ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಬೃಹತ್ ಪ್ರತಿಭಟನೆ

ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ
Last Updated 26 ಜೂನ್ 2019, 18:40 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಅಳಗಂಚಿಪುರದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯಲ್ಲಿನ ಮದ್ಯಸಾರ ತಯಾರಿಕಾ ಘಟಕದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಅಂತರ್ಜಲ ಕಲುಷಿತಗೊಂಡಿದೆ ಎಂದು ಆರೋಪಿಸಿ ಸಾವಿರಕ್ಕೂ ಅಧಿಕ ರೈತರು ಕಾರ್ಖಾನೆ ಮುಂಭಾಗ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

‘ಡಿಸ್ಟಲರಿ ತೊಲಗಿಸಿ, ಊರು ಉಳಿಸಿ’ ಘೋಷಣೆಯೊಂದಿಗೆ ತಾಲ್ಲೂಕು ರೈತ ಸಂಘದ ನೇತೃತ್ವದಲ್ಲಿ ರೈತರು ಇಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಿಸಿದರು.

ತಾಲ್ಲೂಕಿನ ಅಳಗಂಚಿ, ಅಳಗಂಚಿಪುರ, ಮಡಹಳ್ಳಿ, ಬೊಂಡಗಳ್ಳಿ, ಕಿರುಗುಂದ, ಮಲ್ಲೂಪುರ ಹಾಗೂ ಸೀನಹಳ್ಳಿಯ ಸಾವಿರಾರು ಗ್ರಾಮಸ್ಥರು ಅಳಗಂಚಿಪುರ ಗ್ರಾಮದಲ್ಲಿ ಜಮಾವಣೆಗೊಂಡು, ಗ್ರಾಮದಿಂದ ಅಳಗಂಚಿ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಗೆ ಮೆರವಣಿಗೆಯಲ್ಲಿ ತೆರಳಿ ಕಾರ್ಖಾನೆಯ ಮುಂಭಾಗ ಧರಣಿ ಕುಳಿತರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಕಾರ್ಖಾನೆ 60 ಕೆ.ಎಲ್.ಪಿ.ಡಿ. ಸಾಮರ್ಥ್ಯದ ಮದ್ಯಸಾರ ತಯಾರಿಕಾ ಘಟಕ ನಡೆಸುತ್ತಿದೆ. ಇದರಿಂದ ಸುತ್ತಮುತ್ತಲ ಗ್ರಾಮಗಳ ಅಂತರ್ಜಲ ಕಲುಷಿತಗೊಂಡಿದೆ. ಗ್ರಾಮಗಳ ಕುಡಿಯುವ ನೀರಿನ ಬಾವಿಗಳಲ್ಲಿ ಹಳದಿ ಮಿಶ್ರಿತ ನೀರು ಬರುತ್ತಿದೆ. ಜನರಿಗೆ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ’ ಎಂದು ಆರೋಪಿಸಿದರು.

ಕಾರ್ಖಾನೆ ಮತ್ತೆ ಹೆಚ್ಚುವರಿಯಾಗಿ 150 ಕೆ.ಎಲ್.ಪಿ.ಡಿ. ಸಾಮರ್ಥ್ಯದ ಮದ್ಯಸಾರ ಘಟಕ ಸ್ಥಾಪಿಸಲು ಹಿಂದಿನ ಜಿಲ್ಲಾಧಿಕಾರಿ ಶಿಖಾ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ರೈತರು ಘಟಕ ಸ್ಥಾಪನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಈಗ ಗ್ರಾಮಸ್ಥರ ವಿರೋಧದ ನಡುವೆಯೂ ಕಾರ್ಖಾನೆ ಆಡಳಿತ ಮಂಡಳಿ ಹೆಚ್ಚುವರಿ ಘಟಕ ಸ್ಥಾಪಿಸಲು ನಿರ್ಮಾಣ ಕಾರ್ಯ ಆರಂಭಿಸಿದೆ’ ಎಂದು ಕಿಡಿಕಾರಿದರು.

‘ಯಾವುದೇ ಕಾರಣಕ್ಕೂ ನಮ್ಮ ಕೃಷಿ ಭೂಮಿ, ಅಂತರ್ಜಲ, ರೈತರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಘಟಕ ಸ್ಥಾಪಿಸಲು ಬಿಡುವುದಿಲ್ಲ. ಕಾರ್ಖಾನೆ ಮುಂಭಾಗ ಅನಿರ್ದಿಷ್ಟಾವಧಿ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು’ ಎಂದು ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿ ರೈತರಿಂದ ಮನವಿ ಸ್ವೀಕರಸಿ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಯತೀಶ್, ‘ಅಳಗಂಚಿಪುರ ಗ್ರಾಮದ 4 ಕಡೆ ಕೊಳವೆ ಬಾವಿ ನೀರನ್ನು ಪರೀಕ್ಷಿಸಲಾಗಿದ್ದು, ಕುಡಿಯಲು ಯೋಗ್ಯವಾಗಿಲ್ಲ ಎಂದು ಜಿಲ್ಲಾಧಿಕಾರಿಗೆ ಈಗಾಗಲೇ ವರದಿ ನೀಡಲಾಗಿದೆ. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಕಾರ್ಖಾನೆ ನಡೆಸುತ್ತಿರುವ 60 ಕೆ.ಎಲ್.ಪಿ.ಡಿ. ಸಾಮರ್ಥ್ಯದ ಮದ್ಯಸಾರ ಘಟಕವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಆದೇಶ ನೀಡಿದ್ದಾರೆ. ಶುಕ್ರವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಿ.ಸುಧಾಕರ್ ಬಾಧಿತವಾಗಿರುವ 8 ಗ್ರಾಮಗಳಿಗೆ ಭೇಟಿ ನೀಡಿ ಸಭೆ ನಡೆಸಿ ರೈತರ ಸಂಕಷ್ಟ ಆಲಿಸಲಿದ್ದಾರೆ’ ಎಂದು ಭರವಸೆ ನೀಡಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಲಕ್ಷ್ಮಿ ನಾರಾಯಣ ಗೌಡ, ಮುಖಂಡರಾದ ಪುಟ್ಟಯ್ಯ, ಹಿಮ್ಮಾವು ರಘು, ಸತೀಶ್ ರಾವ್, ಶಿವಪ್ರಸಾದ್, ಮಂಜು, ಕಿರಣ್, ಮಹದೇವಸ್ವಾಮಿ, ದೊಡ್ಡಯ್ಯ, ನಾಗರಾಜು, ಮೋಹನ್, ನಂಜುಂಡಸ್ವಾಮಿ, ಪುಟ್ಟಬಸಪ್ಪ, ನಂಜುಂಡೇಗೌಡ, ಮಂಗಳಮ್ಮ, ಪದ್ಮಮ್ಮ, ರೋಹಿಣಿ ಪ್ರತಿಭಟನೆಯಲ್ಲಿದ್ದರು.

ಸಿ.ಪಿ.ಐ. ಶೇಖರ್ ನೇತೃತ್ವದಲ್ಲಿ ಕವಲಂದೆ ಪಿ.ಎಸ್.ಐ.ರವಿ ಕುಮಾರ್ ಹಾಗೂ ಬಿಳಿಗೆರೆ ಪಿ.ಎಸ್.ಐ. ಯಶ್ವಂತ್ ಕುಮಾರ್ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT