ಶುಕ್ರವಾರ, ಅಕ್ಟೋಬರ್ 18, 2019
20 °C

ಜೆಎಸ್‌ಎಸ್‌ ಗ್ಲೋಬಲ್‌ ಕ್ಯಾಂಪಸ್‌ಗೆ 11ರಂದು ಶಿಲಾನ್ಯಾಸ

Published:
Updated:

ಮೈಸೂರು: ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯು (ಜೆಎಸ್‌ಎಸ್‌ಎಎಚ್‌ಇಆರ್‌) ಮೈಸೂರಿನ ವರುಣಾದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ‘ಗ್ಲೋಬಲ್‌ ಕ್ಯಾಂಪಸ್‌’ಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಅ.11 ರಂದು ಶಿಲಾನ್ಯಾಸ ನೆರವೇರಿಸಲಿದ್ದಾರೆ.

‘ವರುಣಾದಲ್ಲಿ ಸಂಜೆ 4 ಕ್ಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ರಾಜ್ಯಪಾಲ ವಜೂಭಾಯಿ ವಾಲಾ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪಾಲ್ಗೊಳ್ಳಲಿದ್ದಾರೆ’ ಎಂದು ಜೆಎಸ್‌ಎಸ್‌ಎಎಚ್‌ಇಆರ್‌ ಪ್ರೊ.ಚಾನ್ಸಲರ್‌ ಡಾ.ಬಿ.ಸುರೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಕೋವಿಂದ್‌ ಅವರು ಸುತ್ತೂರು ಮಠದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 104ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲೂ ಪಾಲ್ಗೊಳ್ಳಲಿದ್ದಾರೆ ಎಂದರು.

ಬೃಹತ್‌ ಕ್ಯಾಂಪಸ್‌: ಜೆಎಸ್‌ಎಸ್‌ ಅಕಾಡೆಮಿಯ ನೂತನ ಕ್ಯಾಂಪಸ್‌ 101 ಎಕರೆ ಪ್ರದೇಶದಲ್ಲಿ ತಲೆಎತ್ತಲಿದೆ. ಇದರಲ್ಲಿ ಶೇ 29 ರಷ್ಟು ಭಾಗದಲ್ಲಿ ಕಟ್ಟಡಗಳು ಇರಲಿದ್ದು, ಶೆ 70 ಕ್ಕೂ ಅಧಿಕ ಪ್ರದೇಶ ಹಸಿರಿನಿಂದ ಕೂಡಿರಲಿದೆ.

8000 ವಿದ್ಯಾರ್ಥಿಗಳು ಮತ್ತು 800 ಬೋಧಕರ ವಾಸ್ತವ್ಯಕ್ಕೆ ಹಾಸ್ಟೆಲ್‌ ಸೌಲಭ್ಯ, 2000 ಆಸನಗಳುಳ್ಳ ಆಡಿಟೋರಿಯಂ, ಮಲ್ಟಿಲೆವೆಲ್‌ ವಾಹನ ಪಾರ್ಕಿಂಗ್‌ ಒಳಗೊಂಡಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರಲಿದೆ.

ಜೆಎಸ್‌ಎಸ್‌ ಅಕಾಡೆಮಿಯ ಕಾರ್ಯದರ್ಶಿ ಮಂಜುನಾಥ್‌, ಕುಲಪತಿ ಡಾ.ಎಚ್‌.ಬಸವನಗೌಡಪ್ಪ, ಕುಲಸಚಿವ ಡಾ.ಬಿ.ಮಂಜುನಾಥ್‌, ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

Post Comments (+)