ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಕಾತಿ ಪತ್ರ ನೀಡದ ಕಂಪೆನಿ ವಿರುದ್ಧ ರೈತರಿಂದ ರಸ್ತೆ ತಡೆದು ಪ್ರತಿಭಟನೆ

ಹಿಮ್ಮಾವು: ಏಷಿಯನ್ ಪೇಂಟ್ ಕಾರ್ಖಾನೆ ಮುಂಭಾಗ ಉದ್ವಿಗ್ನ
Last Updated 18 ಮೇ 2019, 13:53 IST
ಅಕ್ಷರ ಗಾತ್ರ

ನಂಜನಗೂಡು: ತಾಲ್ಲೂಕಿನ ಹಿಮ್ಮಾವು ಕೈಗಾರಿಕಾ ಪ್ರದೇಶದಲ್ಲಿರುವ ಏಷಿಯನ್ ಪೇಂಟ್ಸ್ ಕಾರ್ಖಾನೆ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಶನಿವಾರ ನೇಮಕಾತಿ ಪತ್ರ ನೀಡದಿದ್ದರಿಂದ ಸಿಟ್ಟಿಗೆದ್ದ ರೈತರು ಅಡಕನಹಳ್ಳಿ ಹಾಗೂ ಹಿಮ್ಮಾವು ಕೈಗಾರಿಕಾ ಪ್ರದೇಶದ ರಸ್ತೆಗಳನ್ನು ಬಂದ್ ಮಾಡಿ ಕಾರ್ಖಾನೆ ಮುಂಭಾಗ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿದ್ಯಾಸಾಗರ್ ಮಾತನಾಡಿ, ‘ಕಾರ್ಖಾನೆಗೆ ಭೂಮಿ ನೀಡಿದ 95 ರೈತ ಕುಟುಂಬದವರಿಗೆ ಕಾಯಂ ಉದ್ಯೋಗ ನೀಡುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ಆಹೋರಾತ್ರಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ್ದ ವಿಭಾಗಾಧಿಕಾರಿ ಶಿವೇಗೌಡ ಆಡಳಿತ ಮಂಡಳಿಯೊಡನೆ ಮಾತನಾಡಿ ಶನಿವಾರ ಬೆಳಿಗ್ಗೆ 10 ಗಂಟೆಗೆ ನೇಮಕಾತಿ ಪತ್ರ ತಲುಪಿಸುವುದಾಗಿ ತಿಳಿಸಿದ್ದರು. ಸಂಜೆಯಾದರೂ ಉದ್ಯೋಗ ನೇಮಕಾತಿ ಪತ್ರ ನೀಡಿಲ್ಲ’ ಎಂದು ಹೇಳಿದರು.

‘ಕಾರ್ಖಾನೆಯ ಆಡಳಿತ ಮಂಡಳಿಯ ಪುರುಷೋತ್ತಮ್ ಹಾಗೂ ನರಸಿಂಹನ್ ಎಂಬ ಅಧಿಕಾರಿಗಳು ಜಿಲ್ಲಾಡಳಿತವನ್ನು ದಿಕ್ಕು ತಪ್ಪಿಸಿ, ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಕನ್ನಡಿಗರಿಗೆ ಉದ್ಯೋಗ ನೀಡದೆ ನಮ್ಮ ಸ್ವಾಭಿಮಾನ ಕೆಣಕುತ್ತಿದ್ದಾರೆ. ಕಾರ್ಖಾನೆ ಇಲ್ಲಿಂದ ಎತ್ತಂಗಡಿಯಾಗಬೇಕು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುತ್ತೇವೆ. ಕಾರ್ಖಾನೆಗೆ ಕೆಲಸಕ್ಕೆ ತೆರಳುವ ಕಾರ್ಮಿಕರನ್ನು, ವಾಹನಗಳನ್ನು ತಡೆಯುತ್ತೇವೆ. ನಮ್ಮ ಬೇಡಿಕೆ ಈಡೇರುವವರೆಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ಮುಂದುವರೆಸುತ್ತೇವೆ’ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಹಿಮ್ಮಾವು ರಘು, ಗ್ರಾ.ಪಂ.ಅಧ್ಯಕ್ಷ ಮಹದೇವ ಪ್ರಸಾದ್, ಮಂಜು ಕಿರಣ್, ಬಾಲು, ಪುರುಷೋತ್ತಮ್, ಮನು, ಪ್ರಕಾಶ್, ವೆಂಕಟೇಗೌಡ, ತಾಲ್ಲೂಕು ರೈತ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ, ಕಳಸಮ್ಮ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT