ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10 ಲಕ್ಷ ಆರೋಗ್ಯ ಚೀಟಿ ವಿತರಣೆಗೆ 3 ತಿಂಗಳ ಗಡುವು: ಪ್ರತಾಪ ಸಿಂಹ

Last Updated 7 ಜುಲೈ 2022, 12:32 IST
ಅಕ್ಷರ ಗಾತ್ರ

ಮೈಸೂರು: ‘ಆಯುಷ್ಮಾನ್‌ ಭಾರತ ಆರೋಗ್ಯ ಚೀಟಿ(ಎಬಿಆರ್‌ಕೆ) ವಿತರಣೆಗೆ ವಾರಕ್ಕೊಮ್ಮೆ ಶಿಬಿರ ನಡೆಸಬೇಕು. 3 ತಿಂಗಳಲ್ಲಿ 10 ಲಕ್ಷ ಫಲಾನುಭವಿಗಳಿಗೆ ಕಲ್ಪಿಸಬೇಕು’ ಎಂದು ಸಂಸದ ಪ್ರತಾಪ ಸಿಂಹ ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಮಹತ್ವದ ಯೋಜನೆ ಇದು. ತ್ವರಿತ ಅನುಷ್ಠಾನಕ್ಕೆ ಆದ್ಯತೆ ಕೊಡಬೇಕು. ವಿಳಂಬ ಸರಿಯಲ್ಲ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಕೆ.ಎಚ್. ಪ್ರಸಾದ್, ‘ಜಿಲ್ಲೆಯಲ್ಲಿ 10 ಲಕ್ಷ ಮಂದಿಗೆ ಕಾರ್ಡ್‌ಗಳನ್ನು ವಿತರಿಸಲಾಗಿದೆ. 16 ಲಕ್ಷ ಬಾಕಿ ಇದೆ. 3 ತಿಂಗಳಲ್ಲಿ 3 ಲಕ್ಷ ಗುರಿ ಸಾಧನೆಯಾಗಿದ್ದು, ಚುರುಕುಗೊಳಿಸಲಾಗುವುದು’ ಎಂದರು.

‘ಕೇಂದ್ರದ ಆದೇಶದಂತೆ ತ್ವರಿತವಾಗಿ ಅನುಷ್ಠಾನಗೊಳ್ಳಬೇಕು. ಇದಕ್ಕಾಗಿ ಮಾನವ ಸಂಪನ್ಮೂಲ ಸೇರಿದಂತೆ ಅಗತ್ಯ ನೆರವು ಕೊಡಲಾಗುವುದು. 3 ತಿಂಗಳಲ್ಲಿ ಗುರಿ ತಲುಪಬೇಕು’ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ಸೌಂದರ್ಯ ಹಾಳಾಗದಂತೆ ನೋಡಿಕೊಳ್ಳಿ:

‘ನಗರದಲ್ಲಿ ‘ಮತ್ತೆ ಹುಟ್ಟಿ‌ಬಾ’, ‘ಹುಟ್ಟುಹಬ್ಬದ ಶುಭಾಶಯ’ ಮೊದಲಾದ ಫ್ಲೆಕ್ಸ್, ಬ್ಯಾನರ್, ಕಟೌಟ್‌ಗಳ ಹಾವಳಿಗೆ ಕಡಿವಾಣ ಹಾಕಬೇಕು. ನಗರದ ಸೌಂದರ್ಯ ಹಾಳು ಮಾಡುವವರಿಗೆ ದಂಡ ವಿಧಿಸಬೇಕು. ರೈಲ್ವೆ ಕೆಳಸೇತುವೆ, ಪ್ರಮುಖ ಗೋಡೆಗಳಲ್ಲಿ ಚಿತ್ರಗಳನ್ನು ಬರೆಸಬೇಕು’ ಎಂದು ಸಂಸದರು ಸೂಚಿಸಿದರು.

‘ನರಸಿಂಹರಾಜ ಕ್ಷೇತ್ರದಲ್ಲಿ 3 ವಾರ್ಡ್‌ಗಳನ್ನು ಬಿಟ್ಟು ಉಳಿದ ಕಡೆಗಳಿಗೆ ನಿತ್ಯ ನೀರು ಪೂರೈಸಲಾಗುತ್ತಿದೆ. ನಗರದ ಹೊರವಲಯದ ಬಡಾವಣೆಗಳಿಗೆ ನೀರು ನೀಡಲು ‘ಪ್ರೀಪೇಯ್ಡ್‌ ವ್ಯವಸ್ಥೆ’ ಜಾರಿಗೊಳಿಸಲಾಗಿದೆ. ಅಲ್ಲಿನ ನಿವಾಸಿಗಳು ಮುಂಗಡ ಹಣ ಪಾವತಿಸಿದರೆ ಪಾಳಿಕೆಯಿಂದ ಸರಬರಾಜು ಮಾಡಲಾಗುತ್ತದೆ. ಈಗಾಗಲೇ ಪೊಲೀಸ್ ಬಡಾವಣೆಯವರು ಹೀಗೆ ಪಡೆಯುತ್ತಿದ್ದಾರೆ’ ಎಂದು ಲಕ್ಷ್ಮಿಕಾಂತ ಸ್ಪಷ್ಟಪಡಿಸಿದರು.

ಎಇಇಗಳು ತರಾಟೆಗೆ:

‘ಎಇಇಗಳು ಸ್ಥಳಕ್ಕೆ ಹೋಗುವುದಿಲ್ಲ; ಪರಿಶೀಲಿಸುವುದಿಲ್ಲ. ಇದರಿಂದ ಪ್ರಗತಿ ಆಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಕ್ರಿಯಿಸಿದ ಸಂಸದರು, ‘ನಿಮ್ಮಲ್ಲಿ ಪರ್ಸಂಟೇಜ್ ಕಡಿಮೆ ಅಲ್ವಾ? ಜಾಸ್ತಿ ಸಿಗಲ್ಲ! ಹೀಗಾಗಿ, ಕೆಲಸಗಳೂ ಆಗುವುದಿಲ್ಲ. ಸಿಗುವ ಕಡೆಗೆ ವರ್ಗಾವಣೆ ತೆಗೆದುಕೊಂಡು ಬಿಡಿ’ ಎಂದು ಗ್ರಾಮ ಸಡಕ್ ಯೋಜನೆಗೆ ಸಂಬಂಧಿಸಿದ ಅಧಿಕಾರಿಗೆ ಕುಟುಕಿದರು.

‘ನಗರದ ವರ್ತುಲ ರಸ್ತೆಯ ಸೇವಾ ರಸ್ತೆಯುದ್ದಕ್ಕೂ ಮತ್ತು ವಿಭಜಕದಲ್ಲಿ ಸಸಿಗಳನ್ನು ನೆಡಬೇಕು’ ಎಂದು ಡಿಸಿಎಫ್‌ ಕಮಲಾ ಕರಿಕಾಳನ್ ಅವರಿಗೆ ಸೂಚಿಸಿದರು.

ಸಂಸದರ ಸೂಚನೆಗಳು

* ಅಧಿಕಾರಿಗಳು ಮುಂದಿನ ಸಭೆಯಲ್ಲಿ ಕೆಲಸಗಳ ಫೋಟೋಗಳನ್ನೂ ತೋರಿಸಬೇಕು. ರಾಜಕಾರಣಿಗಳನ್ನು ಮಂಗ್ಯಾ ಮಾಡುವ ಅಂಕಿ–ಅಂಶಗಳನ್ನು ನನಗೆ ಕೊಡಬೇಡಿ.

* ರಕ್ತಚಂದನದಿಂದ ಹೆಚ್ಚು ಲಾಭ ಬರುತ್ತದೆ. ಅದನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು. ‘ಪುಷ್ಪ’ ಚಲನಚಿತ್ರ ತೋರಿಸಿಯಾದರೂ ಕೃಷಿಕರಿಗೆ ಅರಿವು ಮೂಡಿಸಿರಿ.

* ಇಲ್ಲಿಯವರೇ ಆದ ಧನಂಜಯ, ಚಿಕ್ಕಣ್ಣ ಮೊದಲಾದ ಚಲನಚಿತ್ರ ನಟರಲ್ಲಿ ಮನವಿ ಮಾಡಿಕೊಂಡು, ನಮ್ಮ ಭಾಗದ ಉತ್ಪನ್ನಗಳ ಪ್ರಚಾರವನ್ನು ಅವರಿಂದ ಮಾಡಿಸಿ. ಚಿಕ್ಕ ಚಿಕ್ಕ ವಿಡಿಯೊಗಳನ್ನು ಸಿದ್ಧಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಿ. ವಿಶಿಷ್ಟವಾಗಿ ಏನನ್ನಾದರೂ ಮಾಡಿ. ಅನುದಾನದ ಜವಾಬ್ದಾರಿ ನನಗೆ ಬಿಡಿ.

ದನದ ದೊಡ್ಡಿ ಮಾಡೋಣವಾ?

ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಪಕರಣಗಳನ್ನು ಅಳವಡಿಸದ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ, ‘ಆ ಆಸ್ಪತ್ರೆ ದನದ ದೊಡ್ಡಿ ಮಾಡೋಣವಾ? ಪಾಲಿಕೆಗೆ ಕೊಟ್ಟು ಬಿಡಿ; ಅಲ್ಲಿ ಬಿಡಾಡಿ ದನಗಳನ್ನಾದರೂ ಸಾಕಲಿ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಟ್ಟಡ ಕಟ್ಟಿಸಿಕೊಡಲಾಗಿದ್ದರೂ ಉಪಕರಣಗಳೇ ಇಲ್ಲವಾದರೆ ಏನು ಪ್ರಯೋಜನ? ಪ್ರಸ್ತಾವ ಕಳುಹಿಸಿ ಸುಮ್ಮನೆ ಕುಳಿತರೆ ಆಗುವುದಿಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

‘ಆಸ್ಪತ್ರೆಗೆ ಬಂದವರಿಗೆ ರೋಗ ಉಲ್ಬಣ ಆಗುವಂಥ ಪರಿಸ್ಥಿತಿ ಇರಬಾರದು. ಅರ್ಧ ರೋಗ ಗುಣಮುಖ ಆಗುವಂತಿರಬೇಕು. ಈ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲು ಅವಕಾಶವಿದೆ’ ಎಂದರು.

‘ನಗರದಲ್ಲಿ 40ಸಾವಿರ ನೀರಿನ ಸಂಪರ್ಕಗಳಿವೆ. ಈವರೆಗೆ 6,500 ಮೀಟರ್ ಅಳವಡಿಸಲಾಗಿದೆ. ಪ್ರತಿ ತಿಂಗಳು 2ರಿಂದ 3ಸಾವಿರ ಸಂಪರ್ಕಗಳಿಗೆ ಮೀಟರ್‌ ಅಳವಡಿಸಲಾಗುತ್ತಿದೆ. 7ರಿಂದ 8 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು’ ಎಂದು ಮಹಾನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ ತಿಳಿಸಿದರು.

‘ಆನೆಗಳಿಗೆ ಆಹಾರ ಸಿಗುವಂತೆ ಮಾಡಿ’

‘ಅರಣ್ಯ ಪ್ರದೇಶವೆಲ್ಲವೂ ಲಂಟನಾದಿಂದ ತುಂಬಿ ಹೋಗಿದೆ. ಮೇಯಲು ಹುಲ್ಲಾಗಲಿ, ಬಿದಿರಾಗಲಿ ಸಿಗುತ್ತಿಲ್ಲ. ಹೀಗಾಗಿ, ಆನೆಗಳು ಆಹಾರ ಅರಸಿ ಜನವಸತಿ ಪ್ರದೇಶಗಳಿಗೆ ಬರುತ್ತಿವೆ. ಇದನ್ನು ತಡೆಯಲು ಅರಣ್ಯದಲ್ಲೇ ಅವುಗಳಿಗೆ ಆಹಾರ ಸಿಗುವಂತೆ ಮಾಡಬೇಕು’ ಎಂದು ಸಂಸದರು ನಿರ್ದೇಶನ ನೀಡಿದರು.

‘ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಕಾರ್ಯಕ್ರಮ ಪ್ರಗತಿ ಪರಿಶೀಲಿಸುವಾಗ, ‘ಆದಿವಾಸಿಗಳಿಗೆ ಮೊಟ್ಟೆ‌ ಕೊಡಲಾಗುತ್ತಿದ್ದರೂ ಅವರ ದೇಹ ಕೃಶವಾಗಿರುತ್ತದೆ. ಇಲಾಖೆಯವರು ಮಾತ್ರ ದಷ್ಟ–ಪುಷ್ಟವಾಗಿರುತ್ತಾರೆ’ ಎಂದು ಸಂಸದರು ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

‘ಇಲ್ಲಿ ಹಲವು ವರ್ಷಗಳಿಂದ ಇದ್ದೀರಿ. ಮೈಸೂರಿನಲ್ಲಿ ಕೆಲಸದಿರಲು ತೋರುವ ಆಸಕ್ತಿಯನ್ನು ಕೆಲಸದಲ್ಲೂ ತೋರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರೇಮ್‌ಕುಮಾರ್ ಅವರಿಗೆ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT