ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ದೇವಾಲಯಗಳ ಸಕ್ರಮಕ್ಕೆ ಖಾಸಗಿ ವಿಧೇಯಕ ಮಂಡಿಸುವೆ: ಎಸ್‌.ಎ.ರಾಮದಾಸ್‌

Last Updated 18 ಸೆಪ್ಟೆಂಬರ್ 2021, 8:43 IST
ಅಕ್ಷರ ಗಾತ್ರ

ಮೈಸೂರು: ‘ರಾಜ್ಯದಲ್ಲಿರುವ ಅನಧಿಕೃತ ದೇವಾಲಯಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ಸೆ.23ರಂದು ವಿಧಾನಸಭೆಯ ಅಧಿವೇಶನದಲ್ಲಿ ‘ಕರ್ನಾಟಕ ರಾಜ್ಯದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡ ಹಿಂದೂ ದೇವಾಲಯಗಳ ಕ್ರಮಬದ್ಧಗೊಳಿಸುವಿಕೆಯ ಕಾಯ್ದೆ–2021’ ಎಂಬ ಖಾಸಗಿ ವಿಧೇಯಕವನ್ನು ಮಂಡಿಸಲಿದ್ದೇನೆ’ ಎಂದು ಶಾಸಕ ಎಸ್‌.ಎ.ರಾಮದಾಸ್‌ ತಿಳಿಸಿದರು.

‘ರಾಜ್ಯದಲ್ಲಿ 2,818 ಅನಧಿಕೃತ ದೇವಸ್ಥಾನಗಳಿವೆ. ಈ ಪೈಕಿ ರಸ್ತೆ ಮಧ್ಯೆ ಇರುವ, ಓಡಾಟಕ್ಕೆ ಸಮಸ್ಯೆಯಾಗಿರುವ ದೇವಸ್ಥಾನಗಳನ್ನು ಬಿಟ್ಟು ಉಳಿದವುಗಳನ್ನು ಸಕ್ರಮಗೊಳಿಸಬೇಕು ಎಂಬ ಒತ್ತಾಸೆಯಿಂದಾಗಿ ಖಾಸಗಿ ವಿಧೇಯಕವನ್ನು ಸಿದ್ಧಪಡಿಸಿ ಮುಖ್ಯಮಂತ್ರಿ ಹಾಗೂ ವಿಧಾನಸಭಾಧ್ಯಕ್ಷರಿಗೆ ಸಲ್ಲಿಸಿದ್ದೇನೆ. ಇದರಿಂದ 2009ರ ನಂತರ ನಿರ್ಮಾಣಗೊಂಡ ಅನಧಿಕೃತ ದೇವಸ್ಥಾನಗಳನ್ನು ಕ್ರಮಬದ್ಧಗೊಳಿಸಲು ಕಾನೂನಾತ್ಮಕ ಬಲ ಸಿಗಲಿದೆ. ಈ ವಿಧೇಯಕದಲ್ಲಿ 10 ವಿಭಾಗಗಳಿವೆ. ಸಕ್ಷಮ ಪ್ರಾಧಿಕಾರ ರಚನೆ, ಅದರ ಅಧಿಕಾರ ವ್ಯಾಪ್ತಿ, ಕ್ರಮಬದ್ಧಗೊಳಿಸುವಿಕೆ, ಭವಿಷ್ಯದಲ್ಲಿ ಅನಧಿಕೃತವಾಗಿ ದೇವಸ್ಥಾನ ನಿರ್ಮಿಸುವವರ ವಿರುದ್ಧ ಕ್ರಮಕೈಗೊಳ್ಳುವುದು ಸೇರಿದಂತೆ ಅನೇಕ ಅಂಶಗಳನ್ನು ಒಳಗೊಂಡಿದೆ’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಈ ವಿಧೇಯಕ ಜಾರಿಗೊಳಿಸಲು ಸಹಕರಿಸುವಂತೆ ಕೋರಿ ಸೆ.20ರಂದು ಕಾಂಗ್ರೆಸ್‌ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಜೆಡಿಎಸ್‌ ನಾಯಕರಾದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ಅವರಿಗೂ ಮನವಿ ಸಲ್ಲಿಸುತ್ತೇನೆ’ ಎಂದರು.

‘ಸುಪ್ರೀಂಕೋರ್ಟ್‌ ನೀಡಿರುವ ತಾತ್ಕಾಲಿಕ ಆದೇಶವನ್ನು ಪಾಲಿಸುತ್ತಲೇ ದೇವಸ್ಥಾನಗಳನ್ನು ಸಕ್ರಮಗೊಳಿಸಲು ಅವಕಾಶವಿತ್ತು. ಕೆಲ ರಾಜ್ಯಗಳು ಈಗಾಗಲೇ ಕಾಯ್ದೆಗಳನ್ನು ರೂಪಿಸಿದ್ದರೆ, ಮತ್ತೆ ಕೆಲ ರಾಜ್ಯಗಳು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿವೆ. ಅದೇ ರೀತಿ, ಕರ್ನಾಟಕ ಸರ್ಕಾರವು ಕಾಯ್ದೆ ಅಥವಾ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಿ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಬೇಕಿತ್ತು. ಈಗ ಮಂಡಿಸಲಿರುವ ಖಾಸಗಿ ವಿಧೇಯಕವನ್ನು ಚರ್ಚಿಸಿ, ಕಾಯ್ದೆ ರೂಪದಲ್ಲಿ ಜಾರಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ನಂಜನಗೂಡು ತಾಲ್ಲೂಕಿನ ಉಚ್ಚಗಣಿ ಗ್ರಾಮದ ಮಹದೇವಮ್ಮ ದೇವಸ್ಥಾನವನ್ನು 2009ಕ್ಕಿಂತ ಹಿಂದೆ ನಿರ್ಮಾಣಗೊಂಡಿದ್ದು, ಇದನ್ನು ನೆಲಸಮಗೊಳಿಸಬಾರದಿತ್ತು. ಮೈಸೂರು ನಗರದಲ್ಲಿ 214 ಅನಧಿಕೃತ ಮಂದಿರ, ಚರ್ಚ್‌, ಮಸೀದಿಗಳಿವೆ. ಜಿಲ್ಲೆಯಲ್ಲಿರುವ ಅನಧಿಕೃತ ದೇವಸ್ಥಾನಗಳ ಪಟ್ಟಿಯನ್ನೂ ಈ ಹಿಂದೆ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತ ಸಿದ್ಧಪಡಿಸಿದ್ದರು. ಆ ಕಡತ ನಾಪತ್ತೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT