ಮಂಗಳವಾರ, ಅಕ್ಟೋಬರ್ 19, 2021
22 °C
ಜಮೀನುಗಳಲ್ಲಿ ಕೊಳೆಯುತ್ತಿರುವ ಹೂವಿನ ರಾಶಿ

ಜಯಪುರ: ಬೆಲೆ ಕುಸಿತದಿಂದ ಸಂಕಷ್ಟದಲ್ಲಿ ಪುಷ್ಪ ಕೃಷಿಕರು

ಬಿಳಿಗಿರಿ ಆರ್. Updated:

ಅಕ್ಷರ ಗಾತ್ರ : | |

Prajavani

ಜಯಪುರ: ಮೈಸೂರು ತಾಲ್ಲೂಕಿನಾದ್ಯಂತ ಹಲವು ರೈತರು ಸೇವಂತಿಗೆ, ಜರ್ಬೇರಾ, ಕೆಂಪು ಗುಲಾಬಿ, ಚೆಂಡು ಹೂವು, ಸೂಜು ಮಲ್ಲಿಗೆ, ಕನಕಾಂಬರ ಹೂವು ಬೆಳೆದಿದ್ದು, ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಕಳೆದ ಒಂದೂವರೆ ತಿಂಗಳಿನಿಂದಲೂ ಹೂವಿನ ದರವು ಗಣನೀಯವಾಗಿ ಇಳಿಯುತ್ತಿದೆ. ಹೋಬಳಿಯ ತಳೂರು ಗ್ರಾಮದ ರೈತ ಸೋಮಶೇಖರ್ 2 ಎಕರೆ ಯಲ್ಲಿ ಜರ್ಬೆರಾ ಹೂವು ಬೆಳೆದಿದ್ದು, ಬೆಲೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

‘ಈ ಹಿಂದೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗುಜರಾತ್, ದೆಹಲಿ ರಾಜ್ಯಗಳಿಗೆ ಬೆಂಗಳೂರಿನಿಂದ ಜರ್ಬೆರಾ ಹೂವು ಹೆಚ್ಚಾಗಿ ಸರಬರಾಜಾಗುತ್ತಿತ್ತು. ಈಗ ಕಡಿಮೆ ಪ್ರಮಾಣದ ಹೂವು ರಫ್ತಾಗುತ್ತಿದ್ದು, ಸ್ಥಳೀಯ ಹೂವು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಜರ್ಬೇರಾ ಹೂವುಗಳನ್ನು ಕಿತ್ತು ಕಸದ ಗುಂಡಿಗೆ ಹಾಕಲಾಗುತ್ತಿದೆ’ ಎಂದು ಸೋಮಶೇಖರ್‌ ಹೇಳಿದರು.

‘ಆಯುಧ ಪೂಜೆ ಮತ್ತು ಕಾರ್ತಿಕ ಮಾಸದಲ್ಲಿ ಹೂವಿಗೆ ಬೇಡಿಕೆ ಹೆಚ್ಚಿರುವುದ ರಿಂದ ಬೆಳೆಗಾರರು ಯಥೇಚ್ಛವಾಗಿ ಹೂಗಳನ್ನು ಬೆಳೆಯುತ್ತಾರೆ. ಆದರೆ, ಅವಧಿಗೆ ಮೊದಲೇ ಚೆಂಡು, ಸೇವಂತಿಗೆ ಹೂವು ಮಾರುಕಟ್ಟೆಗೆ ಬರುತ್ತಿದ್ದು, ಚೆಂಡು ಹೂವು ಕೆ.ಜಿ.ಗೆ ₹5 ದರವಿದೆ. ಒಂದು ಮಾರು ಸೇವಂತಿಗೆ ₹5 ರಿಂದ ₹10ಕ್ಕೆ ಮಾರಾಟವಾಗುತ್ತಿದೆ. ಕೆಂಪು ಗುಲಾಬಿಯನ್ನು ಕೇಳುವವರೇ ಇಲ್ಲ’ ಎಂದು ನಾಗನಹಳ್ಳಿಯ ರೈತ ಬಸವರಾಜು ತಿಳಿಸಿದರು.

‘ನಿರೀಕ್ಷೆಯಂತೆ ಮದುವೆ ಶುಭ ಸಮಾರಂಭ, ಹಬ್ಬಗಳು ಪ್ರಾರಂಭವಾದರೆ ಹೂವಿನ ದರ ಹೆಚ್ಚಾಗುತ್ತದೆ. ಪುಷ್ಪಕೃಷಿಕರು ಅರಳಿರುವ ಹೂವುಗಳನ್ನು ಗಿಡದಿಂದ ಬೇರ್ಪಡಿಸಬೇಕು. ಗಿಡಗಳನ್ನು ಕಾಪಾಡಿಕೊಂಡರೆ ನಿರೀಕ್ಷಿತ ಆದಾಯ ಪಡೆಯಬಹುದು’ ಎಂದು ಸಹಾಯಕ ತೋಟಗಾರಿಕೆ ಅಧಿಕಾರಿ ಡಿ.ವಿನೂತನ್ ಸಲಹೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು