ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಖಾಸಗೀಕರಣದ ವಿರುದ್ಧ ಪ್ರತಿಭಟನೆ

ಮೈಸೂರು– ಚಾಮರಾಜನಗರ ಪ್ಯಾಸೆಂಜರ್ ರೈಲು ಪುನರ್‌ ಆರಂಭಕ್ಕೆ ಮನವಿ
Last Updated 23 ನವೆಂಬರ್ 2020, 15:58 IST
ಅಕ್ಷರ ಗಾತ್ರ

ಮೈಸೂರು: ರೈಲ್ವೆಯನ್ನು ಖಾಸಗೀಕರಣಗೊಳಿಸಬಾರದು ಹಾಗೂಮೈಸೂರು ಮತ್ತು ಚಾಮರಾಜನಗರ ಪ್ಯಾಸೆಂಜರ್‌ ರೈಲನ್ನು ಪುನರ್ ಆರಂಭಿಸಬೇಕು ಎಂದು ಆಗ್ರಹಿಸಿ ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಸೋಮವಾರ ಇಲ್ಲಿನ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.

‍ಪ್ರಯಾಣದ ದರವು ಜನಸಾಮಾನ್ಯರಿಗೂ ಎಟುಕುವಂತಿರುವುದರಿಂದ ರೈಲ್ವೆಯು ನಿಜಕ್ಕೂ ಬಡಜನರ ಜೀವನಾಡಿಯಾಗಿದೆ. ಇಂದಿಗೂ ಬಡವರು ಮತ್ತು ಮಧ್ಯಮವರ್ಗದವರು ತಮ್ಮ ಪ್ರಯಾಣಕ್ಕೆ ಈ ರೈಲನ್ನೇ ಅವಲಂಬಿಸಿದ್ದಾರೆ. ಇಂತಹ ಅತಿದೊಡ್ಡ ಸಾರಿಗೆ ಜಾಲವನ್ನು ಖಾಸಗೀಕರಣ ಮಾಡುತ್ತಿರುವುದು ಸರಿಯಲ್ಲ ಎಂದು ಕಾರ್ಯಕರ್ತರು ಖಂಡಿಸಿದರು.

ಇದುವರೆಗೂ ರೈಲ್ವೆಗೆ ಯಾವುದೇ ನಷ್ಟವಾಗಿಲ್ಲ. 2017–18 ಮತ್ತು 2018–19ರಲ್ಲಿ ರೈಲ್ವೆ ಹೆಚ್ಚಿನ ಲಾಭವೇ ಆಗಿತ್ತು. ಹೀಗಿರುವಾಗ, ಖಾಸಗೀಕರಣ ಮಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ಪ್ರಸ್ತುತ ವ್ಯವಸ್ಥೆಯಲ್ಲಿ ಅಸಮರ್ಥತೆ ಹಾಗೂ ಲೋಪಗಳು ಕಂಡು ಬಂದರೆ ಅದಕ್ಕೆ ಅದರಲ್ಲಿ ಜಡ್ಡುಗಟ್ಟಿರುವ ಭ್ರಷ್ಟಾಚಾರ, ಅವ್ಯವಹಾರ, ಅವ್ಯವಸ್ಥಿತ ಯೋಜನೆಗಳೇ ಕಾರಣ. ಅವುಗಳನ್ನು ತೊಡೆದು ಹಾಕಬೇಕೇ ಹೊರತು ಇಡೀ ವ್ಯವಸ್ಥೆಯನ್ನೇ ಖಾಸಗಿಯವರಿಗೆ ಒಪ್ಪಿಸಬಾರದು ಎಂದು ಆಗ್ರಹಿಸಿದರು.

ಮೈಸೂರಿನಿಂದ ಚಾಮರಾಜನಗರಕ್ಕೆ ಅತ್ಯಂತ ಕಡಿಮೆ ದರದಲ್ಲಿ ಸಂಪರ್ಕ ಕಲ್ಪಿಸುತ್ತಿದ್ದ ಪ್ಯಾಸೆಂಜರ್ ರೈಲನ್ನು ಕೋವಿಡ್‌ ನೆಪ ಒಡ್ಡಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನಿತ್ಯಕೂಲಿಯನ್ನರಸಿ ಮೈಸೂರಿಗೆ ಬರುತ್ತಿರುವ ಸಾವಿರಾರು ಮಂದಿ ಕಾರ್ಮಿಕರಿಗೆ ಇದರಿಂದ ತೀವ್ರ ತೊಂದರೆಯಾಗಿದೆ. ಕೂಡಲೇ ಈ ರೈಲನ್ನು ಮತ್ತೆ ಆರಂಭಿಸಬೇಕು ಎಂದು ಅವರು ಒತ್ತಾಯಿಸಿದರು.

ರೈಲ್ವೆ ಫ್ಲಾಟ್‌ಫಾರಂನ ದರವೂ ಈಗ ದುಬಾರಿಯಾಗಿದೆ. ಜನಸಾಮಾನ್ಯರ ಪಾಲಿಗೆ ಇದು ಭರಿಸಲಾಗದಷ್ಟು ಹೊರೆ ಎನಿಸಿದೆ. ಸರ್ಕಾರ ಕೂಡಲೇ ದರವನ್ನು ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಅಭಿಯಾನದ ಸದಸ್ಯರಾದ ಪಿ.ಎಸ್.ಸಂಧ್ಯಾ, ಜಿ.ಎಸ್.ಸೀಮಾ, ಹರೀಶ್, ಸುನಿಲ್, ಆಸಿಯಾ, ಕಲಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT