ಗುರುವಾರ , ನವೆಂಬರ್ 21, 2019
23 °C
ಪ್ರತಿಭಟನಾ ಜಾಥಾದಲ್ಲಿ 500ಕ್ಕೂ ಹೆಚ್ಚು ಜನ ಭಾಗಿ

ಮುಂದುವರಿದ ಬೆಮಲ್ ನೌಕರರ ಪ್ರತಿಭಟನೆ

Published:
Updated:
Prajavani

ಮೈಸೂರು: ಖಾಸಗೀಕರಣ ವಿರೋಧಿಸಿ ಬೆಮಲ್ ನೌಕರರು ತಮ್ಮ ಹೋರಾಟವನ್ನು ಶುಕ್ರವಾರವೂ ಮುಂದುವರಿಸಿದರು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಭಾರತ್ ಅರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ನೇತೃತ್ವದಲ್ಲಿ 500ಕ್ಕೂ ಹೆಚ್ಚಿನ ಕಾರ್ಮಿಕರು ಬೃಹತ್ ಜಾಥಾ ನಡೆಸಿದರು.

ದುಡಿಯುವ ಕಾರ್ಮಿಕರ ಅಭಿಪ್ರಾಯದ ವಿರುದ್ಧ ಸರ್ಕಾರ ನಡೆಯುತ್ತಿರುವುದು ನಿಜಕ್ಕೂ ದೊಡ್ಡ ದುರಂತ ಎಂದು ಅವರು ವ್ಯಾಖ್ಯಾನಿಸಿದರು.

‘ಬೆಮಲ್ ಸಂಸ್ಥೆ ಉಳಿಸಿ’ ಎಂಬ ದೊಡ್ಡ ದೊಡ್ಡ ಫಲಕಗಳನ್ನು ಹಿಡಿದು ನೌಕರರು ಆಕ್ರೋಶ ವ್ಯಕ್ತಪಡಿಸಿದರು.

ಕೇವಲ ಬೆಮಲ್ ಮಾತ್ರವಲ್ಲ ದೇಶದ ಯಾವುದೇ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ಬಂಡವಾಳ ಹಿಂತೆಗೆದು ಖಾಸಗಿ ಅವರಿಗೆ ಲಾಭ ದಕ್ಕುವಂತೆ ಮಾಡಬಾರದು ಎಂದು ಒತ್ತಾಯಿಸಿದರು.

‘ಅ. 14ರಿಂದಲೂ ನಿರಂತರವಾಗಿ ಪ್ರತಿಭಟನೆ ಮಾಡುತ್ತಾ ಬರುತ್ತಿದ್ದೇವೆ. ಶನಿವಾರ ಸಂಜೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೋಂಬತ್ತಿ ಮೆರವಣಿಗೆ ಮಾಡುತ್ತೇವೆ. ಮುಂದೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ’ ಎಂದು ಸಂಘಟನೆಯ ಅಧ್ಯಕ್ಷ ಎಚ್.ವೈ.ಮುನಿರೆಡ್ಡಿ ತಿಳಿಸಿದರು.

ಭಾರತ್ ಆರ್ತ್ ಮೂವರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್‌ಗೆ ಬೆಮೆಲ್ ಅಧಿಕಾರಿಗಳ ಒಕ್ಕೂಟ, ಬೆಮೆಲ್ ಎಸ್ಸಿ, ಎಸ್ಟಿ ವೆಲ್‌ಫೇರ್ ಅಸೋಸಿಯೇಷನ್ ಸಾಥ್‌ ನೀಡಿದ್ದವು.

ಉಪಾಧ್ಯಕ್ಷ ಗೋವಿಂದರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಂ.ಡಿ.ರಾಜಶೇಖರಮೂರ್ತಿ, ಸಹಾಯಕ ಕಾರ್ಯದರ್ಶಿ ಸುರೇಶ್, ಖಜಾಂಚಿ ಎಂ.ಬಿ.ಜಗದೀಶ್, ಅಧಿಕಾರಿಗಳ ಒಕ್ಕೂಟದ ಬಿ.ಆರ್.ಚೆನ್ನವೀರಪ್ಪ, ಉಪಾಧ್ಯಕ್ಷ ಶಿವಕುಮಾರ್, ಗುರುಪ್ರಸಾದ್, ಮಾದೇಗೌಡ, ದಿನಗೂಲಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)