ಶುಕ್ರವಾರ, ನವೆಂಬರ್ 15, 2019
20 °C
ಸ್ಥಳೀಯರಿಗೆ ಉದ್ಯೋಗ ನೀಡಲು ಒತ್ತಾಯ

ತಮಿಳುನಾಡು ತಗಾದೆಗೆ ಖಂಡನೆ: ಮೈಸೂರು ಪಾಕ್ ವಿತರಿಸಿ ವಾಟಾಳ್ ಪ್ರತಿಭಟನೆ

Published:
Updated:
Prajavani

ಮೈಸೂರು: ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಬುಧವಾರ ಮೈಸೂರು ಪಾಕ್‌ನ್ನು ರೈಲು ನಿಲ್ದಾಣದ ಮುಂಭಾಗ ಸಾರ್ವಜನಿಕರಿಗೆ ಉಚಿತವಾಗಿ ಹಂಚಿಕೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.

ಕಾವೇರಿ, ಮೇಕೆದಾಟು ವಿಷಯದಲ್ಲಿ ತಕರಾರು ತೆಗೆಯುವ ತಮಿಳುನಾಡು ಇದೀಗ ಮೈಸೂರು ಪಾಕ್ ವಿಷಯದಲ್ಲೂ ತಗಾದೆ ತೆಗೆದಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.

ಸಿಹಿ ತಿಂಡಿಯ ಹೆಸರಿನ ಜತೆಗೆ ಮೈಸೂರು ಇದೆ. ಹಾಗಿದ್ದ ಮೇಲೆ ಇದು ತಮಿಳುನಾಡಿನದು ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಮೈಸೂರಿನಲ್ಲೇ ತಯಾರಾಗಿದ್ದು ಎಂಬುದು ದಾಖಲೆಗಳಲ್ಲೂ ಇದೆ. ಆದರೆ, ತಮಿಳುನಾಡು ಕಾವೇರಿ ಹಾಗೂ ಮೇಕೆದಾಟು ವಿಷಯದಲ್ಲಿ ತಕರಾರು ತೆಗೆದು ಸಾಕಾಗಿ ಈಗ ಮೈಸೂರು ಪಾಕ್‍ಗೆ ಕೈ ಹಾಕಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮೂಗೂರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ ಸೇರಿದಂತೆ ಇನ್ನಿತರರು ಇದ್ದರು.

ಸ್ಥಳೀಯರಿಗೆ ಉದ್ಯೋಗ ನೀಡಲು ಒತ್ತಾಯ

ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ನೀಡದೇ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಕದಂಬ ಸೈನ್ಯ ಸಂಘಟನೆಯ ಕಾರ್ಯಕರ್ತರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರಾಗಿದ್ದು, ಉದ್ಯೋಗ ನೀಡುವಾಗ ಕನ್ನಡಿಗರಿಗೆ ಮೊದಲ ಆದ್ಯತೆ ನೀಡಬೇಕು. ಆದರೆ ಎಲ್ಲಾ ಮುಖ್ಯ ಹುದ್ದೆಗಳಲ್ಲೂ ಬೇರೆ ರಾಜ್ಯದವರೇ ಇದ್ದಾರೆ. ಇದು ಕನ್ನಡಿಗರಿಗೆ ಮಾಡಿದ ಅವಮಾನ ಹಾಗೂ ಮರಣ ಶಾಸನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬೇಕ್ರಿ ರಮೇಶ್, ಮೈಸೂರು ವಿಭಾಗದ ಸಂಚಾಲಕ ಎನ್.ವೆಂಕಟೇಶ್, ಮೈಸೂರು ಜಿಲ್ಲಾ ಘಟಕದ ಅಧ್ಯಕ್ಷ ಎ.ನಾಗೇಂದ್ರ, ನಾ.ಮಹದೇವಸ್ವಾಮಿ, ಚಂದ್ರಶೇಖರ ಪಟೇಲ, ಎಸ್.ಶಿವಕುಮಾರ್, ಉಮ್ಮಡಹಳ್ಳಿ ನಾಗೇಶ್, ಬಾಲಾಜಿ ನಾಯಕ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಕಾನೂನು ಕ್ರಮಕ್ಕೆ ಆಗ್ರಹ

ಸಂಸದ ಎ.ನಾರಾಯಣಸ್ವಾಮಿ ಅವರಿಗೆ ದಲಿತ ಎಂಬ ಕಾರಣಕ್ಕೆ ಗೊಲ್ಲರಹಟ್ಟಿ ಗ್ರಾಮಕ್ಕೆ ಪ್ರವೇಶ ನೀಡದಿರುವ ಕ್ರಮ ಖಂಡಿಸಿ ಸಾಮಾಜಿಕ ನ್ಯಾಯಪರ ವೇದಿಕೆ ವತಿಯಿಂದ ಬುಧವಾರ ಪುರಭವನದ ಮುಂದೆ ಪ್ರತಿಭಟನೆ ನಡೆಸಲಾಯಿತು.

ಬಸವಣ್ಣ ಹುಟ್ಟಿದ ನಾಡಿನಲ್ಲಿ 21ನೇ ಶತಮಾನದಲ್ಲಿಯೂ ಅಸ್ಪೃಶ್ಯತೆ ಜೀವಂತವಾಗಿದೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದು ಅವರು ಖಂಡಿಸಿದರು.

ಕೂಡಲೇ ತಪ್ಪಿತಸ್ತರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮರಡೀಪುರ ರವಿಕುಮಾರ್, ಪ್ರಸನ್ನ ಚಕ್ರವರ್ತಿ, ವಿನೋದ್, ಶ್ರೀನಿವಾಸ್, ನಾಗರಾಜು, ವಿಷ್ಣು, ಬಸವರಾಜು, ಸ್ವಾಮಿ, ಪ್ರಭು, ಮೇಟಗಳ್ಳಿ ಸಿದ್ದರಾಜು, ಮಧುರಾಜ್, ತಿಮ್ಮರಾಜು, ಕೃಷ್ಣಪ್ಪ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು.

ಪ್ರತಿಕ್ರಿಯಿಸಿ (+)