ಶನಿವಾರ, ನವೆಂಬರ್ 23, 2019
18 °C
ಎಲ್ಲಿದ್ದಿಯೋ ಕುಮಾರ ಎನ್ನುವವರು: ಎಚ್ .ಡಿ.ಕುಮಾರಸ್ವಾಮಿ ಲೇವಡಿ

ಜಾತಿ ವ್ಯಾಮೋಹಕ್ಕೆ ಸಿಲುಕಿದ್ದಾರೆ ನೆರೆ ಸಂತ್ರಸ್ತರು

Published:
Updated:
Prajavani

ಮೈಸೂರು: ‘ನೆರೆ ಸಂತ್ರಸ್ತರು ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನೇ ಕಳೆದುಕೊಂಡಿದ್ದು, ಬಹುಶಃ ಜಾತಿಯ ವ್ಯಾಮೋಹಕ್ಕೆ ಸಿಲುಕಿ ಸುಮ್ಮನಾಗಿರಬಹುದು’ ಎಂದು ಜೆಡಿಎಸ್‌ ಶಾಸಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಪ್ರವಾಹಪೀಡಿತರಿಗೆ, ಇದುವರೆಗೂ ಕೇಂದ್ರ ಸರ್ಕಾರದಿಂದ ಬಿಡಿಗಾಸೂ ಸಿಕ್ಕಿಲ್ಲ. ಅದೇ ಒಂದು ವೇಳೆ ನಾನು ಅಧಿಕಾರದಲ್ಲಿ ಇದ್ದಿದ್ದರೆ, ಇಷ್ಟೊತ್ತಿಗಾಗಲೇ ‘ಎಲ್ಲಿದ್ದೀಯೋ ಕುಮಾರ?’ ಅನ್ನೋರು!’ ಎಂದು ಕುಟುಕಿದರು.

‘ಕಷ್ಟಪಟ್ಟು ಕುತಂತ್ರ ಮಾಡಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೇರಿದ ಯಡಿಯೂರಪ್ಪ ಅವರಿಗೆ ಸದ್ಯದ ಪರಿಸ್ಥಿತಿಯಲ್ಲಿ ಸ್ವತಂತ್ರವಾಗಿ ಕೆಲಸ ಮಾಡುವ ಅವಕಾಶವೇ ಇಲ್ಲವಾಗಿದೆ. ಸಚಿವರೊಂದಿಗೆ ಅವರಿಗೆ ಹೊಂದಾಣಿಕೆಯೂ ಇಲ್ಲ. ಹೀಗಾಗಿ, ಸರ್ಕಾರವನ್ನು ನಾವ್ಯಾರೂ ಬೀಳಿಸುವ ಯತ್ನ ಮಾಡುವುದಿಲ್ಲ. ಬಿಜೆಪಿಯ ವರಿಷ್ಠರೇ ಆ ಕೆಲಸ ಮಾಡಿ, ಚುನಾವಣೆಗೆ ಹೋಗುತ್ತಾರೆ’ ಎಂದರು.

‘ಸಾಲಮನ್ನಾಕ್ಕಾಗಿ ಮೀಸಲಿಟ್ಟಿದ್ದ ಅನುದಾನದಲ್ಲೇ ಉಳಿದಿರುವ ₹ 4000 ಕೋಟಿ–₹ 5000 ಕೋಟಿ ಹಣವನ್ನೇ ತಾತ್ಕಾಲಿಕವಾಗಿ ನೆರೆ ಸಂತ್ರಸ್ತರ ನೆರವಿಗಾಗಿ ಬಳಸಿಕೊಳ್ಳಬಹುದು. ಈ ಸರ್ಕಾರ ಅದನ್ನೂ ಮಾಡುತ್ತಿಲ್ಲ’ ಎಂದು ಟೀಕಿಸಿದರು. ನೆರೆ ಪರಿಹಾರ ಕಾರ್ಯಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾ ಉಸ್ತುವಾರಿಯಾಗಿರುವ ವಸತಿ ಸಚಿವ ವಿ. ಸೋಮಣ್ಣ ಅವರ ಕಾರ್ಯವೈಖರಿಯನ್ನೂ ಟೀಕಿಸಿದ ಅವರು, ‘ಮೈಸೂರಿನಲ್ಲೇ ಠಿಕಾಣಿ ಹೂಡಿ, ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ, ಹೋಳಿಗೆ ಊಟ ಬಡಿಸುವುದರಲ್ಲೇ ಬ್ಯುಸಿಯಾಗಿದ್ದಾರೆ’ ಎಂದು ಛೇಡಿಸಿದರು.

ಜೆಡಿಎಸ್‌ ಸಭೆಗೆ ಆಹ್ವಾನ ಇರಲಿಲ್ಲ: ಜಿ.ಟಿ.ದೇವೇಗೌಡ

ಮೈಸೂರು: ಮೈಸೂರಿನಲ್ಲಿ ನಡೆದ ಜೆಡಿಎಸ್‌ ಮುಖಂಡರ ಚಿಂತನ–ಮಂಥನ ಸಭೆಗೆ ಶಾಸಕ ಜಿ.ಟಿ.ದೇವೇಗೌಡ ಗೈರಾಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆಹ್ವಾನವೇ ಇರದಿದ್ದರಿಂದ ತಾವು ಸಭೆಗೆ ಹೋಗಲಿಲ್ಲ ಎಂದಿದ್ದಾರೆ.

‘ರಾಜಕೀಯದಲ್ಲಿ ನನಗೆ ಯಾರೊಬ್ಬರೂ ಗುರುವಿಲ್ಲ. ಸಾ.ರಾ. ಮಹೇಶ್‌ಗೆ ಕೆಟ್ಟವರಾದವರು ಕುಮಾರಸ್ವಾಮಿ ಅವರಿಗೂ ಕೆಟ್ಟವರೇ. ನಮ್ಮ ಜನರು ಕುಮಾರಸ್ವಾಮಿ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ’ ಎಂದು ಅಸಮಾಧಾನ ಹೊರಹಾಕಿದರು.

ಅವರ ಗೈರುಹಾಜರಾತಿ ಬಗ್ಗೆ ಪ್ರತಿಕ್ರಿಯಿಸಿದ ಎಚ್‌.ಡಿ.ಕುಮಾರಸ್ವಾಮಿ, ‘ಹಿಂದೆ ದಸರಾದ ಉಸ್ತುವಾರಿ ಹೊತ್ತಿದ್ದ ಜಿ.ಟಿ.ದೇವೇಗೌಡರು, ತಮ್ಮ ಅನುಭವ ಧಾರೆ ಎರೆಯಲಿಕ್ಕಾಗಿ ಬಿಜೆಪಿ ಸಚಿವರಿಗೆ ಬೆಂಬಲ ನೀಡುತ್ತಿದ್ದಾರೆ. ದಸರಾದಲ್ಲಿ ಬ್ಯುಸಿಯಾಗಿದ್ದಾರೆ. ದಸರಾ ಮಾಡಿ ಎಂದು ನಾನೇ ಕಳುಹಿಸಿಕೊಟ್ಟಿದ್ದೇನೆ’ ಎಂದು ಕುಟುಕಿದರು.

ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ, ‘ಜಿ.ಟಿ.ದೇವೇಗೌಡರ ಬಗ್ಗೆ ನಾವ್ಯಾರೂ ಮಾತನಾಡಿಲ್ಲ. ಅವರ ಎಲ್ಲಾ ಹೇಳಿಕೆ ಗಮನಿಸಿದ್ದೇನೆ. ಎಲ್ಲಿಗೆ ಬೇಕಾದರೂ ಹೋಗಲಿ; ಅವರನ್ನು ಯಾರೂ ಹಿಡಿದಿಟ್ಟುಕೊಂಡಿಲ್ಲ’ ಎಂದರು.

ಸಾರ್ವತ್ರಿಕ ಚುನಾವಣೆಯೇ ಎದುರಾಗಬಹುದು: ಎಚ್‌.ಡಿ.ದೇವೇಗೌಡ

ಮಂಡ್ಯ: ರಾಜ್ಯದಲ್ಲಿ, ಮುಂದೆ ಉಪ ಚುನಾವಣೆಗಿಂತ ಸಾರ್ವತ್ರಿಕ ಚುನಾವಣೆಯೇ ಎದುರಾಗುವ ಸಾಧ್ಯತೆ ಹೆಚ್ಚು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಗುರುವಾರ ಇಲ್ಲಿ ಹೇಳಿದರು.

ಕೆ.ಆರ್‌.ಪೇಟೆ ಪಟ್ಟಣದಲ್ಲಿ ಗುರುವಾರ ನಡೆದ ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಈ ವರ್ಷಾಂತ್ಯ ಇಲ್ಲವೇ ಮುಂದಿನ ವರ್ಷ ಜಾರ್ಖಂಡ್‌, ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಜೊತೆಯಲ್ಲೇ ರಾಜ್ಯದಲ್ಲೂ ಚುನಾವಣೆ ನಡೆಯಬಹುದು’ ಎಂದರು.

 

ಪ್ರತಿಕ್ರಿಯಿಸಿ (+)