ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಾ ಸಂಸಾರಿಯಾಗಿದ್ದ ತಿಪ್ಪೇಸ್ವಾಮಿ: ಸಿಪಿಕೆ

Last Updated 11 ಆಗಸ್ಟ್ 2022, 12:32 IST
ಅಕ್ಷರ ಗಾತ್ರ

ಮೈಸೂರು: ‘ಖ್ಯಾತ ಕಲಾವಿದ ಪಿ.ಆರ್.ತಿಪ್ಪೇಸ್ವಾಮಿ ಕಲಾ ಸಂಸಾರಿ ಆಗಿದ್ದರು’ ಎಂದು ಸಾಹಿತಿ ಪ್ರೊ.ಸಿಪಿಕೆ ಬಣ್ಣಿಸಿದರು.

ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ವಿಜಯನಗರದ ಶ್ರೀಕಲಾನಿಕೇತನ ಕಲಾ ಗ್ಯಾಲರಿಯಲ್ಲಿ ಗುರುವಾರ ಆಯೋಜಿಸಿದ್ದ ಪಿ.ಆರ್.ತಿಪ್ಪೇಸ್ವಾಮಿ ಜನ್ಮ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಅವರೊಬ್ಬ ಶ್ರೇಷ್ಠ ಕಲಾವಿದ. ನಿಸರ್ಗ ಚಿತ್ರರಚನೆಗಾಗಿ ಮಲೆನಾಡಿಗೆ ಹೋಗಿ ಕಲಾಕೃತಿಗಳನ್ನು ರಚಿಸಿ, ರಾಷ್ಟ್ರಕವಿ ಕುವೆಂಪು ಮೆಚ್ಚುಗೆ ಗಳಿಸಿದ್ದರು’ ಎಂದು ನೆನೆದರು.

‘ಚಿತ್ರಕಲೆಯು ಕಾವ್ಯಕ್ಕೆ ಹತ್ತಿರವಾದುದು. ಚಿತ್ರಕಲೆಯನ್ನು ದೇವತೆಯರ ಆಹಾರ ಎಂದು ಕರೆಯುವುದೂ ಉಂಟು. ಕಲೆ ನಮ್ಮನ್ನು ಬದುಕಿಸುವ ದ್ರವ್ಯ. ಅದನ್ನು ಆಸ್ವಾದಿಸುವ, ಆರಾಧಿಸುವ ಶಕ್ತಿ ಪಡೆಯಬೇಕು’ ಎಂದರು.

ಶತಮಾನೋತ್ಸವ ಲಾಂಛನ ಅನಾವರಣಗೊಳಿಸಿದ ಕಲಾವಿದ ಎನ್.ರಾಘವೇಂದ್ರಮೂರ್ತಿ, ‘ಚಿಕ್ಕ ವಯಸ್ಸಿನಲ್ಲೇ ರಾಜ್ಯ ಪ್ರಶಸ್ತಿ ಪಡೆದ ತಿಪ್ಪೇಸ್ವಾಮಿ ಅವರು ಕಲಾವಿದರನ್ನು ಗುರುತಿಸಿ ಮಾಸಾಶನ ಕೊಡಿಸಲು ಕಾರಣಕರ್ತರಾದರು’ ಎಂದು ಸ್ಮರಿಸಿದರು.

‘ವರ್ಷಧಾರೆ’ ಚಿತ್ರಕಲಾ ಪ್ರದರ್ಶನವನ್ನು ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಉದ್ಘಾಟಿಸಿದರು.

ಕಸಾಪ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಮಾನಸ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಪಿ.ಆರ್.ತಿಪ್ಪೇಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ರಾಜಶೇಖರ ಕದಂಬ, ‘ಶತಮಾನೋತ್ಸವದ ಮುಖ್ಯ ಕಾರ್ಯಕ್ರಮವನ್ನು ತಿಪ್ಪೇಸ್ವಾಮಿ ತವರು ಜಿಲ್ಲೆಯಾದ ಚಿತ್ರದುರ್ಗದಲ್ಲಿ ನಡೆಸಲಾಗುವುದು. ಹರ್ತಿಕೋಟೆಯಲ್ಲಿರುವ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ಪ್ರತಿಷ್ಠಾನದಿಂದ ಪ್ರತಿ ವರ್ಷ ಹಿರಿಯ ಕಲಾವಿದರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುತ್ತಿದೆ. ಮೈಸೂರು ವಿ.ವಿ ಸಂಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಿ.ಡಿ.ಪರಶುರಾಮ ತಲಾ ₹ 5ಸಾವಿರದಂತೆ 10 ಮಂದಿ ಕಲಾವಿದರಿಗೆ ಪ್ರಶಸ್ತಿ ನೀಡಲು ₹ 50ಸಾವಿರ ದೇಣಿಗೆ ಕೊಟ್ಟಿದ್ದಾರೆ’ ಎಂದುಪ್ರತಿಷ್ಠಾನದ ಕಾರ್ಯದರ್ಶಿ ಕೆ.ಸಿ.ಮಹದೇವಶೆಟ್ಟಿ ಹೇಳಿದರು.

ಮೈಸೂರು ವಿ.ವಿ ಡಾ.ಬಾಬು ಜಗಜೀವನರಾಂ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕ ಡಾ.ಮೈಲಹಳ್ಳಿ ರೇವಣ್ಣ ₹ 10ಸಾವಿರ, ಕಲಾವಿದ ಎನ್.ರಾಘವೇಂದ್ರಮೂರ್ತಿ ₹ 5ಸಾವಿರ ದೇಣಿಗೆಯನ್ನು ಪ್ರತಿಷ್ಠಾನಕ್ಕೆ ನೀಡಿದರು.

ಎಚ್.ಪಿ.ಸೌಜನ್ಯಾ ಪರಮೇಶ್ವರಯ್ಯ, ವಾಣಿಶ್ರೀ ಇದ್ದರು. ಚಿಕ್ಕಣ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT