ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗರ ಸ್ವಾಭಿಮಾನ ಉಳಿಸಲು ಕರೆ

ಬೆಳಗಾವಿ ಘಟನೆ ಖಂಡಿಸಿ ನಗರದಲ್ಲಿ 2 ಕಡೆ ಪ್ರತಿಭಟನೆ
Last Updated 29 ಆಗಸ್ಟ್ 2020, 12:36 IST
ಅಕ್ಷರ ಗಾತ್ರ

ಮೈಸೂರು: ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದಿರುವ ಹಲ್ಲೆಯನ್ನು ಖಂಡಿಸಿ ಇಲ್ಲಿನ ಜಿಲ್ಲಾಧಿಕಾರಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ನಿಜಕ್ಕೂ ಈಗ ಕನ್ನಡಿಗರ ಸ್ವಾಭಿಮಾನವನ್ನೇ ಕೆಣಕುವಂತಹ ರೀತಿಯಲ್ಲಿ ಹಲ್ಲೆ ನಡೆದಿದೆ. ಇಂತಹ ಸಂದರ್ಭದಲ್ಲಿ ಮರಾಠಿಗರ ಓಲೈಕೆಗಾಗಿ ರಾಜಕಾರಣಿಗಳು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಇನ್ನಾದರೂ ರಾಜಕೀಯ ಪಕ್ಷಗಳು ಈ ರೀತಿ ಓಲೈಕೆ ರಾಜಕಾರಣ ಬಿಡಬೇಕು. ಹಲ್ಲೆ ನಡೆಸಿದವರಿಗೆ ಸೂಕ್ತ ಚಿಕಿತ್ಸೆ ವಿಧಿಸಬೇಕು ಎಂದು ಆಗ್ರಹಿಸಿದರು.

ವೇದಿಕೆಯ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಗುರುಬಸಪ್ಪ, ಬಾಬು, ಗೋಪಿ, ಸುನಿಲ್ ಹಾಗೂ ಇತರರು ಇದ್ದರು.

ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

ಬೆಳಗಾವಿಯಲ್ಲಿನ ಪೀರನವಾಡಿಯಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್‌ನ ಮೈಸೂರು ನಗರ ಘಟಕದ ಕಾರ್ಯಕರ್ತರು ಇಲ್ಲಿನ ಎಫ್‌ಟಿಎಸ್‌ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಬಿಜೆಪಿ ಸರ್ಕಾರಕ್ಕೆ ಕನ್ನಡಿಗರ ಮೇಲೆ ಮಮಕಾರ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಕನ್ನಡಿಗರ ಮೇಲೆ ಪ್ರಕರಣ ಹೂಡಿರುವುದು ಸರಿಯಲ್ಲ ಎಂದು ಖಂಡಿಸಿದರು.

ನಾಡದ್ರೋಹಿಯಾಗಿರುವ ಎಂಇಎಸ್‌ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು.

ಪಕ್ಷದ ನಗರ ಘಟಕದ ವಕ್ತಾರ ಎಸ್.ರಾಜೇಶ್, ಮುಖಂಡರಾದ ಉದಯಕುಮಾರ್, ಲೋಕೇಶ್, ಮಹೇಂದ್ರ ಕಾಗಿನೆಲೆ, ಕುಮಾರ್, ರಾಜೇಶ್ ಹಾಗೂ ಇತರರು ಇದ್ದರು.

ಪೌರಕಾರ್ಮಿಕರ ಮೇಲಿನ ದೌರ್ಜನ್ಯಕ್ಕೆ ಖಂಡನೆ

ಮೈಸೂರು: ಹುಣಸೂರು ತಾಲ್ಲೂಕಿನ ಪೆರಿಯಾರ್ ಗ್ರಾಮದ ಪೌರಕಾರ್ಮಿಕರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಸರಿಯಲ್ಲ ಎಂದು ಖಂಡಿಸಿ, ಅಖಿಲ ಕರ್ನಾಟಕ ಅರಂಧತಿಯಾರ್ ಮಹಾಸಭಾ ನೇತೃತ್ವದಲ್ಲಿ ಕಾರ್ಯಕರ್ತರು ಶನಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಇಲ್ಲಿನ 16 ಪೌರಕಾರ್ಮಿಕರ ಮೇಲೆ ಸುಳ್ಳು ದೂರು ನೀಡಲಾಗಿದೆ. ಇವರ ಮೇಲೆ ವೃಥಾ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಆರೋಪಿಸಿದರು.

ದಾಖಲೆಗಳ ಪ್ರಕಾರ ಇವರಿಗೆ ಸೇರಿದ ಭೂಮಿಯನ್ನು ನೀಡಬೇಕು, ಇವರ ಮೇಲೆ ದೌರ್ಜನ್ಯ ಎಸಗಿದ ಎಲ್ಲ ಅಧಿಕಾರಿಗಳ ವಿರುದ್ಧ ಪರಿಶಿಷ್ಟಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಚಲುವರಾಜ್, ಸಿ.ಆರ್.ಮಹದೇವಯ್ಯ, ನಾಗರಾಜ್, ರವಣಯ್ಯ ಹಾಗೂ ಇತರರು ಇದ್ದರು.

ಮುಂದುವರಿದ ಪ್ರತಿಭಟನೆ

ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿನ ಹಾಸ್ಟೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಕೆಲಸದಿಂದ ತೆಗೆಯಬಾರದು ಎಂದು ಒತ್ತಾಯಿಸಿ ಕ್ರಾಫರ್ಡ್ ಭವನದ ಮುಂಭಾಗ ನಡೆಯುತ್ತಿರುವ ಕಾರ್ಮಿಕರ ಪ್ರತಿಭಟನೆ ಶನಿವಾರವೂ ಮುಂದುವರಿದಿದೆ.

ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಈ ಸಂಬಂಧ ಮೈಸೂರು ವಿಶ್ವವಿದ್ಯಾಲಯದ ಜತೆ ನಡೆದ ಮಾತುಕತೆ ಫಲ ನೀಡಿಲ್ಲ. ಎಲ್ಲರನ್ನೂ ಕೆಲಸದಲ್ಲೇ ಉಳಿಸಿಕೊಳ್ಳಬೇಕು ಎಂದು ಪ್ರತಿಭಟನನಿರತರು ಒತ್ತಾಯಿಸಿದ್ದಾರೆ.

ಸಂಘಟನೆಯ ರಾಜ್ಯ ಘಟಕದ ಸಂಚಾಲಕ ಚಂದ್ರಶೇಖರ ಮೇಟಿ, ಪದಾಧಿಕಾರಿಗಳಾದ ಸಿದ್ದರಾಜು, ರಾಜು, ಹರೀಶ್, ಪಾಲಾಕ್ಷ, ಮಧುಚಂದ್ರ, ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT