ಚಂದ್ರಶೇಖರ್ (25) ಎಂಬುವವರನ್ನು ಬಂಧಿಸಿದರು.

ಕಳೆದ ಭಾನುವಾರ ಇಲ್ಲಿನ ಶಾಂತಲಾ ಸಿನಿಮಾಮಂದಿರ ಸಮೀಪದ ತಾತಯ್ಯ ವೃತ್ತದಲ್ಲಿ ಬೆಂಗಳೂರಿನ ಪ್ರವಾಸಿಗರ ಮೇಲೆ ಹಲ್ಲೆ ಮದ್ಯ ಸೇವಿಸಿ ನಡೆಸಿದ್ದ ನಾಲ್ವರನ್ನು ಕೆ.ಆರ್.ಠಾಣೆ ಪೊಲೀಸರು ಬಂಧಿಸಿದ್ದಾರೆ.

ಈ ಹಿಂದೆ ಚಂದು ಎಂಬಾತನನ್ನು ಬಂಧಿಸಿದ್ದ ಪೊಲೀಸರು ಶನಿವಾರ ಗೊಲ್ಲಗೇರಿಯ ನಿವಾಸಿ ಮನೋಜ್ (22), ಇಟ್ಟಿಗೆಗೂಡಿನ ನಿವಾಸಿ ಹರ್ಷಿತಾಗೌಡ (25) ಹಾಗೂ ವೀಣೆಶೇಷಣ್ಣ ರಸ್ತೆಯ ನಿವಾಸಿ ಮಹೇಶ್‌ಕುಮಾರ್‌ (24) ಅವರನ್ನು ಬಂಧಿಸಿದ್ದಾರೆ.

ಪುಂಡರನ್ನು ಬಗ್ಗು ಬಡಿಯುವಂತೆ ಕೆ.ಆರ್.ಉಪವಿಭಾಗದ ಎಸಿಪಿ ಗೋಪಾಲಕೃಷ್ಣ ನಾಯಕ ಅವರು ಸೂಚನೆ ನೀಡಿದ್ದರು. ಕೆ.ಆರ್.ಠಾಣೆಯ ಇನ್‌ಸ್ಪೆಕ್ಟರ್‌ ವಿ.ನಾರಾಯಣಸ್ವಾಮಿ, ಪಿಎಸ್‌ಐ ಸುನಿಲ್, ಸಿಬ್ಬಂದಿಯಾದ ರಮೇಶ್, ಪ್ರಸನ್ನಕುಮಾರ್‌ಭರತ್‌ ಹಾಗೂ ಶರತ್‌ ಕಾರ್ಯಾಚರಣೆ ತಂಡದಲ್ಲಿದ್ದರು.

ಶನಿವಾರಷ್ಟೇ ‘ಪ್ರಜಾವಾಣಿ’ಯು ‘ನಗರದಲ್ಲಿ ಹೆಚ್ಚುತ್ತಿದೆ ಪುಂಡರ ಹಾವಳಿ’ ವಿಶೇಷ ವರದಿ ಪ್ರಕಟಿಸಿತ್ತು.

ಬಸ್‌ನಿಲ್ದಾಣದಲ್ಲೇ ಬಸ್‌ ಡಿಕ್ಕಿ!

ಮೈಸೂರು: ಬಸ್‌ನಿಲ್ದಾಣದಲ್ಲೇ ಬಸ್‌ ಡಿಕ್ಕಿಯಾಗಿ ನಂಜನಗೂಡು ತಾಲ್ಲೂಕು ಕೌಲಂದೆ ನಿವಾಸಿ ನಾಗಪ್ಪಚಾರ್ (50) ಎಂಬುವವರು ಮೃತಪಟ್ಟಿದ್ದಾರೆ.

ಇಲ್ಲಿನ ಗ್ರಾಮಾಂತರ (ಸಬ್‌ಹರ್ಬನ್) ಬಸ್‌ನಿಲ್ದಾಣದ ಆವರಣದಲ್ಲಿರುವ ನಂದಿನಿ ಪಾರ್ಲರ್ ಕಡೆಯಿಂದ ನಂಜನಗೂಡು ಪ್ಲಾಟ್ ಫಾರಂ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ಇವರಿಗೆ ಬಸ್‌ವೊಂದು ಡಿಕ್ಕಿ ಹೊಡೆದಿದೆ. ಕೆಳಗೆ ಬಿದ್ದ ಇವರ ಕಾಲಿನ ಮೇಲೆ ಬಸ್ಸಿನ ಚಕ್ರ ಹರಿದು ತೀವ್ರವಾಗಿ ಗಾಯಗೊಂಡರು. ಇವರನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಇವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದೇವರಾಜ ಸಂಚಾರ ಠಾಣೆಯಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT