ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿಗಳ ಬಂಧನಕ್ಕೆ ಹೆಚ್ಚಿದ ಒತ್ತಡ: ಗೃಹಸಚಿವರ ಕಾರಿನ ಮೇಲೆ ಕೈಬಳೆ ಎಸೆತ!

ಕಮಿಷನರ್ ಕಚೇರಿಗೆ ನುಗ್ಗಲು ಯತ್ನ
Last Updated 27 ಆಗಸ್ಟ್ 2021, 22:30 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ ಆರೋಪಿಗಳ ಬಂಧನಕ್ಕೆ ಒತ್ತಡ ತೀವ್ರಗೊಂಡಿದ್ದು, ವಿವಿಧ ಸಂಘಟನೆಗಳ ನೂರಾರು ಕಾರ್ಯಕರ್ತರು ಶುಕ್ರವಾರ ಸರಣಿ ಪ್ರತಿಭಟನೆಗಳನ್ನು ನಡೆಸಿದರು.

ಗೃಹಸಚಿವರ ಕಾರಿಗೆ ಮುತ್ತಿಗೆ ಹಾಕಿದ ಯುವ ಕಾಂಗ್ರೆಸ್ ಮತ್ತು ಎನ್‌ಎಸ್‌ಯುಐ ಕಾರ್ಯಕರ್ತರು ಕೈಬಳೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು. ಅವರನ್ನು ಅಟ್ಟಾಡಿಸಿ ಹಿಡಿದ ಪೊಲೀಸರು ಎಳೆದು ತಂದು ವ್ಯಾನಿಗೆ ಹತ್ತಿಸಿದರು. ಸಂಜೆ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿ ಕಾರ್ಯಕರ್ತರು ಕಮಿಷನರ್ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ತಳ್ಳಾಟವೂ ನಡೆಯಿತು.

ಮಾನವ ಹಕ್ಕುಗಳ ಜಾಗೃತಿ ಸಮಿತಿ, ಆಮ್‌ ಆದ್ಮಿ ಪಾರ್ಟಿ, ಮೈಸೂರು ಕನ್ನಡ ವೇದಿಕೆ, ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ, ಕರ್ನಾಟಕ ಕ್ರಾಂತಿ ದಳ ಮತ್ತು ಕನ್ನಡ ಸೇನೆ ಸಂಘಟನೆಗಳ ಕಾರ್ಯಕರ್ತರು ವಿವಿಧೆಡೆ ಪ್ರತಿಭಟನೆಗಳನ್ನು ನಡೆಸಿದರು.

ಮಾನವ ಹಕ್ಕುಗಳ ಜಾಗೃತಿ ಸಮಿತಿಯ ಕಾರ್ಯಕರ್ತರು ಕರ್ನಾಟಕ ದಸರಾ ವಸ್ತು ಪ್ರದರ್ಶನ ಪ್ರಾಧಿಕಾರದ ಮೈದಾನದಿಂದ ಬೈಕ್‌ಗಳಲ್ಲಿ ಹೊರಟು, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು. ಆರೋಪಿಗಳನ್ನು ಬಂಧಿಸುವಂತೆ ಘೋಷಣೆಗಳನ್ನು ಕೂಗಿದರು.

ಸಮಿತಿಯ ಉಪಾಧ್ಯಕ್ಷರಾದ ಪಿ.ನರಸಿಂಹಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿ.ಎಂ.ರಾಕೇಶ್‌ಗೌಡ, ಪದಾಧಿಕಾರಿಗಳಾದ ವಿ.ಮೋಹನ್‌ಕುಮಾರ್, ಅರ್ಜುನ್, ಎಚ್.ಎಂ.ಸುರೇಶ್ ಇದ್ದರು.

ಮೈಸೂರು ಕನ್ನಡ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಚಾಮುಂಡಿಬೆಟ್ಟಕ್ಕೆ ಹೊಂದಿಕೊಂಡಂತೆ ಉಪ ಪೊಲೀಸ್ ಠಾಣೆಯೊಂದನ್ನು ತೆರೆಯಬೇಕು ಎಂದು ಒತ್ತಾಯಿಸಿದರು. ನಗರದ ರಿಂಗ್ ರಸ್ತೆಗಳಲ್ಲಿ ಮದ್ಯವ್ಯಸನಿಗಳ ಹಾವಳಿ ನಿಯಂತ್ರಿಸಬೇಕು ಎಂದು ಮನವಿ ಮಾಡಿದರು.

ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ಮುಖಂಡರಾದ ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್ ಬಾಬು, ಎಲ್‌ಐಸಿ ಸಿದ್ದಪ್ಪ, ಗೋಪಿ, ಬಾಬು, ಅರವಿಂದ್, ಮಾಲಿನಿ, ಕಾವೇರಮ್ಮ, ರಾಧಾಕೃಷ್ಣ ಇದ್ದರು.

ಕನ್ನಡ ಕ್ರಾಂತಿದಳ ಮತ್ತು ಕನ್ನಡ ಸೇನೆಯ ಕಾರ್ಯಕರ್ತರು ಅಗ್ರಹಾರ ವೃತ್ತದಲ್ಲಿ ಪ್ರತಿಭಟಿಸಿದರು. ಕ್ರಾಂತಿದಳದ ಅಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ, ಕನ್ನಡ ಸೇನೆ ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ, ಮುಖಂಡರಾದ ಲೋಹಿತ್ ಅರಸ್, ಹೋರಾಟಗಾರರ ಯಶೋಧಾ, ಶಶಿ, ಪಾರ್ವತಿ, ಕಾಳೇಸ್ವಾಮಿ, ಕಾರ್ತಿಕ್, ಗೋವಿಂದ ಇದ್ದರು.

ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಹೇಳಿಕೆ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಮುಖಂಡರಾದ ಮೊಹಮ್ಮದ್ ಇಸ್ಮಾಯಿಲ್, ತನ್ವೀರ್, ನವೀದ್, ಮಹಾದೇವಪ್ರಸಾದ್, ಆರ್.ಪ್ರಸಾದ್, ಕಿರಣ್, ಮಹಾದೇವಿ, ಇರ್ಫಾನ್, ಅರ್ಚನಾ, ಪಾರ್ಥಸಾರಥಿ, ಮಸೂದ್ ಇದ್ದರು.

ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘದ ಸದಸ್ಯರು ವಿ.ವಿ ಗ್ರಂಥಾಲಯ ಮುಂಭಾಗ ಪ್ರತಿಭಟಿಸಿದರು. ಅಧ್ಯಕ್ಷ ಮಹೇಶ್‌ ಸೋಸಲೆ, ಗೌರವ ಅಧ್ಯಕ್ಷ ಗುರುಮೂರ್ತಿ, ಪ್ರಧಾನ ಕಾರ್ಯದರ್ಶಿ ಸಂದೀಪ್‌ ಎಸ್. ರಾವಣೀಕರ್ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT