ಶುಕ್ರವಾರ, ಅಕ್ಟೋಬರ್ 23, 2020
27 °C
ರಾಜವಂಶಸ್ಥರಿಂದ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯ

ಖಾಸಗಿ ದರ್ಬಾರ್ ನಡೆಸಲು ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಶರನ್ನವರಾತ್ರಿ ಆಚರಣೆ ಪ್ರಯುಕ್ತ ಅರಮನೆಯಲ್ಲಿ ಈ ಬಾರಿ ಸರಳವಾಗಿ, ಸಂಪ್ರದಾಯದಂತೆ ಖಾಸಗಿ ದರ್ಬಾರ್ ನಡೆಸಲು ರಾಜವಂಶಸ್ಥರಿಂದ ಭರದ ಸಿದ್ಧತೆಗಳು ನಡೆಯುತ್ತಿವೆ.

ಈ ಬಾರಿ ಅ.17ರಿಂದ 26ವರೆಗೆ ಪ್ರಮೋದಾದೇವಿ ಒಡೆಯರ್‌ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಈ ಸಂಬಂಧ ಪಟ್ಟಿ ಸಿದ್ಧಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಕೋವಿಡ್‌ ಕಾರಣ ಸಾರ್ವಜನಿಕರ ವೀಕ್ಷಣೆಗೆ ನಿರ್ಬಂಧ ವಿಧಿಸಲಾಗಿದೆ.

ಅ.17 ಬೆಳಗ್ಗೆ 6.15 ರಿಂದ 6.30ರ ಶುಭ ಮುಹೂರ್ತದಲ್ಲಿ ಸಿಂಹಾಸನಕ್ಕೆ ಸಿಂಹದ ಮೂರ್ತಿ ಜೋಡಿಸುವ ಕಾರ್ಯ ನಡೆಯಲಿದೆ. ನಂತರ 7.45ರಿಂದ 8.15ರ ಶುಭ ಮುಹೂರ್ತದಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರಿಗೆ ಕಂಕಣಧಾರಣೆ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಕಳಸ ಪೂಜೆ ಸೇರಿ ಇತರ ಧಾರ್ಮಿಕ ಆಚರಣೆ ನಡೆಯಲಿದ್ದು, ನಂತರ ಯದುವೀರ್‌ ಖಾಸಗಿ ದರ್ಬಾರ್ ನಡೆಸಲಿದ್ದಾರೆ.

ಅ.21 ರಂದು ಬೆಳಿಗ್ಗೆ 9.45ಕ್ಕೆ ಸರಸ್ವತಿ ಪೂಜೆ ಹಾಗೂ ಅ. 25ಕ್ಕೆ ಆಯುಧ ಪೂಜೆ ನೆರವೇರಿಸಲಿದ್ದಾರೆ. ಪಟ್ಟದಾನೆ, ಕುದುರೆ, ಹಸು ಹಾಗೂ ವಾಹನಗಳಿಗೆ ಪೂಜೆ ನಡೆಯಲಿದೆ. ಅ‌.26ರಂದು ವಿಜಯದಶಮಿ ಮೆರವಣಿಗೆ ನಡೆಯಲಿದೆ. ಅರಮನೆ ಆವರಣದಲ್ಲಿರುವ ಭುವನೇಶ್ವರಿ ದೇವಸ್ಥಾನದಲ್ಲಿ ಬನ್ನಿಮರಕ್ಕೆ ಯದುವೀರ್‌ ಪೂಜೆ ಸಲ್ಲಿಸಲಿದ್ದಾರೆ.

ಕೋವಿಡ್‌ ಪರಿಸ್ಥಿತಿಯಿಂದಾಗಿ ಈ ಬಾರಿ ಅರಮನೆಯಲ್ಲಿ ವಜ್ರಮುಷ್ಟಿ ಕಾಳಗ ನಡೆಯುವುದು ಅನುಮಾನ. ನ.5ರಂದು ಬೆಳಿಗ್ಗೆ ಚಿನ್ನದ ಸಿಂಹಾಸ ನವನ್ನು ಸ್ವಸ್ಥಾನಕ್ಕೆ ಸೇರಿಸುವ ಮೂಲಕ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ.

ಮುಂದುವರಿದ ಗಜಪಡೆ ತಾಲೀಮು

ಗಜಪಡೆಗೆ ಭಾರ ಹೊರಿಸುವ ತಾಲೀಮು ಅರಮನೆ ಆವರಣದಲ್ಲಿ ಮುಂದುವರಿದಿದ್ದು, ಶುಕ್ರವಾರ ವಿಕ್ರಂ ಆನೆಯು ಮರಳಿನ ಮೂಟೆ, ಕಬ್ಬಿಣದ ತೊಟ್ಟಿಲು ಹೊತ್ತು ಸಾಗಿತು. ಅದರ ಜೊತೆಗೆ ಕ್ಯಾಪ್ಟನ್‌ ಅಭಿಮನ್ಯು, ಗೋಪಿ, ವಿಜಯಾ, ಕಾವೇರಿ ಸುಮಾರು ಮೂರು ಕಿ.ಮೀ ಹೆಜ್ಜೆ ಹಾಕಿದವು.

ಗುರುವಾರ ಅಭಿಮನ್ಯು ಮೇಲೆ 350 ಕೆ.ಜಿ. ಮರಳಿನ ಮೂಟೆ ಹೇರಿ ತಾಲೀಮು ನಡೆಸಲಾಗಿತ್ತು. ಶನಿವಾರ 450 ಕೆ.ಜಿ.ಭಾರ ಹೊರಿಸಲಾಗುತ್ತದೆ.

‘ಐದೂ ಆನೆಗಳು ಆರೋಗ್ಯವಾಗಿವೆ. ಪೂರಕವಾದ ಆಹಾರ ನೀಡುತ್ತಿದ್ದು, ನಿತ್ಯ ಬೆಳಿಗ್ಗೆ ಹಾಗೂ ಸಂಜೆ ತಾಲೀಮು ಮುಂದುವರಿಯಲಿದೆ’ ಎಂದು ಅರಣ್ಯ ಇಲಾಖೆ ಪಶುವೈದ್ಯ ಡಾ.ನಾಗರಾಜು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.