ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಬಡಾವಣೆಗಳಲ್ಲಿ ಸಮಸ್ಯೆ ತೀವ್ರ

Last Updated 14 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಜನರು ರಾತ್ರಿ ವೇಳೆ ನಿರ್ಭೀತಿಯಿಂದ ಸಂಚರಿಸಲು ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರತಿ ಬಡಾವಣೆಯಲ್ಲೂ ಬೀದಿದೀಪಗಳನ್ನು ಅಳವಡಿಸಲಾಗಿದೆ. ಆದರೆ, ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ಬಹುತೇಕ ಕಡೆಗಳಲ್ಲಿ ದೀಪಗಳು ಉರಿಯುತ್ತಿಲ್ಲ. ನಿವಾಸಿಗಳು ಹಾಗೂ ಸಾರ್ವಜನಿಕರು ರಾತ್ರಿ ಹೊತ್ತು ಪ್ರಾಣ ಭೀತಿಯಿಂದ ಸಂಚರಿಸಬೇಕಾದ ಪರಿಸ್ಥಿತಿ ಇದೆ.

ನಗರದ ಕೇಂದ್ರ ಭಾಗದಲ್ಲಿ (ಕೋರ್ ಏರಿಯಾ) ಬೀದಿದೀಪಗಳ ಸಮಸ್ಯೆ ತುಸು ಕಡಿಮೆ ಇದ್ದರೆ, ಚಾಮುಂಡಿ ಬೆಟ್ಟ ತಪ್ಪಲಿನ ಬಡಾವಣೆಗಳು, ಹೊರವರ್ತುಲ ರಸ್ತೆ, ಅದರ ಆಸುಪಾಸು, ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾದ ಬಡಾವಣೆಗಳು, ಕೊಳೆಗೇರಿಗಳು ಹಾಗೂ ಆಶ್ರಯ ಯೋಜನೆಯಡಿ ನಿರ್ಮಾಣಗೊಂಡ ಬಡಾವಣೆಗಳಲ್ಲಿ ಬೀದಿದೀಪಗಳ ಸಮಸ್ಯೆ ತೀವ್ರವಾಗಿ ಬಾಧಿಸುತ್ತಿದೆ.

ನಗರದ ಕೇಂದ್ರ ಭಾಗದಲ್ಲಿರುವ ವಿದ್ಯುತ್ ಕಂಬಗಳಿಗೆ ಅಳವಡಿಸಿರುವ ಅನೇಕ ದೀಪಗಳ ಹೊರ ಕವಚಗಳು ಕಳಚಿ ಬಿದ್ದಿವೆ. ಮಳೆ, ಗಾಳಿ ಹಾಗೂ ದೂಳಿನಿಂದಾಗಿ ದೀಪಗಳು ಬೇಗ ಹಾಳಾಗುತ್ತಿವೆ. ಇನ್ನೂ ಕೆಲವೆಡೆ ದೀಪಗಳೇ ಇಲ್ಲ. ಇದ್ದರೂ ಸರಿಯಾಗಿ ಉರಿಯುತ್ತಿಲ್ಲ.

ಜಗನ್ಮೋಹನ ಅರಮನೆ ಅಕ್ಕಪಕ್ಕದ ರಸ್ತೆಗಳಲ್ಲಿ ಅಳವಡಿಸಿರುವ ಬೀದಿದೀಪಗಳು ಉರಿಯುತ್ತಿಲ್ಲ. ಚಾಮರಾಜ ಮೊಹಲ್ಲಾ ಭಾಗದಿಂದ ಸಿಟಿ ಬಸ್ ನಿಲ್ದಾಣದ ಕಡೆಗೆ ಹೋಗುವವರು ಈ ರಸ್ತೆಗಳಲ್ಲೇ ಸಾಗುತ್ತಾರೆ. ಈ ಭಾಗದಲ್ಲಿ ಮಹಿಳಾ ಪೇಯಿಂಗ್ ಗೆಸ್ಟ್‌ಗಳೂ ಇವೆ. ವಿದ್ಯಾರ್ಥಿನಿಯರು ಹೆಚ್ಚಾಗಿ ಓಡಾಡುತ್ತಾರೆ. ದೀಪಗಳ ಬೆಳಕಿಲ್ಲದೆ ಕತ್ತಲೆಯಲ್ಲೇ ಓಡಾಡುವ ಪರಿಸ್ಥಿತಿ ಇದೆ.

ರಮಾವಿಲಾಸ ರಸ್ತೆ, ರೋಟರಿ ಕ್ಲಬ್ ಆಸುಪಾಸು ಇರುವ ದೀಪಗಳು ಸರಿಯಾಗಿ ಬೆಳಗುತ್ತಿಲ್ಲ. ಪಾಲಿಕೆ ಕಚೇರಿಯಿಂದ ಅರಮನೆ ಕಡೆಗೆ ಹೋಗುವ ರಸ್ತೆಯಲ್ಲಿ ಕಾಡಾ ಕಚೇರಿ ಎದುರು ಅಳವಡಿಸಿರುವ ಪಾರಂಪರಿಕ ದೀಪಗಳು ಉರಿಯುತ್ತಿಲ್ಲ.

ಚಾಮುಂಡಿ ಬೆಟ್ಟದ ರಸ್ತೆಯಲ್ಲಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವು (ಮುಡಾ) ಅಭಿವೃದ್ಧಿ ಪಡಿಸಿರುವ ಆದಾಯ ತೆರಿಗೆ ಬಡಾವಣೆಯನ್ನು ಮೈಸೂರು ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ಸುಮಾರು ಎರಡು ವರ್ಷಗಳು ಕಳೆದಿವೆ. ಆದರೆ, ಇಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಬೀದಿದೀಪಗಳ ಸಮಸ್ಯೆ ತೀವ್ರವಾಗಿದೆ ಎಂದು ಇಲ್ಲಿನ ನಿವಾಸಿ ಗೌಡಯ್ಯ ದೂರಿದರು.

‘ನಮ್ಮ ಬಡಾವಣೆಯಲ್ಲಿ ಸುಮಾರು 40 ಮನೆಗಳಿವೆ. ಆದರೆ, ಮತದಾರರ ಸಂಖ್ಯೆ ಕಡಿಮೆ ಇದೆ ಎಂಬ ಕಾರಣಕ್ಕೆ ಪಾಲಿಕೆ ಸದಸ್ಯರು, ಶಾಸಕರು ಈ ಕಡೆಗೆ ಮುಖ ಹಾಕುವುದಿಲ್ಲ. ಒಳಚರಂಡಿ ಅಳವಡಿಸಿದ್ದರೂ ಅದನ್ನು ಬೇರೆಡೆಗೆ ಸಂಪರ್ಕ ಕೊಟ್ಟಿಲ್ಲ. ಇದರಿಂದ ಕೊಳಚೆ ನೀರು ಬಡಾವಣೆಯಲ್ಲೇ ಉಕ್ಕಿ ಹರಿಯುತ್ತದೆ. ಬೀದಿದೀಪಗಳು ಇಲ್ಲದೆ ಪ್ರಾಣ ಭೀತಿಯಿಂದ ಓಡಾಡುವಂತಾಗಿದೆ. ಬೀದಿದೀಪಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಆದರೆ, ಈ ಬಡಾವಣೆ ಅಧಿಕೃತವಾಗಿ ಪಾಲಿಕೆ ವ್ಯಾಪ್ತಿಗೆ ಸೇರಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ. ಎರಡು ವರ್ಷಗಳಿಂದ ಪಾಲಿಕೆಗೆ ತೆರಿಗೆ ಕಟ್ಟುತ್ತಿದ್ದೇವೆ. ಆದರೂ, ಮೂಲಸೌಕರ್ಯ ಒದಗಿಸುವಲ್ಲಿ ಪಾಲಿಕೆ ವಿಫಲವಾಗಿದೆ’ ಎಂದು ದೂರಿದರು.

ಉರಿಯದ ಸೌರದೀಪಗಳು: ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿ ಆವರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸೌರದೀಪಗಳನ್ನು ಅಳವಡಿಸಲಾಗಿದೆ. ಆದರೆ, ಒಂದು ದೀಪವೂ ಉರಿಯುತ್ತಿಲ್ಲ. ಕೆಲವೆಡೆ ದೀಪಗಳು ಉರುಳಿವೆ. ಇದಕ್ಕೂ ಮುನ್ನ ಅಳವಡಿಸಿರುವ ವಿದ್ಯುತ್ ದೀಪಗಳು ಮಾತ್ರ ಬೆಳಗುತ್ತಿವೆ. ವಿದ್ಯುತ್ ಉಳಿತಾಯದ ಜೊತೆಗೆ ಸೌರಶಕ್ತಿಯನ್ನು ಬಳಸಿಕೊಳ್ಳುವ ಮಹತ್ವದ ಉದ್ದೇಶದಿಂದ ಸೌರದೀಪಗಳನ್ನು ಮೈಸೂರು ವಿಶ್ವವಿದ್ಯಾಲಯವು ಅಳವಡಿಸಿತ್ತು. ಆದರೆ, ಇದಕ್ಕಾಗಿ ವ್ಯಯಿಸಿದ ಲಕ್ಷಾಂತರ ರೂಪಾಯಿ ಪೋಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT