ಪ್ರಿಯ ಗ್ರಾಹಕ.., ನೀನೆಷ್ಟು ಜಾಗೃತ?

ಸೋಮವಾರ, ಮಾರ್ಚ್ 25, 2019
28 °C

ಪ್ರಿಯ ಗ್ರಾಹಕ.., ನೀನೆಷ್ಟು ಜಾಗೃತ?

Published:
Updated:
Prajavani

ಅಂಗಡಿಗೆ ಹೋಗಿ ಏನೋ ಖರೀದಿ ಮಾಡುತ್ತೀರಿ. ಸಹಜವಾಗಿ ಹಣ ಪಾವತಿಸಿ ಬಂದಿರುತ್ತೀರಿ. ಮನೆಗೆ ಬಂದಾಗಲೇ ಗೊತ್ತಾಗುತ್ತದೆ. ನೀವು ಖರೀದಿಸಿದ ಆ ವಸ್ತುವಿನ ಬಾಳಿಕೆ ಅವಧಿ ಮುಗಿದು ತಿಂಗಳೇ ಆಗಿವೆ! ಅದು, ನಂಬಿಕೆಗೆ ಪೆಟ್ಟು.

ಅದು, ಎಲೆಕ್ಟ್ರಾನಿಕ್ ವಸ್ತುವೊಂದರ ಆಕರ್ಷಕ ಜಾಹೀರಾತು. ಉತ್ಪನ್ನದ ಎಲ್ಲ ವೈಶಿಷ್ಟ್ಯಗಳನ್ನು ಆಧುನಿಕ ಸಂವಹನ ಕಲೆಯ ಮೂಲಕ ಎಲ್ಲ ಆಯಾಮಗಳನ್ನು ಪರಿಚಯಿಸುವ ಅದು ಉತ್ಪನ್ನದೆಡೆಗೆ ಸೆಳೆಯುತ್ತದೆ. ಮೋಡಿಗೆ ಬಿದ್ದಂತೆ ಅದನ್ನು ಖರೀದಿಸಿಯೂ ಬಿಡುತ್ತೀರಿ. ಟಿ.ವಿ.ಯೋ, ಮೊಬೈಲೋ. ಮನೆಗೆ ಬಂದು ನೋಡಿದರೆ ನಿರೀಕ್ಷೆಯನ್ನು ಹುಸಿಕೊಳ್ಳುತ್ತದೆ. ಆರಂಭದಲ್ಲಿಯೇ ಕೆಟ್ಟು ಮನಸ್ಥಿತಿಯನ್ನು ಕೆಡಿಸುತ್ತದೆ! ಹಾದಿ ತಪ್ಪಿಸುವ ಮಾಹಿತಿ!

ಇನ್ನೊಂದು ಪ್ರಕರಣ. ಈಗ ನಿತ್ಯದ ಬಳಕೆಯ ವಸ್ತುಗಳನ್ನು ಪ್ಯಾಕೇಜಿಂಗ್ ರೂಪದಲ್ಲಿಯೇ ಖರೀದಿಸುವುದು ಹೆಚ್ಚಿನವರ ಅಭ್ಯಾಸ. ಗುಣಮಟ್ಟದ ಅಕ್ಕಿ, 10 ಕೆ.ಜಿ. ತೂಕದ ಚೀಲ. ಎಂದಿನಂತೆ ಆಕರ್ಷಕ ಜಾಹೀರಾತು. ಚಿತ್ರ ನೋಡಿಯೇ ಮರುಳಾಗಿ ಖರೀದಿಸುತ್ತೀರಿ. ಮನೆಗೆ ಬಂದು ಅಕ್ಕಿ ಡಬ್ಬಕ್ಕೆ ತುಂಬಿದಾಗ ವಂಚನೆ ಗೊತ್ತಾಗುತ್ತದೆ. 10 ಕೆ.ಜಿ ಅಕ್ಕಿ ಹಿಡಿಯುವ ಡಬ್ಬ ತುಂಬುವುದೇ ಇಲ್ಲ. ಅರ್ಧವೋ, ಮುಕ್ಕಾಲೋ ಕೆ.ಜಿ. ಕಡಿಮೆ ಇರುತ್ತದೆ! ತೂಕದಲ್ಲಿ ವಂಚನೆ

ಎಲ್ಲರೂ ‘ಗ್ರಾಹಕ’ರೇ ಆಗಿರುವ ಸಮಾಜದಲ್ಲಿ ಇದು, ನಿತ್ಯದ ವಹಿವಾಟಿನಲ್ಲಿ ನಮಗೆ ಅರಿವಿಲ್ಲದೇ ಆಗುವ ವಂಚನೆಗಳ ಕೆಲ ಮಾದರಿ. ಹೆಚ್ಚಿನ ಬಾರಿ ಈ ವಂಚನೆ ನಮ್ಮ ಅರಿವಿಗೆ ಬಂದರೂ ಸಮಯದ ಕೊರತೆಯೋ, ಸಣ್ಣ ಮೊತ್ತದ್ದಾದರೆ ಮತ್ತೆ ಹೋಗಿ ಏನು ಕೇಳೋದು ಎಂದೋ ಮೌನಕ್ಕೆ ಶರಣಾಗುತ್ತೇವೆ. ಇದು, ವಂಚನೆಯ ವ್ಯಾಪ್ತಿಯು ಹಿಗ್ಗಲೂ ಗ್ರಾಹಕರ ಸಣ್ಣ ‘ಕೊಡುಗೆ’.

ಇಂಥ ಮನಸ್ಥಿತಿ ಬದಲಿಸುವ ಗುರಿಯೊಂದಿಗೆ ಆಗಾಗ್ಗೆ ಜಾಗೃತ ಘೋಷಣೆಗಳು ಮೊಳಗುತ್ತವೆ: ಎಚ್ಚರ ಗ್ರಾಹಕ, ಎಚ್ಚರ. ಇದೇ ಹೊತ್ತಿನಲ್ಲಿ ನಮಗೆ ನಾವು ಗ್ರಾಹಕರಾಗಿ ಕೇಳಿಕೊಳ್ಳಬೇಕಾದ ಪ್ರಶ‍್ನೆ: ಗ್ರಾಹಕ, ನೀನೆಷ್ಟು ಜಾಗೃತ? ಮಾರ್ಚ್ 15 ವಿಶ್ವ ಗ್ರಾಹಕರ ದಿನಾಚರಣೆಗೆ ಸಿದ್ಧವಾಗುತ್ತಿರುವ ಈ ಹೊತ್ತಿನಲ್ಲಿ ಈ ಪ್ರಶ‍್ನೆಗೆ ಉತ್ತರ ಕಂಡುಕೊಳ್ಳಬೇಕಿದೆ.

ಸಂಘಜೀವಿಯಾಗಿರುವ ಮನುಷ್ಯ ದೈನಂದಿನ ಬದುಕಿನಲ್ಲಿ ಒಂದಿಲ್ಲೊಂದು ವ್ಯವಹಾರ ಚಟುವಟಿಕೆಯಲ್ಲಿ ಭಾಗಿಯಾಗಲೇ ಬೇಕು. ಮಾರುವವನೂ ಇನ್ನೊಂದು ಕಡೆ ಗ್ರಾಹಕನೇ ಆಗಿರುತ್ತಾನೆ. ವಂಚನೆ ಎಲ್ಲರಿಗೂ, ಯಾವುದೇ ಸಂದರ್ಭದಲ್ಲಿ ಬೇಕಾದರೂ ಆಗಬಹುದು.

ಇಂಥ ಸಂದರ್ಭಗಳಲ್ಲಿ ಗ್ರಾಹಕನ ರಕ್ಷಣೆಗೆ ಕಾಯ್ದೆಗಳು, ಅದರಡಿ ರಚನೆಯಾದ ನಿಯಮಗಳು ಇದ್ದರೂ, ಬಹುಸಂಖ್ಯಾತ ಗ್ರಾಹಕರ ಹೋಗ್ಲಿ ಬಿಡಿ, ಏನು ಕೇಳೋದು ಎಂಬ ಧೋರಣೆಯೇ ಕಾರಣ. ವಂಚನೆ ಪ್ರಕರಣಗಳ ಸಂಖ್ಯೆಯೂ ವಿಸ್ತರಿಸುತ್ತದೆ. ‘ಗ್ರಾಹಕನೇ ದೇವರು’ ಎಂಬುದು ಕೆಲವು ಕಡೆ ಗೋಚರಿಸುವ ಘೋಷವಾಕ್ಯ. ಇಂಥ ದೇವರನ್ನೇ ವಂಚಿಸುವ ಕೆಲ ನಿದರ್ಶನಗಳೇ ಆರಂಭದಲ್ಲಿ ಉಲ್ಲೇಖಿಸಿದವು.

ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಉದ್ದೇಶ ಗ್ರಾಹಕರ ಜವಾಬ್ದಾರಿಗಳು ಮತ್ತು ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು. ದೈನಂದಿನ ಜೀವನದಲ್ಲಿ ಗ್ರಾಹಕರಾಗಿ ಸಮಾಜದಲ್ಲಿ ವಹಿವಾಟು ನಿರ್ವಹಿಸುವ ಕಾರಣ ಜವಾಬ್ದಾರಿಗಳು ಹಾಗೂ ಹಕ್ಕುಗಳ ಜಾಗೃತಿ ಈ ಹೊತ್ತಿನ ಅನಿವಾರ್ಯವೂ ಹೌದು.

ಖರೀದಿ ಪೂರ್ವ ಯೋಜನೆ ಸಿದ್ಧಪಡಿಸುವುದು, ಖರೀದಿಸಬೇಕಾದ ವಸ್ತುವಿನ ಪೂರ್ಣ ಮಾಹಿತಿ ಪಡೆಯುವುದು. ವಸ್ತುಗಳ ಗುಣಮಟ್ಟ, ಗುಣಮಾನಕ ಅಂದರೆ ಐಎಸ್‌ಐ, ಆಗ್‍ ಮಾರ್ಕ್‌ ಇದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು, ಆದಷ್ಟು ಬಿಲ್‍ ಮೂಲಕವೇ ಖರೀದಿಸುವುದು, ವಸ್ತುವಿಗೆ ಹೆಚ್ಚು ಕಡಿಮೆಯಾದಲ್ಲಿ ನಿರ್ದಿಷ್ಟ ಅವಧಿಗೆ ವಾರಂಟಿ ಅಥವಾ ಬದಲಾಯಿಸುವ ಭರವಸೆ ಇದೆ ಎಂಬುದನ್ನು ದೃಢಪಡಿಸಿಕೊಳ್ಳುವುದು ಇತ್ಯಾದಿ ಎಚ್ಚರಿಕೆಗಳು ಅಗತ್ಯ.

ಖರೀದಿಸಬೇಕಾದ ಅತ್ಯವಶ್ಯಕ ಪದಾರ್ಥಗಳು, ವಸ್ತುಗಳು ಮತ್ತು ಸೇವೆಗಳನ್ನು ತಿಳಿಯುವ ಹಕ್ಕು ಕಾನೂನುಬದ್ಧವಾಗಿ ಗ್ರಾಹರಿಗೆ ಇದೆ. ಬಳಕೆದಾರರು ಅಥವಾ ಗ್ರಾಹಕರಿಗೆ ವಸ್ತುವಿನ ಪೂರ್ಣ ವಿವರ ಹೇಳುವುದು ಮಾರಾಟಗಾರನ ಕರ್ತರ್ವ್ಯವೂ ಹೌದು. ಒಂದು ವೇಳೆ ಇಲ್ಲಿ ಭರವಸೆಯ ಧಕ್ಕೆಯಾದಲ್ಲಿ ದೋಷಯುಕ್ತ ವಸ್ತು, ಪದಾರ್ಥ ಅಥವಾ ಸೇವೆಯಿಂದ ಉಂಟಾಗುವ ನಷ್ಟಕ್ಕೆ ಅಥವಾ ಹಾನಿಗೆ ಪರಿಹಾರ ಪಡೆಯುವ ಹಕ್ಕು ಗ್ರಾಹಕನದೇ ಆಗಿದೆ.

ಮುಂದಿನ ಯಾವುದೇ ಖರೀದಿಗೂ ಮೊದಲು ನಾನು ವಂಚನೆಗೆ ಒಳಗಾಗುತ್ತಿಲ್ಲ. ನೀಡಿದ ಹಣಕ್ಕೆ ಸೂಕ್ತವಾದ, ಗುಣಮಟ್ಟದ ವಸ್ತು ಪಡೆದುಕೊಂಡಿದ್ದೇನೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಅಗತ್ಯ.

ತಾನು ಖರೀದಿಸುವ ವಸ್ತುಗಳಿಗೆ ಸಂಬಂಧಿಸಿದ ಪ್ಯಾಕೇಜಿಂಗ್ ಅಥವಾ ವಿವರಣೆ ಪತ್ರಿಕೆಯಲ್ಲಿ (ಕ್ಯಾಟಲಾಕ್‍) ನಮೂದಿಸಿದ ಅಂಶಗಳು ಸರಿಯಾಗಿವೆ. ನ್ಯಾಯಯುತವಾಗಿವೆ. ನಿಗದಿತ ಬೆಲೆಯನ್ನು ವಿಧಿಸಲಾಗಿದೆ ಎಂಬುದನ್ನು ಖಾತರಿಪಡಿಸಿಕೊಳ್ಳುವುದು ಅಗತ್ಯ. ಅಷ್ಟರ ಮಟ್ಟಿಗೆ ಗ್ರಾಹಕನಾಗಿ ಜಾಗೃತರಾಗಬೇಕು.

ಜೊತೆಗೆ, ಗ್ರಾಹಕರ ಹಿತರಕ್ಷಣಾ ಕಾಯ್ದೆಯ ಅರಿವು ಹೊಂದಿದ್ದಲ್ಲಿ ಆ ಮಟ್ಟಿಗೆ ವಂಚನೆ ಪ್ರಕರಣಗಳನ್ನು ತಡೆಯಬಹುದು. ಗ್ರಾಹಕರಾಗಿ ಇದು ಎಲ್ಲರ ಜವಾಬ್ದಾರಿಯೂ ಹೌದು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !