ಶುಕ್ರವಾರ, ಸೆಪ್ಟೆಂಬರ್ 20, 2019
22 °C

ಕಾರ್ಖಾನೆ ವಿರುದ್ಧ ರೈತರ ಪ್ರತಿಭಟನೆ

Published:
Updated:
Prajavani

ನಂಜನಗೂಡು: ತಾಲ್ಲೂಕಿನ ಹಿಮ್ಮಾವು ಕೈಗಾರಿಕಾ ಪ್ರದೇಶದ ಏಷಿಯನ್ ಪೇಂಟ್ ಕಾರ್ಖಾನೆ ವಿರುದ್ಧ ಬುಧವಾರ ರೈತರು ಪ್ರತಿಭಟನೆ ನಡೆಸಿದರು.

ಕಾರ್ಖಾನೆ ನಿರ್ಮಾಣಕ್ಕಾಗಿ ಭೂಮಿ ನೀಡಿದ್ದ ರೈತರು ಉದ್ಯೋಗ ನೀಡುವಂತೆ ಒತ್ತಾಯಿಸಿ ಕಾರ್ಖಾನೆ ಬಳಿ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ಸೇರಿ ಘೋಷಣೆಗಳನ್ನು ಕೂಗಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಹಿಮ್ಮಾವು ಗ್ರಾಮದ 175 ಎಕರೆ ಪ್ರದೇಶದಲ್ಲಿ ಆರಂಭವಾದ ಕಾರ್ಖಾನೆ 2 ಸಾವಿರ ಉದ್ಯೋಗ ಸೃಷ್ಠಿ ಮಾಡಿ ಸ್ಥಳೀಯರಿಗೆ ಉದ್ಯೋಗ ನೀಡುತ್ತದೆ ಎಂದು ಕಾರ್ಖಾನೆ ಉದ್ಘಾಟಿಸಿದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರು. ಕಾರ್ಖಾನೆಗೆ ತಮ್ಮ ಕೃಷಿ ಭೂಮಿ ನೀಡಿದ 95 ಮಂದಿಗೆ ಕಾಯಂ ಉದ್ಯೋಗದ ಭರವಸೆ ನೀಡಿದ್ದ ಆಡಳಿತ ಮಂಡಳಿಯು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ಆಡಳಿತ ನಡೆಸಿದ ಹಲವು ಸಭೆಗಳಲ್ಲಿಯೂ ವಾಗ್ದಾನ ನೀಡಿದ್ದರು. ಆದರೆ, ಇದುವರೆಗೂ ಉದ್ಯೋಗ ನೀಡಿಲ್ಲ’ ಎಂದು ಅವರು ಕಿಡಿಕಾರಿದರು.

ಕಾರ್ಖಾನೆ ಬಳಿ ಪ್ರತಿಭಟನೆಗಾಗಿ ಬುಧವಾರ ರಾತ್ರಿ ಪೆಂಡಾಲ್ ಹಾಕುತ್ತಿದ್ದ ರೈತ ಸಂಘದ ಕಾರ್ಯಕರ್ತರ ಮೇಲೆ ಸರಕು ಸಾಗಣೆ ಲಾರಿಯೊಂದನ್ನು ಹತ್ತಿಸಿ ಬೆದರಿಸಲು ಕೆಲವರು ಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದರು.

‘ಲಾರಿ ಚಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದೇವೆ. ಗುರುವಾರದವರೆಗೆ ಅಡಳಿತ ಮಂಡಳಿ ವಿರುದ್ದ ಶಾಂತಿಯುತವಾಗಿ ಅಹೊರಾತ್ರಿ ಪ್ರತಿಭಟನೆ ನಡೆಸುತ್ತೇವೆ. ನ್ಯಾಯ ಸಿಗದಿದ್ದರೆ ನಂತರ ತಾಲ್ಲೂಕಿನ ರೈತರ ಸಹಕಾರದೊಂದಿಗೆ ಕಾನೂನು ಭಂಗ ಚಳುವಳಿ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಆದರೆ, ಸ್ಥಳದಲ್ಲಿದ್ದ ಗ್ರಾಮಾಂತರ ಪೊಲೀಸ್ ಠಾಣೆ ಪಿ.ಎಸ್.ಐ.ಪುನೀತ್ ಈ ಆರೋಪವನ್ನು ನಿರಾಕರಿಸಿದ್ದಾರೆ. ಗಾರ್ಮೇಂಟ್ಸ್‌ ಕಾರ್ಖಾನೆಗೆ ಹೋಗಬೇಕಿದ್ದ ಸರಕು ತುಂಬಿದ ಲಾರಿ ಚಾಲಕ ಹಾದಿ ತಪ್ಪಿ ಇತ್ತ ಕಡೆ ಬಂದಿದ್ದಾನೆ. ಕತ್ತಲೆಯಲ್ಲಿ ಪ್ರತಿಭಟನೆಯ ಪೆಂಡಾಲ್ ಸಮೀಪ ಬಂದಿದ್ದರಿಂದ ಗೊಂದಲ ಉಂಟಾಗಿದೆ. ಲಾರಿ ಚಾಲಕನನ್ನು ವಿಚಾರಣೆ ಮಾಡಿದ್ದೇವೆ. ಚಾಲಕನಿಗೂ ಏಷಿಯನ್ ಪೇಂಟ್ಸ್ ಕಾರ್ಖಾನೆಯವರಿಗೂ ಸಂಬಂಧ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ದಸಂಸ ಮುಖಂಡ ಮಲ್ಲಹಳ್ಳಿ ನಾರಾಯಣ, ಶಂಕರಪುರ ಮಂಜು, ರೈತ ಸಂಘದ ಹಿಮ್ಮಾವು ರಘು, ಸತೀಶ್ ರಾವ್, ಪ್ರಕಾಶ್ ಹಾಗೂ ನೂರಕ್ಕೂ ಅಧಿಕ ರೈತರು ಪ್ರತಿಭಟನೆಯಲ್ಲಿದ್ದರು.

Post Comments (+)