ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಧಕರಿಗಾಗಿ ಆಗ್ರಹಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಮೂಲಸೌಕರ್ಯ ಒದಗಿಸಲು ಒತ್ತಾಯ, ಎಐವೈಡಿಒ ಸಂಘಟನೆ ಬೆಂಬಲ
Last Updated 24 ಜುಲೈ 2019, 19:21 IST
ಅಕ್ಷರ ಗಾತ್ರ

ಮೈಸೂರು: ಬೋಧಕರಿಗಾಗಿ ಆಗ್ರಹಿಸಿ ಯುವರಾಜ ಕಾಲೇಜಿನ ನೂರಾರು ವಿದ್ಯಾರ್ಥಿಗಳು ಬುಧವಾರ ಮಿಂಚಿನ ಪ್ರತಿಭಟನೆ ನಡೆಸಿದರು.

ಕಳೆದ ಒಂದೂವರೆ ತಿಂಗಳುಗಳಿಂದ ಕಾಲೇಜು ಆರಂಭವಾಗಿದೆ. ಪಾಠ ಮಾಡಲು ಬೋಧಕರೇ ಇಲ್ಲ. ಅತಿಥಿ ಉಪನ್ಯಾಸಕರ ನೇಮಕಕ್ಕೆ ಮೈಸೂರು ವಿಶ್ವವಿದ್ಯಾನಿಲಯವು ಮೀನಾಮೇಷ ಎಣಿಸುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೆರಡು ತಿಂಗಳು ಕಳೆದರೆ ಶೈಕ್ಷಣಿಕ ವರ್ಷದ ಸೆಮಿಸ್ಟರ್‌ ಪರೀಕ್ಷೆ ಬರಲಿದೆ. ಇನ್ನೂ ಪಾಠಗಳೇ ಆರಂಭವಾಗಿಲ್ಲ. ಪರೀಕ್ಷೆಯಲ್ಲಿ ಬರೆಯುವುದಾದರೂ ಹೇಗೆ ಎಂದು ವಿದ್ಯಾರ್ಥಿ ಅಮೋಘ ‍ಪ್ರಶ್ನಿಸಿದರು.

ಪ್ರತಿ ವರ್ಷ ಪ್ರತಿಭಟನೆ ನಡೆಸಿದ ಬಳಿಕವಷ್ಟೇ ಅತಿಥಿ ಉಪನ್ಯಾಸಕರ ನೇಮಕಾತಿ ನಡೆಯುತ್ತದೆ. ವಿದ್ಯಾರ್ಥಿಗಳ ಪ್ರವೇಶಾತಿ ಸಮಯದಲ್ಲೇ ಅತಿಥಿ ಉಪನ್ಯಾಸಕರ ನೇಮಕಾತಿಯನ್ನೂ ನಡೆಸಬೇಕು ಎಂದು ಎಷ್ಟು ಹೇಳಿದರೂ ವಿ.ವಿ ಕೇಳುತ್ತಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಸುಜಿತ್ ಅಸಹಾಯಕತೆ ವ್ಯಕ್ತಪಡಿಸಿದರು.

ಕೇವಲ ಬೋಧಕರ ಸಮಸ್ಯೆ ಮಾತ್ರ ಕಾಲೇಜಿನಲ್ಲಿ ಇಲ್ಲ. ಇಲ್ಲಿ ಶೌಚಾಲಯವೂ ಸರಿ ಇಲ್ಲ. ಗಬ್ಬೆದ್ದು ನಾರುವ ಶೌಚಾಲಯಗಳು ಸಾಂಕ್ರಮಿಕ ರೋಗಗಳನ್ನು ಹರಡುವ ತಾಣಗಳಾಗಿವೆ. ಇಷ್ಟು ಮಾತ್ರವಲ್ಲ, ಕುಡಿಯುವ ನೀರೂ ಸರಿಯಾಗಿ ಇಲ್ಲ. ವಿದ್ಯಾರ್ಥಿಗಳು ಬಾಯಾರಿಕೆಯಿಂದ, ಶೌಚವನ್ನು ತಡೆದುಕೊಂಡೇ ಪಾಠ ಕೇಳಬೇಕಿದೆ ಎಂದು ಮತ್ತೊಬ್ಬ ವಿದ್ಯಾರ್ಥಿ ಧನುಷ್ ತಿಳಿಸಿದರು.

ಕಾಲೇಜಿನಲ್ಲಿ ಬಿಎಸ್ಸಿ ಪದವಿಯಲ್ಲಿ 19 ವಿಭಾಗಗಳಿವೆ. ಬಿಸಿಎ ಎಂಬ ಪ್ರತ್ಯೇಕ ವಿಭಾಗವೂ ಇದೆ. ಇದರಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಇದ್ದಾರೆ. ಆದರೆ, ಬೋಧಕರ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಜತೆಗೆ, ಮೂಲಸೌಕರ್ಯಗಳು ಈ ವಿದ್ಯಾರ್ಥಿಗಳಿಗೆ ಇರುವಷ್ಟು ಇಲ್ಲ ಎಂದು ಪ್ರತಿಭಟನೆಯನ್ನು ಬೆಂಬಲಿಸಿದ್ದ ಎಐಡಿವೈಒ ಸಂಘಟನೆಯ ಆಕಾಶ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT