ಭಾನುವಾರ, ಫೆಬ್ರವರಿ 28, 2021
23 °C
ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಆಕ್ರೋಶ

ಕೇಂದ್ರ ಸರ್ಕಾರದ ಕಾರ್ಮಿಕ ಸಂಘಟನೆಗಳ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಒಗ್ಗೂಡಿ ಬುಧವಾರ ಪುರಭವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ನೂರಾರು ಮಂದಿ ಕಾರ್ಮಿಕರು ಘೋಷಣೆಗಳನ್ನು ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಮಿಕರ ಭಾರಿ ವಿರೋಧದ ನಡುವೆಯೂ ಕೇಂದ್ರ ಸರ್ಕಾರವು ಕಾರ್ಮಿಕ ಕಾನೂನುಗಳನ್ನು ಬದಲಿಸಿದೆ. ಈ ಮೂಲಕ ಪ್ರಜಾತಂತ್ರವನ್ನು ಕಡೆಗಣಿಸಿದೆ ಎಂದು ನೇರವಾಗಿ ಆರೋಪಿಸಿದರು.

‘ವೇತನ ಮಸೂದೆ 2019’ ಮತ್ತು ‘ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ ಮಸೂದೆ 2019’ ಅನ್ನು ವಿರೋಧ ಪಕ್ಷಗಳ ಹಲವು ತಕರಾರುಗಳಿಗೆ ಯಾವುದೇ ಉತ್ತರ ಕೊಡದೇ ಏಕಪಕ್ಷೀಯವಾಗಿ ಅಂಗೀಕರಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಅವರು ಪ್ರಶ್ನಿಸಿದರು.

‘ಔದ್ಯೋಗಿಕ ರಕ್ಷಣೆ, ಆರೋಗ್ಯ ಮತ್ತು ಕಾರ್ಯಸ್ಥಳದ ಸ್ಥಿತಿಗತಿ 2019’ ಕಾನೂನು ಈಗ ಇರುವ 13 ಪ್ರತ್ಯೇಕ ಕಾರ್ಮಿಕ ಕಾನೂನುಗಳ ಬದಲಾಗಿ ಜಾರಿಗೆ ತರಲಾಗಿದೆ. ಇದು 10ಕ್ಕಿಂತ ಹೆಚ್ಚು ಕೆಲಸಗಾರರಿರುವ ಉದ್ದಿಮೆಗಳಿಗೆ ಮಾತ್ರ ಅನ್ವಯ ಆಗುವುದರಿಂದ ಅಸಂಘಟಿತ ವಲಯ, ಹೊರಗುತ್ತಿಗೆ ಮತ್ತು ಗುಡಿ ಕೈಗಾರಿಕೆಗಳಲ್ಲಿ ದುಡಿಯುವ ಶೇ 90 ಮಂದಿ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ ಎಂದು ಕಿಡಿಕಾರಿದರು.

ಮಾಲೀಕರಿಗಷ್ಟೇ ಪ್ರಯೋಜನವಾಗುವಂತಹ ಕಾನೂನುಗಳನ್ನು ಜಾರಿಗೊಳಿಸಲಾಗಿದೆ. ಈ ಕಾನೂನುಗಳಿಂದ ಕಾರ್ಮಿಕರಿಗೆ ಯಾವುದೇ ಪ್ರಯೋಜವಾಗಿಲ್ಲ. ಪ್ರಯೋಜನಕ್ಕಿಂತ ತೊಂದರೆಯೇ ಅಧಿಕ ಎಂದು ಆರೋಪಿಸಿದರು.

ನೂತನ ಮಸೂದೆ ಪ್ರಕಾರ ಕಾರ್ಮಿಕರಿಗೆ ಕೆಲಸದ ವೇಳೆ ಅನಾಹುತ ಸಂಭವಿಸಿದಾಗ ಕಾರ್ಮಿಕರು ಹಾಗೂ ಅವರ ಯೂನಿಯನ್‍ಗಳ ತಮ್ಮ ಹಕ್ಕುಗಳ ಕುರಿತು ಮಾತನಾಡುವಂತಿಲ್ಲ ಹಾಗೂ ಮಾಲೀಕರ ಉತ್ತರಾಯಿತ್ವವನ್ನು ಒತ್ತಾಯಿಸುವಂತಿಲ್ಲ. ಈ ರೀತಿಯ ಕಾನೂನು ನಮ್ಮ ಸರ್ಕಾರ ರೂಪಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಮಿಕ ಸಂಘಟನೆಗಳಾದ ಐಎನ್‍ಟಿಯುಸಿ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ ಹಾಗೂ ಇತರ ಸ್ವತಂತ್ರ ಫೆಡರೇಷನ್, ಅಸೋಸಿಯೇಷನ್, ಟ್ರೇಡ್ ಯೂನಿಯನ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸದಸ್ಯರು ಪ್ರತಿಭಟನೆಯಲ್ಲಿದ್ದರು. ಕಾರ್ಮಿಕ ಮುಖಂಡರಾದ ಎಚ್.ಬಿ.ರಾಮಕೃಷ್ಣ, ಸೋಮರಾಜೇ ಅರಸ್, ಜಿ.ಜಯರಾಂ, ಶಶಿಕುಮಾರ್ ಇತರರು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.