ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ಆರ್ಥಿಕ ಸ್ಥಿತಿ ಶೋಚನೀಯ; ಕಾಂಗ್ರೆಸ್‌

ಹಿಂದಿ ಏರಿಕೆ ವಿರುದ್ಧ ಸಿಐಟಿಯು ಪ್ರತಿಭಟನೆ; ದಸರಾದಲ್ಲಿ ಕನ್ನಡಿಗರ ಕಡೆಗಣನೆ–ಆಕ್ರೋಶ
Last Updated 20 ಸೆಪ್ಟೆಂಬರ್ 2019, 15:27 IST
ಅಕ್ಷರ ಗಾತ್ರ

ಮೈಸೂರು: ಸಕಾಲಕ್ಕೆ ನೆರೆ ಸಂತ್ರಸ್ತರ ಸಹಾಯಕ್ಕೆ ಮುಂದಾಗದ ಕೇಂದ್ರ ಸರ್ಕಾರದ ವಿರುದ್ಧ ಮಹಿಳಾ ಕಾಂಗ್ರೆಸ್‌ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನೆರೆಯಿಂದ ಹಾನಿಗೀಡಾಗಿ ಒಣಗಿದ ಶುಂಠಿ, ಬಾಳೆ, ಜೋಳ ಇನ್ನಿತರೆ ಬೆಳೆಗಳನ್ನು ಚೀಲವೊಂದಕ್ಕೆ ತುಂಬಿ, ಅಂಚೆ ಕಚೇರಿಯಿಂದ ಪ್ರಧಾನ ಮಂತ್ರಿ, ಗೃಹ ಸಚಿವ ಅಮಿತ್‌ ಶಾ ವಿಳಾಸಕ್ಕೆ ಸ್ಪೀಡ್‌ ಪೋಸ್ಟ್‌ ಕಳುಹಿಸಲಾಯಿತು.

ಕಾಂಗ್ರೆಸ್‌ ಕಚೇರಿಯಿಂದ ಆರಂಭಗೊಂಡ ಪ್ರತಿಭಟನೆಯಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗಿಯಾಗಿದ್ದರು. ಇರ್ವಿನ್‌ ರಸ್ತೆಯ ನೆಹರು ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಕೇಂದ್ರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು.

‘ಕೇಂದ್ರ ಸರ್ಕಾರದ ಆರ್ಥಿಕ ಸ್ಥಿತಿ ಚಿಂತಾಜನಕವಾಗಿರುವುದರಿಂದಲೇ ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆ ಮಾಡುತ್ತಿಲ್ಲ. ಪ್ರವಾಹದಿಂದಾದ ನಷ್ಟ ಭರಿಸುವ ಶಕ್ತಿ ಇಲ್ಲವಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯ್‌ಕುಮಾರ್‌ ದೂರಿದರು.

ಮಹಿಳಾ ಕಾಂಗ್ರೆಸ್‌ ಘಟಕದ ರಾಜ್ಯ ಅಧ್ಯಕ್ಷೆ ಡಾ.ಪುಷ್ಪಲತಾ ಅಮರ್‌ನಾಥ್‌, ಎಐಸಿಸಿ ಕಾರ್ಯದರ್ಶಿ ಪಿ.ಸಿ.ವಿಷ್ಣುನಾದ್‌, ಮಾಜಿ ಸಚಿವ ಎಚ್‌.ಸಿ.ಮಹದೇವಪ್ಪ, ಮಾಜಿ ಶಾಸಕ ಎಚ್‌.ಪಿ.ಮಂಜುನಾಥ್‌, ಜಿಲ್ಲಾ, ರಾಜ್ಯ ಘಟಕದ ಪದಾಧಿಕಾರಿಗಳು ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ದಸರಾ: ಕಡೆಗಣನೆಗೆ ಖಂಡನೆ

ದಸರಾದಲ್ಲಿ ಕನ್ನಡ ಹೋರಾಟಗಾರರನ್ನು ಕಡೆಗಣಿಸಲಾಗಿದೆ ಎಂದು ದೂರಿ ಕನ್ನಡ ಒಕ್ಕೂಟದ ವತಿಯಿಂದ ಪ್ರತಿಭಟಿಸಲಾಯಿತು.

ನಗರದ ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಈಚೆಗಿನ ವರ್ಷಗಳಲ್ಲಿ ಜನಪ್ರತಿನಿಧಿಗಳ ನೇತೃತ್ವದ ಜಿಲ್ಲಾ ಮಟ್ಟದ ಅಧಿಕಾರಿಗಳ ದಸರಾ ವರ್ಷ ಕಳೆದಂತೆಲ್ಲ ತನ್ನ ವರ್ಚಸ್ಸು–ವೈಭವವನ್ನು ಕಳೆದುಕೊಳ್ಳುತ್ತಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತಂತೆ ಉಸ್ತುವಾರಿ ಸಚಿವರು, ಶಾಸಕರನ್ನು ಭೇಟಿ ಮಾಡಿದರೂ ಉಡಾಫೆಯ ಸ್ಪಂದನೆ ಸಿಗುತ್ತಿದೆ. ದಸರಾಗೆ ಹೊಸತನ ನೀಡುವ ಕನ್ನಡ ಹೋರಾಟಗಾರರನ್ನು ಒಳಗೊಂಡ ಶಾಶ್ವತ ಸಮಿತಿಯನ್ನು ರಚಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಸತ್ಯಪ್ಪ, ಅರವಿಂದ್ ಶರ್ಮ, ತೇಜಸ್ವಿ ಕುಮಾರ್, ಕುರುಬರಹಳ್ಳಿ ಧನಪಾಲ್, ಗೋವಿಂದರಾಜು, ನಂದೀಶ್ ಅರಸ್, ಮಂಜುನಾಥ್ ಪೈ, ನಾಗರಾಜು, ತಾರ, ಪುಟ್ಟಮಾದಯ್ಯ, ಇಂದ್ರಮ್ಮ, ಪಾರ್ವತಮ್ಮ, ರೇವಮ್ಮ, ರಮ್ಮನಹಳ್ಳಿ ಗೋಪಾಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಕಠಿಣ ಶಿಕ್ಷೆಗೆ ಆಗ್ರಹ

ಬಳ್ಳಾರಿ ಜಿಲ್ಲೆಯಲ್ಲಿ ಮಡಿವಾಳ ಸಮಾಜದ ಬಾಲಕಿ ಮೇಲೆ ಅತ್ಯಾಚಾರ ನಡೆದಿದ್ದು, ಆರೋಪಿ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಜಿಲ್ಲಾ ಮಡಿವಾಳರ ಸಂಘ ಆಗ್ರಹಿಸಿತು.

ನಗರದ ಅಗ್ರಹಾರ ವೃತ್ತದಲ್ಲಿ ಜಮಾಯಿಸಿದ ಸಮಾಜದ ಮುಖಂಡರು ಸಂತ್ರಸ್ತ ಬಾಲಕಿ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಬಾಲಕಿ ಕುಟುಂಬಕ್ಕೆ ಸ್ವಂತ ಮನೆಯಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ವಿ.ಸೋಮಣ್ಣ ವಸತಿ ಖಾತೆಯ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಸಂತ್ರಸ್ತೆ ಕುಟುಂಬಕ್ಕೆ ಮನೆ ಮಂಜೂರು ಮಾಡಿಕೊಡಬೇಕು ಎಂದು ಇದೇ ಸಂದರ್ಭ ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಚಂದ್ರಶೇಖರ ಭೈರಿ, ಉಪಾಧ್ಯಕ್ಷ ಎಸ್‌.ಜೆ.ಪ್ರಶಾಂತ್, ಚನ್ನಕೇಶವ, ವಿಜಯಲಕ್ಷ್ಮೀ, ವಸಂತಕುಮಾರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ರಾಷ್ಟ್ರೀಯ ಐಕ್ಯತೆಗೆ ಧಕ್ಕೆ

ಕೇಂದ್ರ ಸರ್ಕಾರ ಹಿಂದಿ ಹೇರಲು ಹುನ್ನಾರ ನಡೆಸಿದೆ ಎಂದು ದೂರಿ ಸಿಐಟಿಯು ಸಂಘಟನೆ ಶುಕ್ರವಾರ ನಗರದಲ್ಲಿ ಪ್ರತಿಭಟಿಸಿತು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಒಂದೇ ಭಾಷೆಯಿಂದ ದೇಶದ ಐಕ್ಯತೆಗೆ ಸಹಕಾರಿಯಾಗಲಿದೆ ಎಂದು ಹೇಳಿರುವುದು ಅಪ್ಪಟ ಸುಳ್ಳು. ರಾಷ್ಟ್ರದಲ್ಲಿ ಒಂದೇ ಭಾಷೆ ಎಂಬುದು ಅನುಷ್ಠಾನಗೊಂಡರೆ ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯಾಗಲಿದೆ ಎಂದು ಸಂಘಟನೆ ಮುಖಂಡರು ಕಿಡಿಕಾರಿದರು.

ಬಹುತ್ವ ಸಂಸ್ಕೃತಿಯ ದೇಶದಲ್ಲಿ ಒಂದೇ ಭಾಷೆಯ ನಿಲುವನ್ನು ಒಪ್ಪುವುದು ಸಾಧ್ಯವಿಲ್ಲ. ಇದಕ್ಕೆ ಆಸ್ಪದವನ್ನೂ ನೀಡಲ್ಲ ಎಂದು ಸಂಘಟನೆಯ ಅಧ್ಯಕ್ಷ ಬಾಲಾಜಿ ಪ್ರತಿಭಟನಾ ಸಭೆಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT