ಭಾನುವಾರ, ಸೆಪ್ಟೆಂಬರ್ 26, 2021
29 °C

ಮಳೆ ಬರುವ ಹಾಗಿದೆ... ಹೂಳು ಹಾಗೆ ತುಂಬಿಕೊಂಡಿದೆ...

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಅಲ್ಲಲ್ಲಿ ಕೊಳಚೆ ನೀರು ಕಟ್ಟಿಕೊಂಡಿರುವ ದೃಶ್ಯಗಳು. ಕಾಲುವೆ ತುಂಬಾ ಕಟ್ಟಡದ ಅವಶೇಷ, ಪ್ಲಾಸ್ಟಿಕ್‌ ತ್ಯಾಜ್ಯದ ರಾಶಿ. ಸುತ್ತಲೂ ಆವರಿಸಿಕೊಂಡಿರುವ ಗಿಡಗಂಟಿಗಳು. ತಡೆಗೋಡೆಯೇ ಇಲ್ಲದ ಕಾಲುವೆಗಳು, ಅಲ್ಲಲ್ಲಿ ತುಂಬಿಕೊಂಡಿರುವ ಹೂಳು. ದುರ್ವಾಸನೆಯ ಜೊತೆಗೆ ಸೊಳ್ಳೆ ಕಾಟ.

ಇದು ಸ್ವಚ್ಛ ನಗರಿ ಖ್ಯಾತಿಯ ಮೈಸೂರಿನ ರಾಜಕಾಲುವೆಗಳ ದುಸ್ಥಿತಿ. ಸ್ವಚ್ಛ ನಗರಿ ಪಟ್ಟ ನೀಡುವವರು ಸಾಂಸ್ಕೃತಿಕ ನಗರಿಯ ಕಾಲುವೆಗಳನ್ನು ತುಸು ಬಗ್ಗಿ ನೋಡಬೇಕು. ನಗರದ ಹೃದಯ ಭಾಗದಲ್ಲೇ ಇರುವ ಬಹುತೇಕ ರಾಜಕಾಲುವೆಗಳಲ್ಲಿ ಹೂಳು, ಕಟ್ಟಡ ಅವಶೇಷ, ತ್ಯಾಜ್ಯ ತುಂಬಿಕೊಂಡಿದೆ. ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಜಾಗವೂ ಇಲ್ಲದಂತೆ ಮುಚ್ಚಿ ಹೋಗಿವೆ.

ಅಕ್ಕ–ಪಕ್ಕದ ಬಡಾವಣೆಗಳ ನಿವಾಸಿಗಳು ಹಾಗೂ ವಾಣಿಜ್ಯ ಮಳಿಗೆಯವರು ಮನಬಂದಂತೆ ಕಸ ಎಸೆಯುವ ಮೂಲಕ ರಾಜಕಾಲುವೆಗಳನ್ನು ತಿಪ್ಪೆಗುಂಡಿಗಳನ್ನಾಗಿ ಮಾಡಿದ್ದಾರೆ. ಮದ್ಯದ ಖಾಲಿ ಪೌಚ್‌–ಬಾಟಲಿ, ಥರ್ಮಾಕೋಲ್‌, ಪ್ಲಾಸ್ಟಿಕ್‌ ಕ್ಯಾರಿ ಬ್ಯಾಗ್‌ಗಳನ್ನು ಕಾಲುವೆಗಳಲ್ಲಿ ಎಸೆಯುತ್ತಿದ್ದಾರೆ. ಇನ್ನೊಂದೆಡೆ ಮಾಂಸದ ಅಂಗಡಿಯವರು ತ್ಯಾಜ್ಯವನ್ನು ಮೂಟೆಯಲ್ಲಿ ಕಟ್ಟಿ ರಾತ್ರಿ ವೇಳೆ ಕಾಲುವೆಗೆ ತಂದು ಹಾಕುತ್ತಿದ್ದಾರೆ. ಮೋರಿಗಳಲ್ಲಿ ಕಸಕಡ್ಡಿಗಳ ರಾಶಿ ಕಟ್ಟಿಕೊಂಡು ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ಸೊಳ್ಳೆಗಳ ಉತ್ಪತ್ತಿ ತಾಣವಾಗಿದ್ದು, ವಿವಿಧ ಬಗೆಯ ರೋಗ–ರುಜಿನಗಳ ಉಗಮ ಸ್ಥಾನವಾಗುತ್ತಿದೆ.

ಕೆಲವೆಡೆ ಕಾಲುವೆಗಳ ಒತ್ತುವರಿಯಾಗಿದೆ. ರಸ್ತೆ, ಪಾರ್ಕಿಂಗ್‌, ಉದ್ಯಾನ, ಮೈದಾನ ನಿರ್ಮಿಸಲಾಗಿದೆ. ಇದರಿಂದ ಜೋರು ಮಳೆ ಬಂದಾಗ ನೀರು ರಸ್ತೆ ಮೇಲೆ ಹರಿಯುತ್ತದೆ. ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ. ಕೆಲವೆಡೆಯಂತೂ ಮನೆಗಳ ಗೋಡೆ ಕಾಲುವೆಗೆ ಅಂಟಿಕೊಂಡಿದೆ.

ಈಗಾಗಲೇ ಒಂದು ಸುತ್ತು ಮಳೆ ಬಂದು ಹೋಗಿದೆ. ಒಂದೆರಡು ತಿಂಗಳಲ್ಲಿ ಮುಂಗಾರು ಆರಂಭವಾಗಲಿದೆ. ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ನಮ್ಮ ಪಾಲಿಕೆ ಸಿದ್ಧವಾಗಿದೆಯೇ? ಮುಂಗಾರು ಪ್ರವೇಶಕ್ಕೂ ಮುನ್ನವೇ ಕಾಮಗಾರಿ ನಡೆದರೆ ಅನಾಹುತ ತಪ್ಪಿಸಬಹುದು. ಪಾಲಿಕೆ ಆಯುಕ್ತರಾದ ಶಿಲ್ಪಾ ನಾಗ್‌ ಈಗಾಗಲೇ ನಗರದ ಕಾಲುವೆಗಳ ದುಸ್ಥಿತಿಯನ್ನು ಖುದ್ದಾಗಿ ಒಂದು ಸುತ್ತು ಪರಿಶೀಲನೆ ನಡೆಸಿದ್ದಾರೆ. ಪರಿಸ್ಥಿತಿ ಕಂಡು ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದ್ದಾರೆ.

ನಗರದಲ್ಲಿ ಆರು ರಾಜಕಾಲುವೆಗಳಿವೆ. ಇದರಲ್ಲಿ ದಳವಾಯಿ ಕೆರೆ ಹಾಗೂ ಬನ್ನಿಮಂಟಪ ವ್ಯಾಲಿಗೆ ನೀರು ಸಾಗಿಸುವ ಎರಡು ಕಾಲುವೆಗಳ ಪರಿಸ್ಥಿತಿ ಚಿಂತಾಜನಕವಾಗಿದೆ. ಕುಕ್ಕರಹಳ್ಳಿ ಕೆರೆಗೆ ನೀರು ಸಾಗಿಸುವ ರಾಜಕಾಲುವೆ, ಕೃಷ್ಣಮೂರ್ತಿಪುರಂ, ದೊಡ್ಡಕೆರೆ ಮೈದಾನ, ಅಗ್ರಹಾರ, ಕೆ.ಜಿ.ಕೊಪ್ಪಲು ಸುತ್ತಮುತ್ತ ಪ್ರದೇಶದಲ್ಲಿ ಇರುವ ಕಾಲುವೆಗಳಲ್ಲಿ ತ್ಯಾಜ್ಯ ತುಂಬಿಕೊಂಡಿದೆ. ‌

‌ಕುಕ್ಕರಹಳ್ಳಿಕೆರೆಗೆ ನೀರು ಸಾಗಿಸುವ ಕಾಲುವೆ ಒಂದು ಕಾಲದಲ್ಲಿ ಸುಮಾರು 23 ಕಿ.ಮೀ ಉದ್ದ ವಿಸ್ತೀರ್ಣ ಹೊಂದಿತ್ತು. ಕುಕ್ಕರಹಳ್ಳಿ ಕೆರೆ ತುಂಬಿಸಿ ಮತ್ತಷ್ಟು ಕೆರೆಗಳಿಗೆ ನೀರು ಉಣಿಸುತಿತ್ತು. ಆದರೀಗ ಅರ್ಧಕರ್ಧ ಒತ್ತುವರಿಯಾಗಿದೆ. ಸಮೀಕ್ಷೆಯೊಂದರ ಪ್ರಕಾರ ಕುಕ್ಕರಹಳ್ಳಿ ಕೆರೆ ಪ್ರದೇಶದ ಸನಿಹವೇ 1.4 ಕಿ.ಮೀ ಒತ್ತುವರಿಯಾಗಿದೆ. ಉಳಿದಿರುವ ಕಾಲುವೆಯಲ್ಲಿ ಹೂಳು ತುಂಬಿಕೊಂಡಿದ್ದು ಕೊಳಚೆ ನೀರು ಹರಿಯುತ್ತಿದೆ.

ಕನಕಗಿರಿ, ಶ್ರೀರಾಂಪುರ, ಗುಂಡೂರಾವ್‌ನಗರ, ಮುನೇಶ್ವರನಗರ, ಐಶ್ವರ್ಯನಗರ ಬಡಾವಣೆ, ಸೂರ್ಯನಗರ ಬಡಾವಣೆ ಸೇರಿದಂತೆ ಕೆಲವೆಡೆ ರಾಜಕಾಲುವೆ, ಚರಂಡಿ, ಮೋರಿಗಳಲ್ಲಿ ಕಸಕಡ್ಡಿ ತುಂಬಿಕೊಂಡಿರುವುದು ಕಂಡುಬರುತ್ತದೆ. ಈ ಹಿಂದೆ ಮಳೆ ಬಂದಾಗ ಈ ಭಾಗದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ ಪರಿ ಎಲ್ಲರಿಗೂ ಗೊತ್ತೇ ಇದೆ.

ಎಲೆತೋಟದ ಬಳಿಯ ರಾಜಕಾಲುವೆ ತುಂಬಿ ಹರಿದಿತ್ತು. ರಾಜಕಾಲುವೆ ಉಕ್ಕಿ ದೊಡ್ಡಕೆರೆ ಮೈದಾನಕ್ಕೆ ಹರಿದ ಪರಿಣಾಮ ವಸ್ತುಪ್ರದರ್ಶನ ಮೈದಾನ ಜಲಾವೃತಗೊಂಡಿತ್ತು. ಇದರಿಂದ ಹಲವು ಮಳಿಗೆಗಳಿಗೆ ನೀರು ನುಗ್ಗಿತು. ದೊಡ್ಡಕೆರೆ ಮೈದಾನದ ಮೂಲಕ ಊಟಿ ರಸ್ತೆಗೆ ಸಂಪರ್ಕ ಪಡೆದು ಸೂಯೇಜ್‌ ಫಾರ್ಮ್‌ವರೆಗೂ ಸಾಗುವ ರಾಜಕಾಲುವೆಯಲ್ಲಿ ತ್ಯಾಜ್ಯ ತುಂಬಿದ್ದು, ಹಲವು ಸಮಸ್ಯೆಗೆ ಕಾರಣವಾಗುತ್ತಿದೆ. ಹೂಳೆತ್ತುವ ಕಾಮಗಾರಿಯೇನೋ ಆರಂಭವಾಗಿದೆ. ಬೇಕಾಬಿಟ್ಟಿ ಕಾಮಗಾರಿ ನಡೆಸಿದರೆ ಮಳೆಗಾಲದಲ್ಲಿ ಖಂಡಿತ ಅಪಾಯ ಕಾದಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.