ಸಂವಿಧಾನ ಪ್ರತಿ ದಹನಕ್ಕೆ ಆಕ್ರೋಶ

7
ನಗರದಲ್ಲಿ ಎರಡು ಪ್ರತ್ಯೇಕ ಪ್ರತಿಭಟನೆ: ಇಂದು ಬೃಹತ್ ರ‍್ಯಾಲಿ

ಸಂವಿಧಾನ ಪ್ರತಿ ದಹನಕ್ಕೆ ಆಕ್ರೋಶ

Published:
Updated:
Deccan Herald

ಮೈಸೂರು: ನವದೆಹಲಿಯ ಜಂತರ್‌ಮಂತರ್‌ನಲ್ಲಿ ಮೀಸಲಾತಿ, ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದವರು ಭಾರತ ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿರುವುದನ್ನು ಖಂಡಿಸಿ ನಗರದಲ್ಲಿ ಪ್ರತ್ಯೇಕ ಕಡೆ ಎರಡು ಪ್ರತಿಭಟನೆಗಳು ನಡೆದವು.

ಇಲ್ಲಿನ ಪುರಭವನದಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮತ್ತು ಪ್ರಗತಿಪರ ಚಿಂತಕರು ಸೇರಿ ಸಂವಿಧಾನ ವಿರೋಧಿಗಳ ಭೂತ ದಹನ ಮಾಡಿದರು.

ಮನುವಾದಿ ಸಂಘ ಪರಿವಾರದವರು ಪ್ರತಿಭಟನೆಯ ಹೆಸರಿನಲ್ಲಿ ಸಂವಿಧಾನ ಸುಡುವ ಮೂಲಕ ದೇಶದ್ರೋಹ ಎಸಗಿದ್ದಾರೆ. ಕೂಡಲೇ ಇವರನ್ನು ಗಡೀಪಾರು ಮಾಡಬೇಕು ಎಂದು ಆಗ್ರಹಿಸಿದರು.

ದೇಶ ಒಗ್ಗಟ್ಟಿನಿಂದ ಇರಲು ಸಂವಿಧಾನದಿಂದ ಮಾತ್ರ ಸಾಧ್ಯ. ಈಗ ಇಂತಹ ಸಂವಿಧಾನವನ್ನೇ ಬೇಡ ಎಂದು ಹೇಳುವಮಟ್ಟಿಗೆ ಮನುವಾದಿಗಳು ಇಳಿದಿದ್ದಾರೆ. ಈಗ ಸುಡುವ ಹಂತ ತಲುಪಿದ್ದಾರೆ. ಇನ್ನು ಮುಂದೆ ಬದಲಿಸುವ ಹಂತಕ್ಕೆ ಮುಟ್ಟಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಉರಿಲಿಂಗಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ‘ಸಂವಿಧಾನ ಇಲ್ಲದಿದ್ದರೆ ದೇಶ ಛಿದ್ರಛಿದ್ರವಾಗಿ ಬಿಡುತ್ತದೆ. ದೇಶ ವಿಭಜಿಸುವ ತಂತ್ರಗಾರಿಕೆ ಸಂವಿಧಾನ ದಹನದ ಹಿಂದಿದೆ. ನಿಜಕ್ಕೂ ಸಂವಿಧಾನ ಸುಡುವುದು ಎಂದರೆ ಅದು ತಾಯಿಯ ಗರ್ಭವನ್ನೇ ಸುಟ್ಟಂತೆ’ ಎಂದು ಕಿಡಿಕಾರಿದರು.

ಪೊಲೀಸರ ಸಮ್ಮುಖದಲ್ಲೇ ಸಂವಿಧಾನ ಸುಟ್ಟಿರುವುದನ್ನು ನೋಡಿದರೆ, ಕೇಂದ್ರ ಸರ್ಕಾರ ಎತ್ತ ಸಾಗುತ್ತಿದೆ ಎಂದು ಭಯವಾಗುತ್ತಿದೆ. ಸಂವಿಧಾನ ಸುಡುವಂತಹ ಈ ಗಳಿಗೆಯಲ್ಲಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಎಂತಹ ಭಾಷಣ ಮಾಡುವರು? ಕೂಡಲೇ ಸಂವಿಧಾನ ಸುಟ್ಟವರನ್ನು ಬಂಧಿಸಬೇಕು. ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಚಿಂತಕರಾದ ಪ್ರೊ.ಕೆ.ಎಸ್.ಭಗವಾನ್, ಪ್ರೊ.ಮಹೇಶ್‍ಚಂದ್ರಗುರು, ಸಿಪಿಎಂ ಕಾರ್ಯದರ್ಶಿಗಳಾದ ಬಸವರಾಜು, ಜಗನ್ನಾಥ್, ಮುಖಂಡರಾದ ಹರಿಹರ ಆನಂದಸ್ವಾಮಿ, ಶಂಭುಲಿಂಗಸ್ವಾಮಿ, ಸೋಮಸುಂದರ್, ರಾಜು ಕುಕ್ಕೂರು, ಚೋರನಹಳ್ಳಿ ಶಿವಣ್ಣ, ಕೆ.ಎಸ್.ಶಿವರಾಮ್ ಪ್ರತಿಭಟನೆಯಲ್ಲಿದ್ದರು.

ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ:

ಸಂವಿಧಾನದ ಪ್ರತಿಯನ್ನು ಸುಟ್ಟು ಹಾಕಿದ ಘಟನೆ ವಿರೋಧಿಸಿ ಕಾಂಗ್ರೆಸ್ ಮುಖಂಡ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ಭಾನುವಾರ ಇಲ್ಲಿನ ರಾಮಸ್ವಾಮಿ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. 

ಸಂವಿಧಾನ ವಿರೋಧಿಗಳಿಗೆ ಧಿಕ್ಕಾರ, ಸಂವಿಧಾನ ಪ್ರತಿಯನ್ನು ಸುಟ್ಟಿರುವವರನ್ನು ಕೂಡಲೇ ಬಂಧಿಸಬೇಕು ಎಂಬುದು ಸೇರಿದಂತೆ ಹಲವು ಘೋಷಣೆಗಳನ್ನು ಕೂಗುವ ಮೂಲಕ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮಾತನಾಡಿ, ಸಾರ್ವಜನಿಕ ಸ್ಥಳದಲ್ಲಿ ಸಂವಿಧಾನದ ಪ್ರತಿಯನ್ನು ಸುಟ್ಟು ಸಾಮಾಜಿಕ ಜಾಲತಾಣದಲ್ಲಿ ಅದನ್ನು ಹಾಕಿರುವುದು ವಿಕೃತಿಯ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಾಲಿಕೆ ಸದಸ್ಯ ಪುರುಷೋತ್ತಮ್ ಮಾತನಾಡಿ, ಎಲ್ಲಾ ಧರ್ಮದ ಏಳಿಗೆಯನ್ನು ಬಯಸುವ ಭಾರತದ ಸಂವಿಧಾನವನ್ನು ಜಗತ್ತೇ ಗೌರವಿಸುತ್ತದೆ. ಸಂವಿಧಾನದ ಪ್ರತಿಯನ್ನು ಸುಟ್ಟಿರುವುದು ಮನುಧರ್ಮದ ಮನಸ್ಸಿನವರು ಮಾಡಿರುವ ಕೃತ್ಯವೇ ಆಗಿದೆ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದರು.

ಪಾಲಿಕೆ ಸದಸ್ಯ ಸುನೀಲ್, ಶ್ರೀಧರ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !