ಶುಕ್ರವಾರ, ಆಗಸ್ಟ್ 14, 2020
27 °C

ಕಾರ್ಮಿಕರ ನೆರವಿಗೆ ಧಾವಿಸಲು ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮುಚ್ಚಿರುವ ಕಾರ್ಖಾನೆಗಳನ್ನು ತೆರೆದು ಉತ್ಪಾದನೆ ಆರಂಭಿಸಬೇಕು, ಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಆಗ್ರಹಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.

ಹಲವು ಕಾರ್ಖಾನೆಗಳಲ್ಲಿ ಉತ್ಪಾದನಾ ಚಟುವಟಿಕೆಗಳು ನಡೆಯುತ್ತಿಲ್ಲ. ಇದರಿಂದ ಕಾರ್ಮಿಕರ ಬದುಕು ಶೋಚನೀಯವಾಗಿದೆ. ಹಲವು ಕಾರ್ಖಾನೆಗಳಲ್ಲಿ ಸಂಬಳವನ್ನೇ ನೀಡಿಲ್ಲ. ಹೀಗಾದರೆ, ಕಾರ್ಮಿಕರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.

ಕೋವಿಡ್‌ನ್ನು ನೆಪಮಾಡಿಕೊಂಡು ಮುಚ್ಚಿರುವ ಕಾರ್ಖಾನೆಗಳನ್ನು ಸರ್ಕಾರ ಈ ಕೂಡಲೇ ತೆರೆಸಿ ಕಾರ್ಮಿಕರಿಗೆ ಕೆಲಸ ಕೊಡಿಸಬೇಕು, ಬಾಕಿ ಉಳಿಸಿಕೊಂಡಿರುವ ಸಂಬಳವನ್ನು ಪಾವತಿ ಮಾಡಿಸಬೇಕು ಎಂದು ಅವರು ಆಗ್ರಹಿಸಿದರು.

‌ಆದಾಯ ರಹಿತ ಎಲ್ಲ ಕುಟುಂಬದವರಿಗೆ ₹ 7,500 ಹಣವನ್ನು ಪ್ರತಿ ತಿಂಗಳೂ ನೀಡಬೇಕು, ಲಾಕ್‌ಡೌನ್‌ ಅವಧಿಗೆ ಪೂರ್ಣ ವೇತನ ನೀಡಬೇಕು, ಕೆಲಸ ನಿರಾಕರಣೆ ಮಾಡಿರುವ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆದಾಯ ತೆರಿಗೆ ಕಟ್ಟದ ಪ್ರತಿ ಕುಟುಂಬಕ್ಕೂ ಕನಿಷ್ಠ 6 ತಿಂಗಳುಗಳ ಕಾಲವಾದರೂ ಮಾಸಿಕ ₹ 7,500 ಹಣ ನೀಡಬೇಕು, ನರೇಗಾ ಯೋಜನೆಯನ್ನು ಕನಿಷ್ಠ 200 ದಿನಗಳಿಗೆ ಹೆಚ್ಚಿಸಬೇಕು ಎಂದರು.

ಸರ್ಕಾರಿ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ‘ಡಿಎ’ ಕಡಿತ ರದ್ದುಪಡಿಸಬೇಕು, ಎಸ್‌ಪಿಎಸ್‌ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು. ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಎಐಟಿಯುಸಿಯ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ, ಎಐಯುಟಿಯುಸಿಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಸಿಐಟಿಯುನ ಪ್ರಧಾನ ಕಾರ್ಯದರ್ಶಿ ಜಿ.ಜಯರಾಂ, ಐಎನ್‌ಟಿಯುಸಿಯ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್ ಹಾಗೂ ಇತರ ಮುಖಂಡರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು