ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕಾಂಗ್ರೆಸ್‌ನಿಂದ ಪೋಸ್ಟ್‌ ಕಾರ್ಡ್‌ ಚಳವಳಿ

ರೈಲ್ವೆ ಖಾಸಗೀಕರಣಕ್ಕೆ ವಿರೋಧ; ಕೇಂದ್ರದ ನೀತಿಗೆ ಖಂಡನೆ
Last Updated 25 ಜುಲೈ 2020, 16:32 IST
ಅಕ್ಷರ ಗಾತ್ರ

ಮೈಸೂರು: ರೈಲ್ವೆಯ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನೀತಿ ವಿರೋಧಿಸಿ, ನಗರ ಕಾಂಗ್ರೆಸ್ ಪ್ರಚಾರ ಸಮಿತಿಯಿಂದ ಶನಿವಾರ ಪೋಸ್ಟ್ ಕಾರ್ಡ್ ಚಳವಳಿ ನಡೆಸಲಾಯಿತು.

ಮೈಸೂರು ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಜಮಾಯಿಸಿದ ಪ್ರಚಾರ ಸಮಿತಿ ಸದಸ್ಯರು, ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಖಾಸಗೀಕರಣ ವಿರೋಧಿಸಿ ಕೇಂದ್ರ ಸರ್ಕಾರಕ್ಕೆ ಪತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಚಳವಳಿ ನಡೆಸಿದರು.

‘165 ವರ್ಷದ ಇತಿಹಾಸ ಹೊಂದಿರುವ ರೈಲ್ವೆ ಇಲಾಖೆ ಬಗ್ಗೆ ಮೋದಿ ಸರ್ಕಾರ ತಾತ್ಸಾರ ತೋರುತ್ತಿದೆ. ದೇಶದ 109 ರೈಲ್ವೆ ನಿಲ್ದಾಣಗಳಿಂದ 151 ರೈಲುಗಳನ್ನು ಖಾಸಗಿಯವರಿಗೆ ಕೊಡುವ ಮೂಲಕ ಕೇಂದ್ರ ಸರ್ಕಾರ ಜನರ ಆಸ್ತಿಯನ್ನು ಹರಾಜಿಗಿಟ್ಟಿದೆ’ ಎಂದು ಪ್ರತಿಭಟನಕಾರರು ದೂರಿದರು.

‘ಕೇಂದ್ರದ ಖಾಸಗೀಕರಣ ನೀತಿಯಿಂದಾಗಿ ರೈಲ್ವೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಲ್ಲಿ ಅಭದ್ರತೆ ಶುರುವಾಗಿದೆ. ಕಾರ್ಮಿಕರು ಅತಂಕಕ್ಕೀಡಾಗಿದ್ದಾರೆ. ಮಹಿಳೆಯರು, ಅಂಗವಿಕಲರು ಸೇರಿದಂತೆ ರೈಲ್ವೆ ಪ್ರಯಾಣದಲ್ಲಿ ನೀಡಲಾಗಿದ್ದ ಮೀಸಲಾತಿಯೂ ರದ್ದುಗೊಳ್ಳಲಿದೆ’ ಎಂಬ ಆತಂಕವನ್ನು ಪ್ರತಿಭಟನನಿರತರು ವ್ಯಕ್ತಪಡಿಸಿದರು.

‘ರೈಲ್ವೆಯನ್ನು ಖಾಸಗಿ ಕಂಪನಿಗಳಿಗೆ ವಹಿಸಿದಲ್ಲಿ ರೈಲ್ವೆ ದರ ಹಾಗೂ ಸರಕು ಸಾಗಣೆ ದರಗಳು ದುಪ್ಪಟ್ಟಾಗಲಿವೆ. ಇದರಿಂದಾಗಿ ದೇಶದ ಆರ್ಥಿಕತೆ, ಕೃಷಿ ಚಟುವಟಿಕೆ ಮತ್ತು ಕೈಗಾರಿಕಾ ವಲಯಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಇಂತಹ ಸೂಕ್ಷ್ಮತೆ ಮೋದಿಯಂತಹ ಬುದ್ದಿವಂತರಿಗೆ ಏಕೆ ಅರ್ಥವಾಗಲಿಲ್ಲ?’ ಎಂದು ಕಿಡಿಕಾರಿದರು.

ಕಾಂಗ್ರೆಸ್ ಮುಖಂಡರಾದ ಎಂ.ಕೆ.ಅಶೋಕ್, ಕೆ.ಹರೀಶ್‍ಗೌಡ, ಟಿ.ಎಸ್.ರವಿಶಂಕರ್, ಚಿಕ್ಕಪುಟ್ಟಿ, ಲೋಕನಾಥಗೌಡ, ಡಾ.ಸುಜಾತಾರಾವ್, ಸೋಮಶೇಖರ್, ಶ್ರೀಧರ್, ಚೌಹಳ್ಳಿ ಪುಟ್ಟಸ್ವಾಮಿ, ಮಹದೇವು, ಕುಮಾರಗೌಡ, ಕುರುಬಾರಹಳ್ಳಿ ಧನಪಾಲ್, ಜಗದೀಶ್, ಚೇತನ್ ಚಳವಳಿಯಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT