ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ಶಿಕ್ಷಕರ ಪ್ರತಿಭಟನೆ

ಜಿಲ್ಲಾಮಟ್ಟದ ಕೌನ್ಸೆಲಿಂಗ್‌ಗೆ ಆಗ್ರಹ
Last Updated 29 ಜೂನ್ 2019, 19:29 IST
ಅಕ್ಷರ ಗಾತ್ರ

ಮೈಸೂರು: ಪ್ರೌಢಶಾಲಾ ಹೆಚ್ಚುವರಿ ಸಹಶಿಕ್ಷಕರು ವಿಭಾಗಮಟ್ಟದ ಕೌನ್ಸೆಲಿಂಗ್ ವಿರೋಧಿಸಿ ಇಲ್ಲಿನ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ನೇತೃತ್ವದಲ್ಲಿ 350ಕ್ಕೂ ಹೆಚ್ಚು ಮಂದಿ ಸಹಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಿದರು.

ಹೊಸ ಶಿಕ್ಷಣ ನೀತಿಯು 40 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಎಂದು ಹೇಳಿದೆ. ಸರ್ಕಾರ ಕನಿಷ್ಠ 50 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಎಂದು ಪರಿಗಣಿಸಬೇಕು. ಆದರೆ, 70 ವಿದ್ಯಾರ್ಥಿಗಳಿಗೆ ಒಬ್ಬರು ಶಿಕ್ಷಕರು ಎಂಬ ಹಳೆಯ ಸೂತ್ರವನ್ನೇ ಇನ್ನೂ ಪಾಲಿಸುತ್ತಿರುವುದರಿಂದ ಹೆಚ್ಚುವರಿ ಶಿಕ್ಷಕರ ಸಮಸ್ಯೆ ಸೃಷ್ಟಿಯಾಗಿದೆ ಎಂದು ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎ.ಆರ್.ಗೋಪಿನಾಥ್ ತಿಳಿಸಿದರು.

ರಾಜ್ಯದಲ್ಲಿ ಸುಮಾರು 85 ಸಾವಿರ ಪ್ರೌಢಶಾಲಾ ಶಿಕ್ಷಕರು ಇದ್ದಾರೆ. ಇವರಲ್ಲಿ 2 ಸಾವಿರ ಮಂದಿಯನ್ನು ಹೆಚ್ಚುವರಿ ಶಿಕ್ಷಕರು ಎಂದು ಗುರುತಿಸಲಾಗಿದೆ. ಆದರೆ, ಸರ್ಕಾರ ಒಂದು ಸಾವಿರ ಹೊಸ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಇದು ಸರ್ಕಾರದ ಇಬ್ಬಗೆ ನೀತಿ ಎಂದು ಅವರು ಖಂಡಿಸಿದರು.

ಈ ಮೊದಲು ಜಿಲ್ಲಾಮಟ್ಟದಲ್ಲೇ ಕೌನ್ಸೆಲಿಂಗ್ ನಡೆಯುತ್ತಿತ್ತು. ಈಗ ಇದನ್ನು ವಿಭಾಗಮಟ್ಟದಲ್ಲಿ ಮಾಡಲಾಗುತ್ತಿದೆ. ಚಾಮರಾಜನಗರದ ಶಿಕ್ಷಕರನ್ನು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ಇದು ಸರಿಯಲ್ಲ. ಮುಂಚೆ ಇದ್ದಂತೆ ಆಯಾ ಜಿಲ್ಲಾ ಮಟ್ಟದಲ್ಲೇ ವರ್ಗಾವಣೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಅಂಧರು, ಅಂಗವಿಕಲರು, ಹಿರಿಯರು, ನಿವೃತ್ತಿಗೆ ಒಂದೆರಡು ವರ್ಷ ಬಾಕಿ ಉಳಿದವರು, ಕಾಯಿಲೆಯಿಂದ ಬಳಲುವವರಿಗೆ ಈ ವಿಭಾಗಮಟ್ಟದ ವರ್ಗಾವಣೆ ನಿಜಕ್ಕೂ ಆಘಾತಕಾರಿಯಾಗಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT