ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು ದಸರಾ: ನಾಡಹಬ್ಬಕ್ಕೆ 14 ಆನೆಗಳ ಸಂಭಾವ್ಯ ಪಟ್ಟಿ ಸಿದ್ಧ

ದಸರೆ: ಗಜಪಡೆಯ ದೈಹಿಕ ಸಾಮರ್ಥ್ಯ ಪರೀಕ್ಷಿಸಿದ ಅರಣ್ಯ ಅಧಿಕಾರಿಗಳು
Last Updated 26 ಆಗಸ್ಟ್ 2021, 4:47 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ 14 ಆನೆಗಳ ಸಂಭಾವ್ಯ ಪಟ್ಟಿಯನ್ನು ಅರಣ್ಯ ಇಲಾಖೆ ಸ್ಥಳೀಯ ಅಧಿಕಾರಿಗಳು ಸಿದ್ಧಪಡಿಸಿದ್ದು, ಮೇಲಧಿಕಾರಿಗಳ ಅನುಮೋದನೆ ಹಾಗೂ ಜಿಲ್ಲಾಡಳಿತದ ನಿರ್ಧಾರಕ್ಕೆ ಕಾಯುತ್ತಿದ್ದಾರೆ. ‘ನಾಡಹಬ್ಬಕ್ಕೆ ಈ ಬಾರಿ ಎಷ್ಟು ಆನೆಗಳ ಅಗತ್ಯವಿದೆ?‌‌’ ಎಂಬ ಮಾಹಿತಿ ಕೋರಿ ಈಗಾಗಲೇ ಪತ್ರ ಬರೆದಿದ್ದಾರೆ.

ಈ ಬಾರಿ ದಸರೆಯು ಅ.7ರಿಂದ 15ವರೆಗೆ ನಡೆಯಲಿದ್ದು, ಪೂರ್ವಸಿದ್ಧತೆ ಸಭೆ ನಡೆದಿಲ್ಲ. ಈ ನಡುವೆ, ಮೈಸೂರು ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ವಿ.ಕರಿಕಾಳನ್‌ ನೇತೃತ್ವದಲ್ಲಿ ಅಧಿಕಾರಿಗಳು, ವೈದ್ಯರು ದುಬಾರೆ, ಆನೆಕಾಡು ಹಾಗೂ ಮತ್ತಿಗೋಡು ಶಿಬಿರಗಳಿಗೆ ಭೇಟಿ ನೀಡಿ ಆನೆಗಳ ಆರೋಗ್ಯ, ದೈಹಿಕ ಸಾಮರ್ಥ್ಯ, ಕಣ್ಣು ಪರಿಶೀಲಿಸಿದ್ದಾರೆ.

‘ಸಾಕಾನೆ ಶಿಬಿರಗಳಿಗೆ ಭೇಟಿ ನೀಡಿ ಆನೆಗಳನ್ನು ಗುರುತಿಸಿದ್ದೇವೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ (ಪಿಸಿಸಿಎಫ್‌) ವರದಿ ನೀಡಲಾಗುವುದು. ಮಾವುತರು ತರಬೇತಿ ನೀಡುತ್ತಿದ್ದು, ಆನೆಗಳು ಆರೋಗ್ಯಕರವಾಗಿವೆ. ಮತ್ತಿಗೋಡು ಶಿಬಿರದಲ್ಲಿ ಮಹಾರಾಷ್ಟ್ರದ ಭೀಮ ಆನೆಯನ್ನೂ ಗುರುತಿಸಲಾಗಿದೆ’ ಎಂದು ಕರಿಕಾಳನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ವಿಕ್ರಮ, ವಿಜಯಾ, ಪ್ರಶಾಂತ, ಭೀಮ, ಮಹೇಂದ್ರ, ಗೋಪಿ, ಕಾವೇರಿ, ಹರ್ಷ, ಲಕ್ಷ್ಮಣ, ಚೈತ್ರಾ ಹಾಗೂ ಮಹಾರಾಷ್ಟ್ರ ಭೀಮ ಆನೆ ಸಿದ್ಧವಾಗಿವೆ. ಅಭಿಮನ್ಯು ಆನೆ ಅಂಬಾರಿ ಹೊತ್ತು ಸಾಗುವುದು ನಿಚ್ಚಳವಾಗಿದೆ.

ಕೋವಿಡ್‌ನಿಂದಾಗಿ ಹಿಂದಿನ ವರ್ಷ ಚಾಮುಂಡಿಬೆಟ್ಟ ಮತ್ತು ಅರಮನೆ ಆವರಣಕ್ಕೆ ಸೀಮಿತವಾಗಿ ಸರಳ ಹಾಗೂ ಸಾಂಪ್ರದಾಯಿಕ ದಸರೆಯನ್ನು ಐದು ಆನೆಗಳಿಗೆ ಸೀಮಿತಗೊಳಿಸಲಾಗಿತ್ತು. ಮತ್ತಿಗೋಡು ಶಿಬಿರದ ಅಭಿಮನ್ಯು (55), ಆನೆಕಾಡು ಶಿಬಿರದ ವಿಕ್ರಮ (48), ವಿಜಯಾ (64) ಹಾಗೂ ದುಬಾರೆ ಶಿಬಿರದ ಗೋಪಿ (39), ಕಾವೇರಿ (43) ಆನೆಗಳನ್ನು ದಸರೆ ಆರಂಭಕ್ಕೆ 15 ದಿನಗಳ ಮುನ್ನ ಕರೆತರಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT