ಶುಕ್ರವಾರ, ನವೆಂಬರ್ 22, 2019
20 °C
ಜಮ್ಮು ಮತ್ತು ಕಾಶ್ಮೀರ ಹುರಿಯತ್‌ನ ಆಸ್ತಿ ಅಲ್ಲ: ಸಿರಾಜ್‌ ಖುರೇಷಿ

370 ನೇ ವಿಧಿ ರದ್ದು; ಎಂಆರ್‌ಎಂ ಸಮರ್ಥನೆ

Published:
Updated:
Prajavani

ಮೈಸೂರು: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ನೀಡಿದ್ದ 370ನೇ ವಿಧಿ ರದ್ದುಗೊಳಿಸಿರುವುದು ಹುರಿಯತ್‌ ಸಂಘಟನೆ ಮತ್ತು ಪಾಕಿಸ್ತಾನದ ಪರ ಇರುವವರಿಗೆ ಮಾತ್ರ ದುಃಖ ತರಿಸಿದೆ. ಬೇರೆ ಯಾರೂ ಈ ತೀರ್ಮಾನಕ್ಕೆ ವಿರೋಧ ವ್ಯಕ್ತಪಡಿಸಿಲ್ಲ ಎಂದು ಮುಸ್ಲಿಮ್‌ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ‘ಚಿಂತಕರ ಘಟಕ’ದ ರಾಷ್ಟ್ರೀಯ ಸಹ ಸಂಯೋಜಕ ಸಿರಾಜ್‌ ಖುರೇಷಿ ಹೇಳಿದರು.

ಎಂಆರ್‌ಎಂ ‘ಚಿಂತಕರ ಘಟಕ’ದ ವತಿಯಿಂದ ಗುರುವಾರ ಆಯೋಜಿಸಿದ್ದ ‘370ನೇ ವಿಧಿ ರದ್ದತಿ ಬಳಿಕದ ಕಾಶ್ಮೀರ’ ವಿಷಯದಲ್ಲಿ ಉಪನ್ಯಾಸ ನೀಡಿದರು.

370ನೇ ವಿಧಿಯಿಂದಾಗಿ ಕಾಶ್ಮೀರ ಮತ್ತು ಭಾರತದ ಇನ್ನುಳಿದ ಭಾಗದ ನಡುವೆ ಕಂದಕ ಸೃಷ್ಟಿಯಾಗಿತ್ತು. ಇದೀಗ ಆ ಅಂತರ ಇಲ್ಲವಾಗಿದೆ. ಇಡೀ ದೇಶಕ್ಕೆ ಒಂದೇ ಕಾನೂನು ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಒಂದು ದೇಶದಲ್ಲಿ ಎರಡು ಕಾನೂನು, ಇಬ್ಬರು ಪ್ರಧಾನಿ, ಇಬ್ಬರು ರಾಷ್ಟ್ರಪತಿ ಇರಲು ಸಾಧ್ಯವಿಲ್ಲ. ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಿದ್ದು ಸರಿಯಲ್ಲ. ಹಲವು ದಶಕಗಳಿಂದ ತಲೆದೋರಿದ್ದ ಗೊಂದಲ ನಿವಾರಣೆಯಾಗಿದೆ ಎಂದರು.

‘ವಿಶೇಷಾಧಿಕಾರ ಕಳೆದುಕೊಂಡ ಬಳಿಕ ಕಾಶ್ಮೀರದಲ್ಲಿ ಉಸಿರುಗಟ್ಟಿಸುವಂತಹ ವಾತಾವರಣ ಇದೆ. ಜನರು ಹಾಲು, ನೀರಿಗಾಗಿ ಪರದಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಕಾಶ್ಮೀರದಲ್ಲಿ ಭಯದ ವಾತಾವರಣ ಇಲ್ಲ ಎಂಬುದು ಅಲ್ಲಿಗೆ ಭೇಟಿ ನೀಡಿದಾಗ ನನಗೆ ತಿಳಿದಿದೆ. ಮುಸ್ಲಿಮರು ಹಾಗೂ ದೇಶದ ಜನರಲ್ಲಿ ಕಾಶ್ಮೀರದ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಎಂಆರ್‌ಎಂ ದೇಶದೆಲ್ಲೆಡೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಕರ್ನಾಟಕದಲ್ಲಿ ಮೈಸೂರಿನಿಂದ ಆರಂಭಿಸಲಾಗಿದೆ’ ಎಂದು ತಿಳಿಸಿದರು.

ಹುರಿಯತ್‌ ಸಂಘಟನೆ ‘ಆಜಾದಿ ಕಾಶ್ಮೀರ’ಕ್ಕಾಗಿ ಹೋರಾಟ ನಡೆಸುತ್ತಿದೆ. ಆದರೆ ಕಾಶ್ಮೀರವು ಪ್ರತ್ಯೇಕ ರಾಷ್ಟ್ರವಾದರೆ ಅಲ್ಲಿನ ಜನರ ಸಂಕಷ್ಟ ಇನ್ನಷ್ಟು ಹೆಚ್ಚಲಿದೆ. ಸ್ವತಂತ್ರ ಕಾಶ್ಮೀರವನ್ನು ತನ್ನ ತೆಕ್ಕೆಗೆ ಪಡೆಯಲು ಪಾಕಿಸ್ತಾನ ಮತ್ತು ಚೀನಾ ಪ್ರಯತ್ನಿಸಬಹುದು. ಭಾರತದ ಜತೆಗಿದ್ದರೆ ನೆಮ್ಮದಿಯಿಂದ ಇರಬಹುದು ಎಂಬುದು ಕಾಶ್ಮೀರದ ಜನರಿಗೆ ಮನವರಿಕೆಯಾಗಿದೆ ಎಂದರು.

ಕಾಶ್ಮೀರದಲ್ಲಿ ಉಗ್ರರ ದಾಳಿ ಮತ್ತು ಪದೇ ಪದೇ ಹಿಂಸಾಚಾರ ನಡೆಯುವುದರಿಂದ ಅಲ್ಲಿನ ವಿದ್ಯಾರ್ಥಿಗಳು ಸಂಕಷ್ಟದಲ್ಲಿದ್ದಾರೆ. ವಿದ್ಯಾಭ್ಯಾಸಕ್ಕಾಗಿ ದೇಶದ ಇತರ ನಗರಗಳಿಗೆ ತೆರಳುವಂತಾಗಿದೆ. ಮೂರು ವರ್ಷಗಳ ಹಿಂದೆ ಎಂಆರ್‌ಎಂ ವತಿಯಿಂದ ದೆಹಲಿಯಲ್ಲಿ ಕಾಶ್ಮೀರ ವಿದ್ಯಾರ್ಥಿಗಳ ಬೃಹತ್‌ ಸಮಾವೇಶ ಆಯೋಜಿಸಲಾಗಿತ್ತು. ನಮ್ಮನ್ನು ಹುರಿಯತ್‌ನಿಂದ ರಕ್ಷಿಸಿ ಎಂಬುದು ವಿದ್ಯಾರ್ಥಿಗಳ ಮುಖ್ಯ ಬೇಡಿಕೆಯಾಗಿತ್ತು ಎಂಬುದನ್ನು ನೆನಪಿಸಿಕೊಂಡರು.

ಶಾಸಕ ಎಸ್‌.ಎ.ರಾಮದಾಸ್‌ ಮಾತನಾಡಿ, 370ನೇ ವಿಧಿ ರದ್ದತಿಯ ಬಳಿಕ ಕಾಶ್ಮೀರದಲ್ಲಿ ವಸ್ತು ಸ್ಥಿತಿ ಹೇಗಿದೆ ಎಂಬುದನ್ನು ಮನವರಿಕೆ ಮಾಡಿಕೊಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕಾಶ್ಮೀರವು ಈಗ ಭಾರತದ ಇತರ ರಾಜ್ಯಗಳಂತೆಯೇ ಆಗಿದೆ. ಕೇರಳದವನಿಗೆ ಅಲ್ಲಿ ಹೋಗಿ ಚಹಾ ಅಂಗಡಿ ತೆರೆಯಬಹುದು. ಮುಂದಿನ ಕೆಲವು ದಿನಗಳಲ್ಲಿ ಅಲ್ಲಿ ಉಡುಪಿ ಹೋಟೆಲ್‌ ಕೂಡಾ ಆರಂಭವಾಗಬಹುದು ಎಂದು ತಿಳಿಸಿದರು.

ಎಂಆರ್‌ಎಂ ರಾಜ್ಯ ಸಂಯೋಜಕ ಇಕ್ಬಾಲ್‌ ಅಹ್ಮದ್, ಸಹ ಸಂಯೋಜಕ ಸೈಯದ್‌ ಫತಾವುಲ್ಲಾ ಗೌಸ್, ಇಲ್ಯಾಸ್‌ ಅಹ್ಮದ್‌, ಎನ್‌.ಎಸ್‌.ಚೌಧರಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)