ಸೋಮವಾರ, ಜನವರಿ 27, 2020
26 °C

ವಿದ್ಯುತ್ ಕಳ್ಳತನ: ₹ 2.22 ಲಕ್ಷ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಮೈಸೂರು: ತಮ್ಮ ಜಮೀನಿನ ಪಂಪ್‌ಸೆಟ್‌ಗೆ ವಿದ್ಯುತ್‌ ಲೈನ್‌ನಿಂದ ಅನಧಿಕೃತ ಸಂಪರ್ಕ ಪಡೆದಿದ್ದ ತಂದೆ–ಮಗನಿಗೆ ಹುಣಸೂರಿನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ಒಟ್ಟು ₹ 2.22 ಲಕ್ಷ ದಂಡ ವಿಧಿಸಿದೆ.

ಎಚ್.ಡಿ.ಕೋಟೆ ತಾಲ್ಲೂಕಿನ ಹಂಪಾಪುರ ಹೋಬಳಿಯ ಎಂ.ಕನ್ನೇನಹಳ್ಳಿ ನಿವಾಸಿಗಳಾದ ಚಿಕ್ಕಮಾದಯ್ಯ ಮತ್ತು ಇವರ ಪುತ್ರ ಬಸವರಾಜು ದಂಡ ವಿಧಿಸಲ್ಪಟ್ಟವರು. ದಂಡ ಕಟ್ಟದಿದ್ದರೆ ಒಂದು ವರ್ಷ ಜೈಲು ಶಿಕ್ಷೆಯನ್ನು ನ್ಯಾಯಾಲಯದ ನ್ಯಾಯಾಧೀಶರಾದ ಮಧುಸೂದನ್‌ ಬಿ. ನೀಡಿದ್ದಾರೆ.

ತಮ್ಮ ಜಮೀನಿನಲ್ಲಿ ಅನಧಿಕೃತವಾಗಿ ಇಟ್ಟಿಗೆ ತಯಾರಿಸುವ ಘಟಕವನ್ನು ತಂದೆ–ಮಗ ಸ್ಥಾಪಿಸಿಕೊಂಡಿದ್ದರು. ಇದಕ್ಕೆ ಬೇಕಾದ ನೀರಿಗಾಗಿ ಕೊಳವೆಬಾವಿ ಕೊರೆಸಿಕೊಂಡು, ಹತ್ತಿರದಲ್ಲೇ ಹಾದು ಹೋಗಿದ್ದ ವಿದ್ಯುತ್‍ ಲೈನ್‍ನಿಂದ ಅನಧಿಕೃತವಾಗಿ ಸಂಪರ್ಕ ಕಲ್ಪಿಸಿಕೊಂಡು ವಿದ್ಯುತ್‌ ಕಳ್ಳತನ ಮಾಡುತ್ತಿದ್ದರು.

ಚೆಸ್ಕಾಂನ ಜಾಗೃತ ದಳದ ಸಿಬ್ಬಂದಿ 2014ರ ನ.11ರಂದು ದಾಳಿ ನಡೆಸಿ, ಎಲೆಕ್ಟ್ರಿಸಿಟಿ ಕಾಯ್ದೆಯಡಿ ದೂರು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ವಿಚಾರಣೆಯಲ್ಲಿ ಅಪರಾಧ ಸಾಬೀತಾಗಿದ್ದಾರಿಂದ ತಂದೆ–ಮಗ ಇಬ್ಬರಿಗೂ ನ್ಯಾಯಾಲಯ ದಂಡ ವಿಧಿಸಿ ಆದೇಶ ನೀಡಿದೆ.

ಮೊದಲನೇ ಆರೋಪಿ ಚಿಕ್ಕಮಾದಯ್ಯಗೆ ₹ 2.02 ಲಕ್ಷ ಹಾಗೂ ವಿದ್ಯುತ್‍ ಲೈನ್‍ಗೆ ಅಡಚಣೆ ಉಂಟು ಮಾಡಿದ್ದಕ್ಕೆ ₹ 5,000 ದಂಡ ವಿಧಿಸಿದ್ದರೆ, ಎರಡನೇ ಆರೋಪಿ ಬಸವರಾಜುಗೆ ₹ 10,000 ಹಾಗೂ ವಿದ್ಯುತ್‍ಗೆ ಅಡಚಣೆ ಉಂಟು ಮಾಡಿದ್ದಕ್ಕೆ ₹ 5,000 ದಂಡ ವಿಧಿಸಿದೆ ಎಂದು ಸರ್ಕಾರಿ ಅಭಿಯೋಜಕ ಅಜಿತ್‌ಕುಮಾರ್ ಡಿ.ಹಮಿಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು