ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಆಶಯದಂತೆ ಸಾಗುತ್ತಿಲ್ಲ ರಾಜಕಾರಣ: ಪ್ರೊ.ಸೋಮಶೇಖರ್ ವಿಷಾದ

ಸಾವಿತ್ರಿಬಾಯಿ ಫುಲೆ ಉಚಿತ ಸಂಜೆ ಪಾಠ ಶಾಲೆಯ ಉದ್ಘಾಟನೆ
Last Updated 28 ಫೆಬ್ರುವರಿ 2021, 5:08 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ‘ದೇಶದಲ್ಲಿ ಪ್ರಜಾಪ್ರಭುತ್ವದ ಸಂವಿಧಾನಾತ್ಮಕ ಆಶಯಗಳಿಗೆ ಅನುಗುಣವಾಗಿ ರಾಜಕಾರಣ ಸಾಗದಿರುವುದು ಬೇಸರದ ಸಂಗತಿ’ ಎಂದು ಮೈಸೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕರಾದ ಪ್ರೊ.ಜೆ.ಸೋಮಶೇಖರ್ ತಿಳಿಸಿದರು.

ತಾಲ್ಲೂಕಿನ ಬೆಣಗಾಲು ಗ್ರಾಮದಲ್ಲಿ ಶನಿವಾರ ಮಹಾಚೇತನ ಯುವ ವೇದಿಕೆ ವತಿಯಿಂದ ಇ ಕಾಂ ಗಿಲ್ ಕಾಫಿ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ನಿರ್ಮಿಸಿದ ಸಾವಿತ್ರಿಬಾಯಿ ಫುಲೆ ಉಚಿತ ಸಂಜೆ ಪಾಠ ಶಾಲೆಯ ಉದ್ಘಾಟನೆ ಮತ್ತು ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಡಾ.ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನದ ಮೂಲಕ ಪ್ರಜಾಪ್ರಭುತ್ವದ ನೆಲೆಯನ್ನು ಗಟ್ಟಿಗೊಳಿಸಲು ರಾಜಕೀಯ ಶಕ್ತಿಯನ್ನು ಪ್ರತಿಯೊಬ್ಬರಿಗೂ ನೀಡಿದ್ದಾರೆ. ಆದರೆ, ಇಂದು ಜಾತಿ ಮತ್ತು ಧರ್ಮದ ಆಧಾರದಲ್ಲಿ ರಾಜಕಾರಣ ನಡೆಯುತ್ತಿದೆ. ಇದರೊಂದಿಗೆ ದಲಿತ ಸಮುದಾಯಗಳು ಕೂಡ ಛಿದ್ರಗೊಂಡು ಇನ್ನೊಬ್ಬರ ಮೇಲೆ ಅವಲಂಬಿತರಾಗಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

‘ಸಾಮಾಜಿಕ ಸುವ್ಯವಸ್ಥೆ ಮತ್ತು ಆರ್ಥಿಕ ಕಾರಣದಿಂದ ರಾಜಕೀಯ ರಾಜಕಾರಣಿಗಳಿಗೆ ಬಂಡವಾಳದ ಉದ್ಯೋಗವಾಗಿದ್ದು, ಇದರಿಂದ ಸಂವಿಧಾನಬದ್ಧ ಪ್ರಜಾಪ್ರಭುತ್ವದಲ್ಲಿ ಸ್ವಚ್ಛ ರಾಜಕಾರಣವನ್ನು ಕಾಣಲು ಸಾಧ್ಯವಾಗುತ್ತಿಲ್ಲ. ಜನ ಸಾಮಾನ್ಯರು ಸಂವಿಧಾನ ಆಶಯಗಳನ್ನು ಅರ್ಥೈಸಿಕೊಂಡು ಉತ್ತಮ ಆಳ್ವಿಕೆಯನ್ನು ನೀಡುವವರನ್ನು ಬೆಂಬಲಿಸುವ ಬಗ್ಗೆ ಚಿಂತಿಸಬೇಕು’ ಎಂದರು.

ಶಾಸಕ ಕೆ.ಮಹದೇವ್ ಮಾತನಾಡಿ, ‘ಶೋಷಿತ ಸಮಾಜ ಹೋರಾಟದ ಮೂಲಕ ತಮ್ಮ ಗುರಿಯನ್ನು ತಲುಪಲು ಸಾಧ್ಯ. ಈ ಹಿನ್ನಲೆಯಲ್ಲಿ ಮಹಾಚೇತನ ಯುವ ವೇದಿಕೆಯು ಸಾಮಾಜಿಕ ಕ್ರಾಂತಿಗೆ ಮುಂದಾಗಿದ್ದು ಇದಕ್ಕೆ ಸಂಪೂರ್ಣವಾಗಿ ಸಹಕಾರ ನೀಡುವುದಾಗಿ ಹೇಳಿದ ಅವರು, ನಾನು ಕೂಡ ನನ್ನ ರಾಜಕೀಯವನ್ನು ಸಮಾಜ ಸೇವೆಯನ್ನು ಮಾಡುವ ಮೂಲಕ ಮೂಲಕ ಆರಂಭಿಸಿದೆ’ ಎಂದರು.

ಮೈಸೂರಿನ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರದ ಸಹ ಪ್ರಾಧ್ಯಾಪಕ ಡಾ.ನರೇಂದ್ರ ಕುಮಾರ್ ಮಾತನಾಡಿ, ‘ಬ್ರಾಹ್ಮಣೇತರ ಸಮುದಾಯಗಳು ಶಿಕ್ಷಣದಿಂದ ವಂಚಿತರಾಗಿದ್ದ ಕಾಲದಲ್ಲಿ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ದಂಪತಿ ಶಿಕ್ಷಣದ ಮೂಲಕ ಸಮ ಸಮಾಜದ ನಿರ್ಮಾಣಕ್ಕೆ ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಈ ಕಾರಣಕ್ಕಾಗಿ ಸತ್ಯ ಶೋಧಕ ಸಮಾಜ ಎಂಬ ಸಂಘವನ್ನು ಸ್ಥಾಪಿಸಿ ಬಾಲ್ಯವಿವಾಹ ಪದ್ಧತಿ ನಿರ್ಮೂಲನೆ, ವಿಧವಾ ವಿವಾಹ ಕಾರ್ಯಕ್ರಮಗಳ ಜಾರಿಗೊಳಿಸುವುದು, ಸರಳ ವಿವಾಹದಂತಹ ಸಾಮಾಜಿಕ ಕಾರ್ಯವನ್ನು ಜಾರಿಗೊಳಿಸಲು ತಮ್ಮ ಸ್ವಂತ ದುಡಿಮೆಯ ಹಣವನ್ನು ಬಳಸಿ ಶಾಲೆಗಳನ್ನು ನಡೆಸುತ್ತಿದ್ದರು’ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಇ ಕಾಂ ಗಿಲ್ ಕಾಫಿ ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ದಿನೇಶ್ ಮಾತನಾಡಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯ ರಾಜೇಂದ್ರ, ತಾ.ಪಂ. ಸದಸ್ಯರಾದ ಟಿ.ಈರಯ್ಯ, ಎಸ್.ರಾಮು, ಜಯಂತಿ ಸೋಮಶೇಖರ್, ಗ್ರಾ.ಪಂ. ಅಧ್ಯಕ್ಷೆ ಮಂದಾರ ದಯಾನಂದ್, ಉಪಾಧ್ಯಕ್ಷ ಧನರಾಜ್, ಶಿವಶಂಕರ್ ಬಿಚ್ಚುಗತ್ತಿ, ಶೇಖರ್ ಚೆನ್ನಕಲ್, ಡಾ,ರಾಮಚಂದ್ರ, ಆರ್.ಎಸ್.ದೊಡ್ಡಣ್ಣ, ಪಿಡಿಓ ಮಂಜುನಾಥ್ ಶೆಟ್ಟಿ, ಅಭಿಯಂತರ ವಿಜಯ್ ಕುಮಾರ್, ರಂಗನಾಥ್, ಸ್ವಾಮಿ, ಎನ್.ಆರ್.ಕಾಂತರಾಜು,ಭೀಮ್ ಆರ್ಮಿ ಗಿರೀಶ್, ಮಹಾಚೇತನ ಯುವ ವೇದಿಕೆ ಪದಾಧಿಕಾರಿಗಳಾದ ಶ್ರೀಕಾಂತ್, ಪ್ರದೀಪ, ರಾಜೇಶ್, ಯಶ್ವಂತ್, ಸಾಗರ್, ರೇವಣ್ಣ, ರಮೇಶ್, ಕಿರಣ್, ಶಶಿಕುಮಾರ್, ಪವನ್ನಕುಮಾರ್, ಸಂದೀಪ್, ರೋಹಿತ್, ಸುದೀಪ್ ಸೇರಿದಂತೆ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT