ಬುಧವಾರ, ನವೆಂಬರ್ 20, 2019
27 °C

ಪಿಂಚಣಿಗಾಗಿ ನೌಕರರ ಪ್ರತಿಭಟನೆ

Published:
Updated:
Prajavani

ಮೈಸೂರು: ಪಿಂಚಣಿ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಗುರುವಾರ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೇಡಿಕೆ ಈಡೇರಿಸದೇ ಇದ್ದರೆ ಡಿಸೆಂಬರ್ ಮೊದಲ ವಾರದಿಂದ ಅಡುಗೆ ಕೆಲಸ ನಿಲ್ಲಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವರು ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯಸರ್ಕಾರ ಈ ಹಿಂದೆಯೇ ಪಿಂಚಣಿ ಸೌಲಭ್ಯ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಇದುವರೆಗೂ ಅದನ್ನು ಈಡೇರಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಕುರಿತು ಮಾಸಿಕ ವೇತನದಲ್ಲಿ ಕಡಿತವನ್ನೂ ಮಾಡಿದೆ. ಇಷ್ಟೇ ಹಣ ಸೇರಿಸಿ ನಿವೃತ್ತಿ ಬಳಿಕ ಪಿಂಚಣಿ ರೂಪದಲ್ಲಿ ನೀಡುವುದಾಗಿಯೂ ಹೇಳಿತ್ತು. ಆದರೆ, ಈಗ ಸರ್ಕಾರ ಇದೆಲ್ಲವನ್ನೂ ಮರೆತು ಸುಮ್ಮನಿದೆ ಎಂದು ಅವರು ದೂರಿದರು.

ಯಾವುದೇ ಚರ್ಚೆ ನಡೆಸದೇ ಸರ್ಕಾರವು ಇದೀಗ ಈ ಪಿಂಚಣಿ ಹಣವನ್ನು ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಪಿಂಚಣಿ ಯೋಜನೆಗೆ ಸೇರಿಸುವುದಾಗಿ ಆದೇಶ ಹೊರಡಿಸಿದೆ. ಇದರಿಂದ ಬಿಸಿಯೂಟ ತಯಾರಕರಿಗೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡರು.

ಇದಕ್ಕೂ ಮುನ್ನ ಗನ್‍ಹೌಸ್ ಬಳಿ ಸೇರಿದ ಪ್ರತಿಭಟನಾಕಾರರರು, ಜಿಲ್ಲಾ ಪಂಚಾಯಿತಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಜ್ಯೋತಿ ಅವರಲ್ಲಿ ಮನವಿ ಮಾಡಿದರು.

ಜಿಲ್ಲಾ ಸಮಿತಿ ಗೌರವಾಧ್ಯಕ್ಷೆ ಎಚ್.ಎಸ್.ಸುನಂದಾ, ಪದಾಧಿಕಾರಿಗಳಾದ ಕೆ.ಮಂಜುಳಾ, ಶಂಕರದೇವಮ್ಮ, ಸರಸ್ವತಿ, ಮಂಜುಳಾ ಇತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)