ಸೋಮವಾರ, ಅಕ್ಟೋಬರ್ 21, 2019
24 °C
ಜೆಎಸ್‌ಎಸ್‌ ‘ಗ್ಲೋಬಲ್‌ ಕ್ಯಾಂಪಸ್‌’ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶಿಲಾನ್ಯಾಸ

ಅಪೌಷ್ಟಿಕತೆಯು ದೇಶದ ಪ್ರಗತಿಗೆ ಅಡ್ಡಿ– ಕೋವಿಂದ್‌

Published:
Updated:
Prajavani

ಮೈಸೂರು: ‘ಕಳೆದ ಕೆಲ ದಶಕಗಳಿಂದ ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದೇವೆ. ಆದರೂ ಆರೋಗ್ಯ ಕ್ಷೇತ್ರ ಇಂದಿಗೂ ಪ್ರಮುಖ ಸವಾಲಾಗಿಯೇ ಉಳಿದುಕೊಂಡಿದೆ’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅಭಿಪ್ರಾಯಪಟ್ಟರು.

ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು (ಜೆಎಸ್‌ಎಸ್‌ ಎಎಚ್‌ಇಆರ್‌) ಮೈಸೂರಿನ ವರುಣಾದಲ್ಲಿ ನಿರ್ಮಿಸಲಿರುವ ನೂತನ ‘ಗ್ಲೋಬಲ್‌ ಕ್ಯಾಂಪಸ್‌’ಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

ಸಾಂಕ್ರಾಮಿಕ ರೋಗಗಳ ಜತೆಗೆ ಅಪೌಷ್ಟಿಕತೆಯು ಈ ದೇಶದ ಪ್ರಗತಿಗೆ ಅಡ್ಡಿಯಾಗಿ ಪರಿಣಮಿಸಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯನ್ನು ಬಳಸಿಕೊಂಡು ಆರೋಗ್ಯ ಕ್ಷೇತ್ರದ ಸವಾಲುಗಳನ್ನು ಎದುರಿಸಬಹುದು ಎಂದು ಅವರು ಸಲಹೆ ನೀಡಿದರು.

ಆರೋಗ್ಯ ಸೇವೆ ಜನರಿಗೆ ಸುಲಭವಾಗಿ ಲಭ್ಯವಾಗಬೇಕು. ‘ಆಯುಷ್ಮಾನ್ ಭಾರತ’ ಮತ್ತು ಇತರ ಆರೋಗ್ಯ ಯೋಜನೆಗಳ ಮೂಲಕ ಈ ಕ್ಷೇತ್ರದ ಸವಾಲುಗಳನ್ನು ಎದುರಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ರೋಗಗಳನ್ನು ನಿಯಂತ್ರಿಸಲು ಸ್ವಚ್ಛತೆ ಕಾಪಾಡುವುದು ಮುಖ್ಯ. ಸ್ವಚ್ಛ ಭಾರತ ಯೋಜನೆ ಮೂಲಕ ಇಡೀ ದೇಶದಲ್ಲಿ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ತಿಳಿಸಿದರು.

ರಾಜ್ಯಪಾಲ ವಜೂಭಾಯಿ ವಾಲಾ ಮಾತನಾಡಿ, ‘ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡುವ ಮಠಗಳಿಗೆ ಜನರು ಧನಸಹಾಯ ಮಾಡಬೇಕು. ಇಲ್ಲಿ ನೆರೆದಿರುವ ಎಲ್ಲರೂ ನಿಮ್ಮ ಗಳಿಕೆಯ ಶೇ 10 ರಷ್ಟು ಪಾಲನ್ನು ಮಠಗಳು ನಡೆಸುವ ಶೈಕ್ಷಣಿಕ ಸಂಸ್ಥೆಗಳಿಗೆ ನೀಡಲು ಮುಂದಾಗಿ’ ಎಂದು ಕರೆ ನೀಡಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ತುಮಕೂರು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಕೋವಿಂದ್‌ ಅವರ ಪತ್ನಿ ಸವಿತಾ ಕೋವಿಂದ್ ಪಾಲ್ಗೊಂಡಿದ್ದರು.

Post Comments (+)