ಬುಧವಾರ, ಸೆಪ್ಟೆಂಬರ್ 18, 2019
22 °C
ಮಾನವ ಸರಪಳಿ ರಚನೆ, ರಸ್ತೆಗಳಲ್ಲಿ ಮೆರವಣಿಗೆ

ತೀವ್ರಗೊಂಡ ಆದಿವಾಸಿಗಳ ಪ್ರತಿಭಟನೆ

Published:
Updated:
Prajavani

ಎಚ್.ಡಿ.ಕೋಟೆ: ಇಲ್ಲಿ ನಡೆಯುತ್ತಿರುವ ಆದಿವಾಸಿಗಳ ಪ್ರತಿಭಟನೆ ಶುಕ್ರವಾರ 5ನೇ ದಿನಕ್ಕೆ ಕಾಲಿರಿಸಿದೆ. ಬೇಡಿಕೆ ಈಡೇರಿಕೆ ಕುರಿತು ಅಧಿಕಾರಿಗಳು ಸ್ಪಷ್ಟ ಭರವಸೆ ನೀಡದೇ ಇರುವುದರಿಂದ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಲು ಕಾರ್ಯಕರ್ತರು ನಿರ್ಧರಿಸಿದ್ದಾರೆ.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇವರು ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಹಾಡಿ ಅರಣ್ಯ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರದಿಂದ ಮಿನಿವಿಧಾನಸೌಧದ ಎದುರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಘೋಷಣೆಗಳನ್ನು ಕೂಗಿದರು. ಬಸ್‌ನಿಲ್ದಾಣದ ಸಮೀಪ ಮಾನವ ಸರಪಳಿ ರಚಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕೆಲವರು ಅರಣ್ಯ ಹಕ್ಕು ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದರು. ಇದರಿಂದ ಆದಿವಾಸಿಗಳಿಗೆ ವಿರುದ್ಧವಾಗಿ ತೀರ್ಪು ಹೊರಬಿತ್ತು. ಇದನ್ನು ರದ್ದುಪಡಿಸಬೇಕು ಎಂದು ರಾಜ್ಯ ಸರ್ಕಾರವು ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಬೇಕು ಎನ್ನುವುದು ಇವರ ಪ್ರಮುಖ ಬೇಡಿಕೆ.

ಆಶ್ರಮ ಶಾಲೆಗಳನ್ನು ಉನ್ನತೀಕರಿಸಿ ಇದರ ಜವಾಬ್ದಾರಿಯನ್ನು ಶಿಕ್ಷಣ ಇಲಾಖೆಗೆ ವರ್ಗಾಯಿಸಬೇಕು ಎಂದು 2017ರಲ್ಲಿಯೇ ಆದೇಶವಿದ್ದರೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ನಿರ್ಲಕ್ಷ್ಯ ತೋರುತ್ತಿದೆ. ಇದನ್ನು ಕೂಡಲೇ ಅನುಷ್ಠಾನಗೊಳಿಸಬೇಕು ಎಂದು ಅವರು ಆಗ್ರಹಿಸಿದರು.

ಈಗಾಗಲೇ ಆದಿವಾಸಿ ಯುವ ಜನರು ಕೊಡಗು, ಮೈಸೂರಿನಿಂದ ಸುಮಾರು 15 ಜನರು ಕಡಿಮೆ ವೇತನಕ್ಕೆ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಇವರನ್ನು ಕೂಡಲೆ ಕಾಯಂಗೊಳಿಸಬೇಕು. ಜತೆಗೆ, ಡಿ.ಎಡ್, ಮತ್ತು ಬಿ.ಎಡ್ ತರಬೇತಿ ಪಡೆದು ಕೂಲಿ ಕೆಲಸಕ್ಕೆ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರನ್ನು ಆಶ್ರಮ ಶಾಲೆಗಳಿಗೆ ಶಿಕ್ಷಕರಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಮುಜಾಫರ್ ಅಸ್ಸಾದಿ ವರದಿಯಂತೆ ನಾಗರಹೊಳೆ ಅರಣ್ಯದಿಂದ ಹೊರತಂದ ಹಾಡಿಗಳಲ್ಲಿನ ಒಟ್ಟು 1,106 ಕುಟುಂಬಗಳಿಗೆ ಅತಿ ಜರೂರಾಗಿ ಪುನವರ್ಸತಿ ಕಲ್ಪಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿಯಲ್ಲಿ ಎನ್.ಬೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾಡಿಗಳು ಹಾಗೂ ಸರಗೂರು ತಾಲ್ಲೂಕಿನ ಬಿ.ಮಟಕೆರೆ ಪಂಚಾಯಿತಿ, ಎಂ.ಸಿ.ತಳಲು, ಹೆಗ್ಗನೂರು, ಹಾದನೂರು, ಮುಳ್ಳೂರು ಗ್ರಾಮ ಪಂಚಾಯಿತಿಗಳಲ್ಲಿ ವೈಯಕ್ತಿಕ ಅರಣ್ಯ ಹಕ್ಕು ಹಾಗೂ ಸಾಮೂಹಿಕ ಅರಣ್ಯ ಹಕ್ಕಿನ ಅರ್ಜಿಗಳನ್ನು ಮಾನ್ಯ ಮಾಡಬೇಕು ಎಂದು ಅವರು ಮನವಿ ಮಾಡಿದರು.

ಜತೆಗೆ, 15ಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆದಿವಾಸಿಗಳು ಪ್ರತಿಭಟನೆ ಮುಂದುವರಿಸಿದ್ದಾರೆ. ಸ್ಥಳದಲ್ಲೇ ಅಡುಗೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆಯೂ ತಮ್ಮ ಘೋಷಣೆಗಳನ್ನು ಮುಂದುವರಿಸಿದ್ದಾರೆ.

ಮುಖಂಡರಾದ ಶೈಲೇಂದ್ರಕುಮಾರ್, ಸಿದ್ದರಾಜು, ಪುಟ್ಟಮ್ಮ, ಜಾನಕಮ್ಮ, ಮಾದೇವ, ಕರಿಯಪ್ಪ, ಹೊನ್ನಮ್ಮ, ಚಂದ್ರು, ಪುಟ್ಟ ಬಸವ, ಕಾವೇರಿ ಶಿವಯ್ಯ, ವೀರಭದ್ರ, ಲೋಹಿತ, ಮಾದೇವಸ್ವಾಮಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

Post Comments (+)