ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಪ್ರತಾಪಸಿಂಹ ಅವರಿಂದ ದಾದಾಗಿರಿ: ನಂಜರಾಜಅರಸ್ ಟೀಕೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆದೇಶಕ್ಕೆ ಬೆಲೆ ಕೊಡಲು ಆಗ್ರಹ
Last Updated 16 ನವೆಂಬರ್ 2019, 9:20 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಎನ್‌ಟಿಎಂ ಶಾಲೆಯನ್ನು ಸ್ಥಳಾಂತರಿಸಿ ಅಲ್ಲಿ ಸ್ವಾಮಿ ವಿವೇಕಾನಂದ ಅವರ ಸ್ಮಾರಕ ನಿರ್ಮಿಸುವಂತೆ ಸಂಸದ ಪ್ರತಾಪಸಿಂಹ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿರುವುದು ಉದ್ದಟತನದ ವರ್ತನೆ ಎಂದು ನಿವೃತ್ತ ಪ್ರಾಧ್ಯಾಪಕ ಪಿ.ವಿ.ನಂಜರಾಜ ಅರಸ್ ಟೀಕಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಲೆಯನ್ನು ಯಥಾಸ್ಥಿತಿಯಲ್ಲಿಯೇ ಉಳಿಸುವಂತೆ ಸ್ಪಷ್ಟವಾದ ಸೂಚನೆ ಕೊಟ್ಟಿರುವಾಗ ಪ್ರತಾಪಸಿಂಹ ಪ್ರಗತಿಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡುವ ಮೂಲಕ ತಮ್ಮ ಅಧಿಕಾರದ ವ್ಯಾಪ್ತಿಯನ್ನು ಮೀರಿದ್ದಾರೆ. ಇದೊಂದು ರೀತಿಯ ದಾದಾಗಿರಿ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ಸ್ವಾಮಿ ವಿವೇಕಾನಂದ ಅವರು ಈ ಶಾಲೆಯಲ್ಲಿ ನಿಜಕ್ಕೂ ತಂಗಿರಲಿಲ್ಲ. ಇವರು ಮೈಸೂರಿಗೆ ಬಂದಾಗ ದಿವಾನ ಶೇಷಾದ್ರಿ ಅಯ್ಯರ್ ಅವರ ಭವನದಲ್ಲಿ ತಂಗಿದ್ದರು ಎಂಬುದಕ್ಕೆ ಆಧಾರಗಳಿವೆ. ರಾಮಕೃಷ್ಣ ಆಶ್ರಮದ ಅಧಿಕೃತ ಸ್ವಾಮಿ ಸೋಮನಾಥನಂದ ಅವರ ‘ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ’ ಪುಸ್ತಕದ 133ನೇ ಪುಟದಲ್ಲಿ ಉಲ್ಲೇಖವಾಗಿದೆ. ಇದನ್ನು ವಿಶ್ರಾಂತ ಕುಲಪತಿ ಚಿದಾನಂದಗೌಡ ಓದಬೇಕು ಎಂದು ಆಗ್ರಹಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ‘ಭೇಟಿ ಬಚಾವೊ ಭೇಟಿ ಪಡಾವೊ’ ಎಂದು ಹೇಳಿದರೆ ಅವರ ಪಕ್ಷದ ಮುಖಂಡರು ‘ಭೇಟಿ ಬಗಾವೊ, ಸ್ಮಾರಕ್ ಬನಾವೊ’ ಎಂಬಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಚಾಟಿ ಬೀಸಿದರು.

ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ.ಸುದರ್ಶನ್ ಮಾತನಾಡಿ, ‘ಶಾಲೆಯ ಪರ ನಡೆಯುತ್ತಿರುವ ಹೋರಾಟದಲ್ಲಿ ಬಲಪಂಥೀಯರೂ ಇದ್ದಾರೆ, ಎಡಪಂಥೀಯರೂ ಇದ್ದಾರೆ. ಇದು ಯಾವುದೇ ಪಂಥದ ಚಳವಳಿ ಅಲ್ಲ. ಕನ್ನಡಪರ ಮನಸ್ಸುಳ್ಳವರೆಲ್ಲರೂ ರೂಪಿಸಿರುವ ಚಳವಳಿ’ ಎಂದು ಪ್ರತಿಪಾದಿಸಿದರು.

‘ಈಗಲೂ ನಾವು ಸ್ಮಾರಕದ ವಿರೋಧಿಗಳಲ್ಲ. ಮುಖ್ಯಮಂತ್ರಿ ಅವರ ಸೂಚನೆಯಂತೆ ಶಾಲೆ ಬಿಟ್ಟು ಉಳಿದ ಜಾಗದಲ್ಲಿ ಸ್ಮಾರಕವನ್ನು ನಿರ್ಮಿಸಿಕೊಳ್ಳಲಿ. ಶಾಲೆಯ ಪಾಡಿಗೆ ಶಾಲೆ ಇರಲಿ’ ಎಂದು ಅವರು ಹೇಳಿದರು.

ಹೋರಾಟಗಾರ ಪುಟ್ಟಸಿದ್ಧಶೆಟ್ಟಿ ಮಾತನಾಡಿ, ‘ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರ್‌ಎಸ್‌ಎಸ್‌ ಕೃಪಾಪೋಷಿತ ಮಂಡಳಿಯವರ ಒತ್ತಡಕ್ಕೆ ಮಣಿಯುತ್ತಿಲ್ಲ. ಇದು ನಮಗೆ ಸಂತಸ ತರಿಸಿದೆ. ಅವರ ಸೂಚನೆಯಂತೆ ಎಲ್ಲರೂ ನಡೆದುಕೊಳ್ಳಲಿ. ಅವರು ಈಗಾಗಲೇ ನೀಡಿರುವ ಸೂಚನೆಗೆ ಬದ್ಧವಾಗಿರಲಿ’ ಎಂದು ಒತ್ತಾಯಿಸಿದರು.

ಹೊಸಕೋಟೆ ಬಸವರಾಜು, ಕರುಣಾಕರ್, ಅರವಿಂದಶರ್ಮ, ನಂದೀಶ್ ಜಿ.ಅರಸ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT