ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಪ್ರತಾಪಸಿಂಹ ವಿರುದ್ಧ ಆಕ್ರೋಶ, ಕ್ಷಮೆ ಯಾಚಿಸಲು ಪುಷ್ಪಾ ಅಮರ್‌ನಾಥ್ ಆಗ್ರಹ

Last Updated 1 ಅಕ್ಟೋಬರ್ 2019, 9:37 IST
ಅಕ್ಷರ ಗಾತ್ರ

ಮೈಸೂರು: ಸಂಸದ ಪ್ರತಾಪಸಿಂಹ ವಿರುದ್ಧ ಕಾಂಗ್ರೆಸ್‌ನ ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಡಾ.ಪುಷ್ಪಾ ಅಮರ್‌ನಾಥ್ ಹಾಗೂ ಜಿಲ್ಲಾ ಕಾಂಗ್ರೆಸ್‌ ಗ್ರಾಮಾಂತರ (ಜಿಲ್ಲಾ) ಘಟಕದ ಅಧ್ಯಕ್ಷ ಬಿ.ಜೆ.ವಿಜಯಕುಮಾರ್ ಮಂಗಳವಾರ ಪ್ರತ್ಯೇಕ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

‘ಸಂಸದ ಪ್ರತಾಪಸಿಂಹ ಅವರು ಮಹಿಷ ದಸರಾ ಕುರಿತು ಆಡಿರುವ ಮಾತುಗಳಿಗೆ ತಕ್ಷಣವೇ ಬಹಿರಂಗ ಕ್ಷಮೆ ಯಾಚಿಸಬೇಕು. ಪೊಲೀಸ್‌ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಅವರು ಪ್ರಯೋಗಿಸಿದ ಅವಾಚ್ಯ ಶಬ್ದಗಳು ದೇಶವೇ ತಲೆ ತಗ್ಗಿಸುವ ವಿಚಾರ. ಅವರು ರಾಜೀನಾಮೆ ಕೊಡಬೇಕು, ಇಲ್ಲವೇ ಕ್ಷಮೆ ಯಾಚಿಸಬೇಕು’ ಎಂದು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪುಷ್ಪಾ ಅಮರ್‌ನಾಥ್ ಆಗ್ರಹಿಸಿದರು.‌

ಪ್ರತಾಪಸಿಂಹ ಅವರು ತಮ್ಮ ಪ್ರತಾಪವನ್ನು ಈ ರೀತಿ ತುಚ್ಛ ಪದ ಬಳಕೆಯ ಮೇಲೆ ತೋರದೆ ನೆರೆ ಸಂತ್ರಸ್ತರಿಗೆ ಪರಿಹಾರ ತಂದು ಕೊಡುವುದಕ್ಕೆ ತೋರಬೇಕು. ಅಧಿಕಾರಕ್ಕಾಗಿ ಇವರಿಗೆ ಪ್ರತಿಭಟನೆ ಮಾಡಲು ಬರುತ್ತದೆ. ಪರಿಹಾರದ ಹಣಕ್ಕೆ ಪ್ರತಿಭಟನೆ ಮಾಡಲು ಬರುವುದಿಲ್ಲವೇ ಎಂದು ಲೇವಡಿ ಮಾಡಿದರು.

ಮಹಿಷ ದಸರೆಯ ನೆಪದಲ್ಲಿ ಚಾಮುಂಡಿಯನ್ನು ಅವಹೇಳನ ಮಾಡುವುದು ಸರಿಯಲ್ಲ ಹಾಗೂ ಮೈಸೂರು ದಸರಾ ನಿಲ್ಲಿಸಬೇಕೆಂಬ ಮಹಿಷ ದಸರೆ ಸಮಿತಿ ಸದಸ್ಯರ ನಿಲುವಿಗೆ ಸಹಮತ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಕಾಂಗ್ರೆಸ್ ನಿಲುವು ಇಂದು ಬಹಿರಂಗ
ಬಿ.ಜೆ.ವಿಜಯಕುಮಾರ್ ಮಾತನಾಡಿ, ‘ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಕೂಡಲೇ ಮಹಿಷ ದಸರಾ ಆಚರಣಾ ಸಮಿತಿ ಸದಸ್ಯರನ್ನು ಕರೆದು ಮಾತುಕತೆ ನಡೆಸಬೇಕು. ಇಲ್ಲದಿದ್ದರೆ, ಅ.2ರಂದು ಕಾಂಗ್ರೆಸ್‌ ಪಕ್ಷದ ನಿಲುವು ಬಹಿರಂಗಪಡಿಸಲಾಗುವುದು’ ಎಂದು ಹೇಳಿದರು.

ಪ್ರತಾಪಸಿಂಹ ವಿರುದ್ಧ ಯೂತ್‌ ಕಾಂಗ್ರೆಸ್‌ ಕಾರ್ಯದರ್ಶಿ ದೀಪಕ್ ಅವರು ಕೆ.ಆರ್.ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

‘ನಿಮ್ಮನ್ನು ಕಾಯುವ ಪೊಲೀಸರ ಮೇಲೆ ಇಂತಹ ತುಚ್ಛ ಪದ ಬಳಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಪ್ರತಾಪಸಿಂಹ ದಸರೆಯನ್ನು ಕೋಮುಗಲಭೆಯ ದಸರೆಯನ್ನಾಗಿ ಮಾಡುತ್ತಿದ್ದಾರೆ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT