ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಪೊಲೀಸ್ ಠಾಣೆ, ಗ್ರಾ.ಪಂ.ಕಚೇರಿ ಸೀಲ್‌ಡೌನ್‌

ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಕೊರೊನಾ ವೈರಸ್ ಸೋಂಕಿನ ಅಬ್ಬರ; ಬನ್ನೂರು ಆಸ್ಪತ್ರೆ 2 ದಿನ ಬಂದ್
Last Updated 3 ಜುಲೈ 2020, 16:35 IST
ಅಕ್ಷರ ಗಾತ್ರ

ಮೈಸೂರು/ಹುಣಸೂರು: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಕೊರೊನಾ ವೈರಸ್ ಸೋಂಕು ಹರಡುವಿಕೆ ಹೆಚ್ಚಿದ್ದು, ಪೀಡಿತರು ಪತ್ತೆಯಾದ ಪ್ರದೇಶಗಳನ್ನು ಸೀಲ್‌ಡೌನ್‌ ಮಾಡಲಾಗುತ್ತಿದೆ.

ಪೊಲೀಸರು, ಅಧಿಕಾರಿಗಳು ಕೋವಿಡ್–19 ರೋಗಿಗಳಾಗುತ್ತಿದ್ದು, ಅವರು ಕಾರ್ಯ ನಿರ್ವಹಿಸುವ ಕಚೇರಿಗಳನ್ನು ಸೀಲ್‌ಡೌನ್‌ ಮಾಡಲಾಗಿದೆ.

ಹುಣಸೂರು ತಾಲ್ಲೂಕಿನ ನಾಲ್ಕು ಗ್ರಾಮಗಳಲ್ಲಿ ಕಂಟೈನ್‌ಮೆಂಟ್‌ ಜೋನ್ ಘೋಷಿಸಲಾಗಿದ್ದು, ಶುಕ್ರವಾರ ನಗರದಲ್ಲೂ ನಿಯಂತ್ರಿತ ವಲಯ ನಿರ್ಮಿಸಲಾಗಿದೆ.

ಹುಣಸೂರಿನ ಮಾರುತಿ ಬಡಾವಣೆಯಲ್ಲಿ ವಾಸವಿದ್ದ ರಸ್ತೆ ಸಾರಿಗೆ ನಿಗಮದ ಕಂಡಕ್ಟರ್‌ಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದೆ. ಇವರು ಮೈಸೂರಿನ ಡಿಪೋ–3ನೇ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಮೂಲತಃ ವಿಜಯಪುರ ಜಿಲ್ಲೆಗೆ ಸೇರಿದವರು.

ಗುರುವಾರ ಕರ್ತವ್ಯಕ್ಕೆ ರಜೆ ಹಾಕಿ, ಸ್ವ ಸ್ಥಳಕ್ಕೆ ತೆರಳಿದ್ದಾರೆ. ಸೋಂಕು ದೃಢಪಟ್ಟಿದ್ದರಿಂದ ವಿಜಯಪುರ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಅಲ್ಲಿ ಅವರನ್ನು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ಬಸವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸೀಲ್‌ಡೌನ್: ನಗರದ ಸೆಸ್ಕ್ ಹುಣಸೂರು ವಿಭಾಗೀಯ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಗುರುವಾರ ಕಚೇರಿಗೆ ತುಮಕೂರಿನಿಂದ ಲೆಕ್ಕ ಪರಿಶೋಧಕರು ಭೇಟಿ ನೀಡಿದ್ದರು. ಈ ಅಧಿಕಾರಿಗೆ ಕೊರೊನಾ ಸೋಂಕು ಶುಕ್ರವಾರ ದೃಢಪಟ್ಟಿದ್ದು, ಕಚೇರಿಯಲ್ಲಿ ಇವರ ಸಂಪರ್ಕ ಹೊಂದಿದ್ದ ಸಿಬ್ಬಂದಿಗಳನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಲಾಗಿದೆ.

ಗುರುವಾರ ದಲ್ಲಾಳುಕೊಪ್ಪಲು ಗ್ರಾಮದಲ್ಲಿ ಪತ್ತೆಯಾದ ಕೊರೊನಾ ಸೋಂಕು ಪ್ರಕರಣಕ್ಕೆ ಸಂಬಂಧಿಸಿದಂತೆ, ಶುಕ್ರವಾರ ಪ್ರಾಥಮಿಕ ಆರೋಗ್ಯ ಘಟಕ ಸಿಬ್ಬಂದಿ 17 ಜನರ ಗಂಟಲು ದ್ರವ ಸಂಗ್ರಹಿಸಿ ಕೋವಿಡ್ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಕೇರಳ ವೈದ್ಯರಿಗೆ ಕೊರೊನಾ
ಸರಗೂರು:
ಪಟ್ಟಣದ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಜೂನ್‌ 26ರಂದು ಭೇಟಿ ನೀಡಿದ್ದ ಕೇರಳದ ವೈದ್ಯರೊಬ್ಬರಿಗೆ ಕೋವಿಡ್ ದೃಢಪಟ್ಟಿದೆ.

ಆಸ್ಪತ್ರೆಯ ವಸತಿ ಗೃಹದಲ್ಲೇ ಇವರನ್ನು ಹೋಂ ಕ್ವಾರಂಟೈನ್‌ನಲ್ಲಿಡಲಾಗಿತ್ತು ಎನ್ನಲಾಗಿದೆ.

‘ಕೇರಳದ ವೈದ್ಯರು ನಮ್ಮ ಆಸ್ಪತ್ರೆ ವೈದ್ಯರಲ್ಲ. ನಮ್ಮ ಆಸ್ಪತ್ರೆಗೂ ಇವರಿಗೂ ಸಂಬಂಧವಿಲ್ಲ. ಯಾರೊಬ್ಬರನ್ನು ಇವರು ಪರೀಕ್ಷೆ ಮಾಡಿಲ್ಲ’ ಎಂದು ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಸಿಇಓ ಡಾ.ಕುಮಾರ್ ತಿಳಿಸಿದ್ದಾರೆ.

ಪೊಲೀಸ್‌ ಠಾಣೆ ಸೀಲ್‌ಡೌನ್‌
ಜಯಪುರ:
ಗ್ರಾಮದ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರಿಗೆ ಕೋವಿಡ್ ತಗುಲಿದ್ದು ದೃಢಪಡುತ್ತಿದ್ದಂತೆ, ಗ್ರಾಮ ಪಂಚಾಯಿತಿ ಆಡಳಿತ ಶುಕ್ರವಾರ ಪೊಲೀಸ್‌ ವಸತಿ ಗೃಹಗಳಿಗೆ ಸೋಂಕು ನಿವಾರಕ ಸ್ಯಾನಿಟೈಸರ್ ಸಿಂಪಡಿಸಿತು.

ಠಾಣೆ ಮತ್ತು ಪೊಲೀಸ್ ಸಿಬ್ಬಂದಿ ವಾಸಿಸುತ್ತಿದ್ದ ವಸತಿ ಸಮುಚ್ಚಯ, ರಸ್ತೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ಕಂಟೈನ್‌ಮೆಂಟ್‌ ವಲಯವೆಂದು ಘೋಷಣೆ ಮಾಡಲಾಗಿದೆ ಎಂದು ಜಯಪುರ ಗ್ರಾಮ ಪಂಚಾಯಿತಿ ಪಿಡಿಒ ನರಹರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸಭೆ ಸೇರಿದ ಕಂದಾಯ ಇಲಾಖೆ ಅಧಿಕಾರಿಗಳು, ವೈದ್ಯಾಧಿಕಾರಿಗಳು, ಗ್ರಾಮ ಪಂಚಾಯಿತಿ ಆಡಳಿತ ವರ್ಗವು ಅಗತ್ಯ ಮುನ್ನೆಚ್ಚರಿಕೆ ಕ್ರಮವಾಗಿ ಮುಖ್ಯ ರಸ್ತೆಯಲ್ಲಿರುವ ಅಂಗಡಿ, ಹೋಟೆಲ್ ಮುಚ್ಚಿಸಿತು. ಮಾವಿನಹಳ್ಳಿ ಮುಖ್ಯರಸ್ತೆಯನ್ನು ಸೀಲ್‌ಡೌನ್ ಮಾಡಿ ಜನರ ಓಡಾಟ ನಿರ್ಬಂಧಿಸಲಾಗಿದೆ.

ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 15 ಪೊಲೀಸ್‌ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಹೊಸ ಬಸ್ ನಿಲ್ದಾಣದಲ್ಲಿ ಪೊಲೀಸ್‌ ಹೆಲ್ಪ್‌ ಡೆಸ್ಕ್‌ ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಜಯಪುರ ಹೋಬಳಿ ಉಪತಹಶೀಲ್ದಾರ್ ಎಸ್.ಕೆ.ಕುಬೇರ್ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧಿಕಾರಿಗೆ ಸೋಂಕು
ಬೆಟ್ಟದಪುರ:
ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಶುಕ್ರವಾರ ಕಚೇರಿ ಸೀಲ್‌ಡೌನ್‌ ಮಾಡಲಾಯಿತು.

ಕೆಲ ದಿನಗಳ ಹಿಂದೆ ತಲೆನೋವು, ಜ್ವರ ಕಾಣಿಸಿಕೊಳ್ಳುತ್ತಿದ್ದಂತೆ ಸ್ವಯಂ ಪ್ರೇರಿತವಾಗಿ ಈ ಅಧಿಕಾರಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಗುರುವಾರ ರಾತ್ರಿ ಸೋಂಕು ದೃಢಪಟ್ಟಿರುವುದಾಗಿ ತಿಳಿದು ಬಂದಿದೆ.

ಇವರ ಸಂಪರ್ಕದಲ್ಲಿದ್ದ ಇತರ ಸಿಬ್ಬಂದಿ ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದ್ದು, ಪಂಚಾಯಿತಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸ್ಯಾನಿಟೈಸರ್ ಸಿಂಪಡಿಸಿ ಸೀಲ್‌ಡೌನ್ ಮಾಡಲಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಗ್ರಾಮದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾದ ಬೆನ್ನಲ್ಲೇ, ಸೆಸ್ಕ್ ಮತ್ತು ಪೊಲೀಸ್ ಇಲಾಖೆ, ತುರ್ತು ಸನ್ನಿವೇಶ ಹೊರತುಪಡಿಸಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಮಾರ್ವಾಡಿ ವ್ಯಾಪಾರಿಗಳು ಸ್ವಯಂ ಘೋಷಿತವಾಗಿ ಬೆಳಗ್ಗಿನಿಂದಲೇ ಅಂಗಡಿ ಬಂದ್ ಮಾಡಿಕೊಂಡಿದ್ದರು.

ಸಂದೇಶ ರವಾನೆ: ಕೊರೊನಾ ಸೋಂಕು ದೃಢಪಟ್ಟ ತಕ್ಷಣ ಅಧಿಕಾರಿ, ಸಾಮಾಜಿಕ ಜಾಲತಾಣದಲ್ಲಿ ಗ್ರಾಮದ ಜನತೆಯು ಆತಂಕ ಪಡದೆ ಕನಿಷ್ಠ ಅಂತರ ಕಾಯ್ದುಕೊಂಡು ಸ್ವತಃ ಜಾಗೃತರಾಗಿರಿ ಎಂದು ಸಂದೇಶವನ್ನು ರವಾನಿಸಿದ್ದರು.

ಟಿಎಚ್ಒ ಡಾ.ನಾಗೇಶ್, ಹಿರಿಯ ಆರೋಗ್ಯ ನಿರೀಕ್ಷಕ ಪ್ರಕಾಶ್, ಆರೋಗ್ಯ ಶಿಕ್ಷಣಾಧಿಕಾರಿ ಲತಾ, ವೈದ್ಯಾಧಿಕಾರಿ ರಚನ್ ರಾಜ್, ಕೃಪೇಶ್, ಉಪ ತಹಶೀಲ್ದಾರ್ ಶಶಿಧರ್, ಗ್ರಾಮ ಲೆಕ್ಕಾಧಿಕಾರಿ ಧನಂಜಯ್ ಗ್ರಾಮ ಪಂಚಾಯಿತಿ ಕಚೇರಿಗೆ ಬಳಿಗೆ ಭೇಟಿ ನೀಡಿದ್ದರು.

ಮಾದಿಗಹಳ್ಳಿ: ಮಹಿಳೆಗೆ ಕೋವಿಡ್
ತಿ.ನರಸೀಪುರ/ಬನ್ನೂರು:
ತಾಲ್ಲೂಕಿನ ಮಾದಿಗಹಳ್ಳಿ ಗ್ರಾಮದ 52 ವರ್ಷದ ಮಹಿಳೆಗೆ ಕೋವಿಡ್–19 ದೃಢಪಟ್ಟಿದೆ.

ಯಾವುದೇ ಪ್ರವಾಸ ನಡೆಸದ, ಸೋಂಕಿತರ ಸಂಪರ್ಕವಿಲ್ಲದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ವಾರದ ಹಿಂದೆ ಬೆನ್ನು ನೋವಿನಿಂದ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆಗೆ, ರೋಗ ಲಕ್ಷಣದ ಶಂಕೆಯಿಂದ ಗಂಟಲು ದ್ರವದ ಪರೀಕ್ಷೆ ಮಾಡಿಸಲಾಗಿತ್ತು.

ಸೋಂಕಿತ ಮಹಿಳೆಯ ಪ್ರವಾಸ ಮಾಹಿತಿ ದೊರಕಿಲ್ಲ. ಆದರೂ ಇವರ ಸಂಪರ್ಕದಲ್ಲಿದ್ದವರ ಕ್ವಾರಂಟೈನ್‌ಗೆ ಸೂಚಿಸಿದ್ದು, ಮನೆ ಹೊರ ವಲಯದಲ್ಲಿರುವುದರಿಂದ ಸೀಲ್‌ಡೌನ್‌ಗೆ ಸೂಚಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರವಿಕುಮಾರ್ ತಿಳಿಸಿದ್ದಾರೆ.

ಕೇತುಪುರ ಗ್ರಾಮದ ವೃದ್ಧೆ ಕೋವಿಡ್‌ಗೆ ಬಲಿಯಾಗಿದ್ದು, ಬನ್ನೂರು ಆಸ್ಪತ್ರೆಯಲ್ಲೂ ಇವರು ಚಿಕಿತ್ಸೆ ಪಡೆದಿದ್ದರು. ಆದ್ದರಿಂದ ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT