ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು | ಮದ್ಯದಂಗಡಿ ವಿರುದ್ಧ ಸ್ಥಳೀಯರ ಪ್ರತಿಭಟನೆ

ಊರಿನ ಹೆಬ್ಬಾಗಿಲಿನಲ್ಲಿ ಎಂಎಸ್ಐಎಲ್‌ ಅಂಗಡಿ ಬೇಡವೇ ಬೇಡ
Last Updated 17 ಜುಲೈ 2020, 5:20 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಸಾಹುಕಾರ್ ಚೆನ್ನಯ್ಯ ರಸ್ತೆಯ ತೊಣಚಿಕೊಪ್ಪಲಿನ ಹೆಬ್ಬಾಗಿಲಿನಲ್ಲಿ ಎಂಎಸ್‌ಐಎಲ್‌ ಮದ್ಯದಂಗಡಿ ತೆರೆಯುವ ಸಂಬಂಧ ಸ್ಥಳ ಪರಿಶೀಲನೆಗೆಂದು ಗುರುವಾರ ಬಂದಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳು ಸ್ಥಳೀಯರಿಂದ ಪ್ರತಿಭಟನೆ ಎದುರಿಸಬೇಕಾಯಿತು.

ಈ ವೇಳೆ ಮಾತನಾಡಿದ ವಾರ್ಡ್ ಸಂಖ್ಯೆ 42ರ ಪಾಲಿಕೆ ಸದಸ್ಯ ಗೋಪಿ, ‘ಇದು ತೊಣಚಿಕೊಪ್ಪಲು ಊರಿನ ಹೆಬ್ಬಾಗಿಲು. ಇಲ್ಲಿ ಮಂಗಳಕರವಾದದ್ದು ಇರಬೇಕೇ ಹೊರತು ಅಮಂಗಳಕಾರಿಯಾದದ್ದಲ್ಲ. ಮದ್ಯದಂಗಡಿ ತೆರೆಯುವ ಯೋಚನೆಯಿಂದ ಹಿಂದೆ ಸರಿಯಬೇಕು’ ಎಂದು ಆಗ್ರಹಿಸಿದರು.

ಸಮೀಪದಲ್ಲೇ ಶಾಲೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರವೂ ಇದೆ. ಕೇವಲ 20 ಮೀಟರ್ ಅಂತರದಲ್ಲಿ ಅರಳಿಮರ ಇದೆ. ಸುತ್ತಮುತ್ತ ಇರುವ 6 ಕಲ್ಯಾಣಮಂಟಪಗಳಲ್ಲಿ ಮದುವೆ ಮಾಡುವವರು ಇಲ್ಲಿಂದಲೇ ದೇವರ ನೀರನ್ನು ಕೊಂಡೊಯ್ಯುತ್ತಾರೆ. ಇಂತಹ ಪವಿತ್ರ ಸ್ಥಳದಲ್ಲಿಯೇ ಮದ್ಯದಂಗಡಿ ಬೇಕೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳೀಯರ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳು ಭರವಸೆ ನೀಡಿದರು.

ಪದವೀಧರರ ಸಹಕಾರ ಬ್ಯಾಂಕಿನ ಅಧ್ಯಕ್ಷ ಶ್ರೀನಿವಾಸ್, ಕರಿಯಪ್ಪ, ದೊಡ್ಡಬೀರಪ್ಪ, ಪಟ್ಟಪ್ಪ, ಚಿಕ್ಕಹುಚ್ಚಯ್ಯ ಸೇರಿದಂತೆ ಸುಮಾರು 80 ಮಂದಿ ಇದ್ದರು.

ಮುಂದುವರಿದ ಆಶಾ ಕಾರ್ಯಕರ್ತೆಯರ ಧರಣಿ

ಜಿಲ್ಲೆಯಲ್ಲಿ ಕಳೆದ 6 ದಿನಗಳಿಂದ ನಡೆಯುತ್ತಿರುವ ಆಶಾ ಕಾರ್ಯಕರ್ತರ ಮುಷ್ಕರ ಗುರುವಾರವೂ ಮುಂದುವರಿದಿದೆ.

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರದಲ್ಲಿ ನೂರಾರು ಕಾರ್ಯಕರ್ತೆಯರು ತಮ್ಮ ಕರ್ತವ್ಯಕ್ಕೆ ಗೈರಾದರು.

ಮಾಸಿಕ ಗೌರವಧನವನ್ನು ₹12 ಸಾವಿರಕ್ಕೆ ಹೆಚ್ಚಿಸಬೇಕು, ಕೋವಿಡ್‌ ವಿರುದ್ಧ ಅಗತ್ಯ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಬೇಕು, ಕೊರೊನಾ ಸೋಂಕಿಗೆ ಒಳಗಾದ ಕಾರ್ಯಕರ್ತೆಯರಿಗೆ ಉಚಿತ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದರು.

ವರುಣಾ, ಕೈಯಂಬಳ್ಳಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳ ಮುಂದೆ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿ, ಮನವಿ ಪತ್ರವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT