ಬೆತ್ತಲೆ ಮೆರವಣಿಗೆ ಪ್ರಕರಣ| ಪ್ರತಾಪ್‌ ತಂದೆಗೆ ಬೆದರಿಕೆ; ಆತಂಕ

ಗುರುವಾರ , ಜೂಲೈ 18, 2019
23 °C
ಬೆತ್ತಲೆ ಮೆರವಣಿಗೆ ಪ‍್ರಕರಣ: ‘ರಾಘವಾಪುರದಿಂದ ಮುಂದಕ್ಕೆ ನೆನಪಿಲ್ಲ’ ಎಂದು ಹೇಳುತ್ತಿರುವ ಸಂತ್ರಸ್ತ

ಬೆತ್ತಲೆ ಮೆರವಣಿಗೆ ಪ್ರಕರಣ| ಪ್ರತಾಪ್‌ ತಂದೆಗೆ ಬೆದರಿಕೆ; ಆತಂಕ

Published:
Updated:

ಮೈಸೂರು: ಬೆತ್ತಲೆ ಮೆರವಣಿಗೆ ಹಾಗೂ ಹಲ್ಲೆ ‍ಪ್ರಕರಣದಲ್ಲಿ ಮೈಸೂರಿನ ಸೇಂಟ್‌ ಮೇರಿಸ್ ಮಾನಸಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರತಾಪ್‌ ಅವರ ಕುಟುಂಬಕ್ಕೆ ಬೆದರಿಕೆಯೊಡ್ಡಲಾಗಿದೆ.

ಇಬ್ಬರು ಯುವಕರು ಶನಿವಾರ ರಾತ್ರಿ ಆಸ್ಪತ್ರೆ ಆವರಣಕ್ಕೆ ಬಂದು ಪ್ರತಾಪ್ ಅವರ ತಂದೆ ಶಿವಯ್ಯ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ.‌ ಇದರಿಂದ ಕುಟುಂಬ ಆತಂಕಕ್ಕೆ ಒಳಗಾಗಿದೆ.

‘ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆ ಆವರಣದಲ್ಲಿ ಕುಳಿತ್ತಿದ್ದಾಗ ಬೈಕ್‌ನಲ್ಲಿ ಇಬ್ಬರು ವ್ಯಕ್ತಿಗಳು ಬಂದರು. ಅವರಲ್ಲಿ ಒಬ್ಬಾತ ಗುಂಡ್ಲುಪೇಟೆಯ ಪ್ರತಾಪ್ ಕಡೆಯವರು ಎಲ್ಲಿದ್ದಾರೆ ಹುಡುಕೋ ಎಂದು ಹೇಳಿದ. ಆಗ ನಾನು ಪ್ರತಾಪ್‌ನಿಂದ ಏನಾಗಬೇಕು, ನಾನು ಅವನ ತಂದೆ ಎಂದು ಹೇಳಿದೆ. ನನ್ನನ್ನು ದುರುಗುಟ್ಟಿ ನೋಡಿದ ಅವರಿಬ್ಬರು ಅವಾಚ್ಯ ಶಬ್ದ ಪ್ರಯೋಗಿಸಿ, ನೋಡಿಕೊಳ್ಳುವುದಾಗಿ ಹೇಳಿ ಬೈಕ್‌ನಲ್ಲಿ ಹೊರಟರು’ ಎಂದು ಶಿವಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ತಕ್ಷಣ ಅಲ್ಲಿಯೇ ಇದ್ದ ಪೊಲೀಸರಿಗೆ ವಿಷಯ ತಿಳಿಸಿದೆ. ಗೇಟ್‌ ಬಳಿ ಬರುವಷ್ಟರಲ್ಲಿ ಬೆದರಿಕೆ ಹಾಕಿದವರು ಹೊರಟು ಹೋಗಿದ್ದರು. ಮತ್ತೆ ಅವರ ಸುಳಿವೇ ಸಿಗಲಿಲ್ಲ’ ಎಂದು ಹೇಳಿದರು.

ಪ್ರತಾಪ್ ಅವರನ್ನು ಶನಿವಾರ ಕಾಂಗ್ರೆಸ್ ಮುಖಂಡ ಎ.ಆರ್.ಕೃಷ್ಣಮೂರ್ತಿ ಭೇಟಿ ಮಾಡಿ ಮಾತನಾಡಿದ್ದಾರೆ.

‘ಯುಪಿಎಸ್‌ಸಿ ಪರೀಕ್ಷೆಗಾಗಿ ಹಗಲಿರುಳು ಓದಿದ್ದ ನನಗೆ ಪರೀಕ್ಷಾ ದಿನಾಂಕವೇ ಮರೆತು ಹೋಯಿತು. ಜೂನ್ 2ರಂದು ಪರೀಕ್ಷೆ ಇದೆ ಎಂದು ಬೆಳಿಗ್ಗೆ 9ಕ್ಕೆ ಗೊತ್ತಾಗಿ, ವೇಗವಾಗಿ ಸ್ಕೂಟರ್‌ನಲ್ಲಿ ಮೈಸೂರಿನ ಮರಿಮಲ್ಲಪ್ಪ ಶಾಲೆಗೆ ಬಂದೆ. ಅಷ್ಟೊತ್ತಿಗೆ ಪರೀಕ್ಷೆ ಆರಂಭವಾಗಿದ್ದರಿಂದ ಪ್ರವೇಶ ನೀಡಲಿಲ್ಲ. ಇದರಿಂದ ನೊಂದು ಗುಂಡ್ಲುಪೇಟೆ ತಾಲ್ಲೂಕಿನ ರಾಘವಾಪುರದ ಕಡೆಗೆ ಹೊರಟೆ. ಅಂದು ರಾತ್ರಿ ರಾಘವಾಪುರದ ಚಹಾದಂಗಡಿ ಬಳಿ ಕಣ್ಣಿಗೆ ಕತ್ತಲೆ ಹಿಡಿದಂತಾಗಿ ಎಚ್ಚರ ತಪ್ಪಿತು. ಮತ್ತೆ ಎಚ್ಚರವಾದಾಗ ದೇವಸ್ಥಾನದಲ್ಲಿ ಕಂಬವೊಂದಕ್ಕೆ ಕಟ್ಟಿ ಹಾಕಿ ಜನ ಹೊಡೆಯುತ್ತಿದ್ದರು’ ಎಂದು ಪ್ರತಾಪ್ ಹೇಳಿರುವುದಾಗಿ ಕೃಷ್ಣಮೂರ್ತಿ ವಿವರಿಸಿದರು.

‘ನನಗೆ ಒದಗಿದ ಸ್ಥಿತಿ ಯಾರಿಗೂ ಬರಬಾರದು. ನಾನು ರಾಮಕೃಷ್ಣ ಆಶ್ರಮದ ವಿದ್ಯಾರ್ಥಿ. ಉತ್ತಮ ಸಂಸ್ಕಾರ ಪಡೆದಿದ್ದೇನೆ. ದೇವರ ಉಪಾಸಕನಾಗಿದ್ದು, ದೇವಸ್ಥಾನವನ್ನು ಹಾಳು ಮಾಡುವಂತಹ ದುರ್ಬುದ್ಧಿ ನನಗಿಲ್ಲ. ಆದರೆ, ಅಂದು ಏನು ನಡೆದಿದೆ ಎಂದು ಗೊತ್ತಾಗುತ್ತಿಲ್ಲ’ ಎಂದೂ ಹೇಳಿದ ಎಂದು ಅವರು ತಿಳಿಸಿದರು.

‘ಪ್ರತಾಪ್ ಮಾನಸಿಕ ಅಸ್ವಸ್ಥ ಅಲ್ಲ. ಪ್ರಕರಣ ನಿಭಾಯಿಸುವಲ್ಲಿ ಸ್ಥಳೀಯ ಪೊಲೀಸರು ಸಂಪೂರ್ಣವಾಗಿ ಎಡವಿದ್ದಾರೆ’ ಎಂದು ಕೃಷ್ಣಮೂರ್ತಿ ಹೇಳಿದರು.

ಮತ್ತೆ ಒತ್ತಡಕ್ಕೆ ಒಳಗಾದ ಪ್ರತಾಪ್
ಪ್ರತಾಪ್ ಅವರನ್ನು ನೋಡಲು ರಾಜಕೀಯ ಮುಖಂಡರು ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಬರುತ್ತಿರುವುದು ಕುಟುಂಬಕ್ಕೆ ಕಿರಿಕಿರಿ ಉಂಟು ಮಾಡಿದೆ.

‘ಬಂದವರೆಲ್ಲರೂ ’ಅಂದು ಏನಾಯಿತು’ ಎಂಬ ಪ್ರಶ್ನೆ ಕೇಳುತ್ತಿರುವುದರಿಂದ ಮತ್ತಷ್ಟು ಒತ್ತಡಕ್ಕೆ ಒಳಗಾಗಿದ್ದಾನೆ’ ಎಂದು ಪ್ರತಾಪ್ ಅವರ ಸೋದರ ಸಂಬಂಧಿ ಮೋಹನ್ ತಿಳಿಸಿದ್ದಾರೆ.

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಪುಟ್ಟರಂಗಶೆಟ್ಟಿ, ಕಾಂಗ್ರೆಸ್‌ ಮುಖಂಡರಾದ ಆರ್‌.ಧ್ರುವನಾರಾಯಣ, ವಿಧಾನ ಮಂಡಲದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಹಾಗೂ ಸದಸ್ಯರು ಭೇಟಿ ನೀಡಿದ್ದರು.

ಪ್ರಕರಣಕ್ಕೆ ರಾಜಕೀಯ ಬಣ್ಣ
ಗುಂಡ್ಲುಪೇಟೆ:
ಪ್ರತಾಪ್‌ ಮೇಲೆ ನಡೆದಿರುವ ಹಲ್ಲೆ ಮತ್ತು ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ರಾಜಕೀಯ ಬೆರೆಸಲಾಗಿದೆ ಎಂದು ಲಿಂಗಾಯತ ಮತ್ತು ಕುರುಬ ಜನಾಂಗದ ಮುಖಂಡರು ಭಾನುವಾರ ಆರೋಪಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಎರಡೂ ಸಮುದಾಯಗಳ ಮುಖಂಡರು ಪಟ್ಟಣದ ಸೋಮೇಶ್ವರ ವಿದ್ಯಾರ್ಥಿನಿಲಯದಲ್ಲಿ ಸಭೆ ಸೇರಿ ಚರ್ಚಿಸಿದರು.

‘ಪ್ರತಾಪ್‌ ಅವರು ವಿಗ್ರಹ ಪೂಜೆಯನ್ನು ವಿರೋಧಿಸಿ ದೇವಾಲಯದ ವಿಗ್ರಹಗಳನ್ನು ಧ್ವಂಸ ಮಾಡಿ ಅರ್ಚಕರ ಮೇಲೂ ಹಲ್ಲೆ ಮಾಡಿದ್ದಾರೆ. ಅಲ್ಲಿದ್ದವರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಲು ಮುಂದಾಗಿದ್ದಾರೆ. ಬಳಿಕ ಗ್ರಾಮಸ್ಥರು ಹಗ್ಗದಿಂದ ಅವರ ಕೈಕಟ್ಟಿದ್ದಾರೆ. ವಿವಸ್ತ್ರರಾಗಿದ್ದ ಪ್ರತಾಪ್‌ಗೆ ಬಟ್ಟೆ ನೀಡಿದರೂ ಧರಿಸದೆ ಎಸೆದಿದ್ದಾರೆ’ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ಈ ಘಟನೆಯನ್ನು ಯಾರೂ ಬೆಂಬಲಿಸಬಾರದು. ಪ್ರಕರಣದ ತನಿಖೆಯನ್ನು ಎಸ್‌ಐಟಿ ಅಥವಾ ಸಿಐಡಿ ಇಲ್ಲವೇ ಸಿಬಿಐಗೆ ಒಪ್ಪಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

ಪೊಲೀಸರೇ ಕಾರಣ: ‘ಈ ಘಟನೆ ನಡೆಯಲು ಪೊಲೀಸರೇ ಕಾರಣ. ಅವರು ಸರಿಯಾಗಿ ಕೆಲಸ ಮಾಡಿದ್ದರೆ ಪ್ರಕರಣ ನಡೆಯುತ್ತಲೇ ಇರಲಿಲ್ಲ’ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !