ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಷರ ದಾಸೋಹ ಕಾರ್ಮಿಕರಿಗೆ ಗೌರವಧನ ಪಾವತಿಸಲು ಆಗ್ರಹ

ಜಿಲ್ಲಾಧಿಕಾರಿ ಕಚೇರಿ ಮುಂದೆ ಮನವಿ ಪತ್ರ ಪ್ರದರ್ಶನ
Last Updated 26 ಮೇ 2020, 12:42 IST
ಅಕ್ಷರ ಗಾತ್ರ

ಮೈಸೂರು: ಶಾಲೆ ಪುನರ್‌ ಆರಂಭವಾಗುವವರೆಗೂ ಅಕ್ಷರ ದಾಸೋಹ ಕಾರ್ಮಿಕರಿಗೆ ಗೌರವಧನ ನೀಡಬೇಕು ಎಂದು ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಕಾರ್ಯಕರ್ತರು ಆಗ್ರಹಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಂಗಳವಾರ ಸೇರಿದ ಪ್ರತಿಭಟನಾಕಾರರು ಪರಸ್ಪರ ಅಂತರ ಕಾಯ್ದುಕೊಂಡು ಕೆಲಕಾಲ ಮನವಿ ಪತ್ರ ಪ್ರದರ್ಶಿಸಿ ಆಕ್ರೋಶ ಹೊರ ಹಾಕಿದರು.

‘ಲಾಕ್‌ಡೌನ್‌’ನಿಂದ ಅಕ್ಷರ ದಾಸೋಹ ಕಾರ್ಮಿಕರು ತೀವ್ರತರವಾದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಶಾಲೆಗಳಿಗೆ ರಜೆ ನೀಡಿದ್ದರೂ, ಮನೆಮನೆಗೆ ಆಹಾರ ಧಾನ್ಯ ತಲುಪಿಸುವ ಕೆಲಸವನ್ನು ಅವರಿಗೆ ವಹಿಸಲಾಗಿದೆ. ಏಪ್ರಿಲ್ 15ರವರೆಗೆ ಗೌರವಧನ ವಿತರಿಸಲು ಸರ್ಕಾರ ಹೇಳಿದೆಯಾದರೂ ಇದುವರೆಗು ಈ ಹಣ ತಲುಪಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಅಕ್ಷರ ದಾಸೋಹ ಕಾರ್ಮಿಕರು ಬೇಸಿಗೆ ರಜಾ ಅವಧಿಯಲ್ಲಿ ಕೂಲಿ ಕೆಲಸದಲ್ಲಿ ತೊಡಗಿಕೊಂಡು ಜೀವನ ಸಾಗಿಸುತ್ತಿದ್ದರು. ‘ಲಾಕ್‌ಡೌನ್‌’ನಿಂದ ಇವರಿಗೆ ಯಾವುದೇ ವಿಧವಾದ ಕೂಲಿಕೆಲಸವೂ ಸಿಕ್ಕಿಲ್ಲ. ಕುಟುಂಬ ನಿರ್ವಹಣೆ ಕಷ್ಟಕರವಾಗಿ ಪರಿಣಮಿಸಿದೆ ಎಂದು ಅವರು ಅಳಲು ತೋಡಿಕೊಂಡರು.

ಶಾಲೆಗಳು ಮತ್ತೆ ಆರಂಭವಾಗುವವರೆಗೂ ಗೌರವಧನ ನೀಡಬೇಕು, ವಿಶೇಷ ಅನುದಾನ ಬಿಡುಗಡೆ ಮಾಡಬೇಕು, ಶಾಲೆಗಳಲ್ಲಿ ಉಳಿದ ಆಹಾರ, ದಿನಸಿಗಳನ್ನು ಕಾರ್ಮಿಕರಿಗೆ ಹಂಚಬೇಕು, ಅಗತ್ಯ ವಸ್ತುಗಳ ಕಿಟ್‌ ವಿತರಿಸಬೇಕು ಎಂದು ಅವರು ಮನವಿಪತ್ರದಲ್ಲಿ ಕೋರಿದ್ದಾರೆ.

ಸಂಘಟನೆಯ ಜಿಲ್ಲಾ ಸಂಚಾಲಕ ಮುದ್ದುಕೃಷ್ಣ ಹಾಗೂ ಇತರರು ಇದ್ದರು.

ಆಗ್ರಹ ದಿನಕ್ಕೆ ಭರಪೂರ ಬೆಂಬಲ
ಕೆಲಸ ಇಲ್ಲದೇ ಪರದಾಡುತ್ತಿರುವ ಕಾರ್ಮಿಕರ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ಹೊರಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಓ) ಕರೆ ನೀಡಿದ್ದ ‘ಅಖಿಲ ಕರ್ನಾಟಕ ಆಗ್ರಹ ದಿನ’ಕ್ಕೆ ಮಂಗಳವಾರ ನಗರದಲ್ಲಿ ಭರಪೂರ ಬೆಂಬಲ ವ್ಯಕ್ತವಾಯಿತು.

‘ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಶುಲ್ಕವನ್ನು ಸರ್ಕಾರವೇ ಭರಿಸಬೇಕು, ವಿಶ್ವವಿದ್ಯಾಲಯಗಳ ಪರೀಕ್ಷಾ ಶುಲ್ಕ ರದ್ದುಗೊಳಿಸಬೇಕು. ಈಗಾಗಲೇ ಶುಲ್ಕ ಪಡೆದಿದ್ದಲ್ಲಿ, ಅದನ್ನು ವಾಪಸ್ ಮಾಡಬೇಕು. ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು. ಎಲ್ಲಾ ವಿದ್ಯಾರ್ಥಿಗಳ ಶಿಷ್ಯ ವೇತನವನ್ನು (ಸ್ಕಾಲರ್‌ಶಿಪ್) ಹೆಚ್ಚಿಸಿ, ಕಡ್ಡಾಯವಾಗಿ ನೀಡಬೇಕು’ ಎಂದು ಕಾರ್ಯಕರ್ತರು ಮನವಿ ಮಾಡಿದರು.

ಹಾಸ್ಟೆಲ್‌ಗಳ ಅನುದಾನ ಹೆಚ್ಚಿಸಿ ಮೂಲಸೌಕರ್ಯಗಳನ್ನು ಶೈಕ್ಷಣಿಕ ವರ್ಷದ ಆರಂಭದಲ್ಲೇ ಒದಗಿಸಬೇಕು. ಆನ್‌ಲೈನ್‌ ತರಗತಿಗಳ ಆಧಾರದ ಮೇಲೆ ಪರೀಕ್ಷೆಗಳನ್ನು ನಡೆಸಬಾರದು. ಪರೀಕ್ಷೆಯ ರೂಪರೇಷೆಯನ್ನು ಶಿಕ್ಷಣ ತಜ್ಞರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಜೊತೆಯಲ್ಲಿ ಚರ್ಚಿಸಿ ಪ್ರಜಾತಾಂತ್ರಿಕವಾಗಿ ರೂಪಿಸಬೇಕು. ಕ್ವಾರೆಂಟೈನ್ ಕೇಂದ್ರಗಳಾಗಿ ಬಳಸಿದ ಶಾಲೆ, ಕಾಲೇಜು ಹಾಗೂ ಹಾಸ್ಟೆಲ್ ಕಟ್ಟಡಗಳನ್ನು ಸಂಪೂರ್ಣವಾಗಿ ಶುದ್ಧೀಕರಿಸಿ ಸ್ಯಾನಿಟೈಸ್ ಮಾಡಿದ ನಂತರವೇ ವಿದ್ಯಾರ್ಥಿಗಳಿಗೆ ಅದನ್ನು ತೆರೆಯಬೇಕು ಎಂದು ಒತ್ತಾಯಿಸಲಾಯಿತು.

ಇನ್ನು ಮುಂತಾದ ಬೇಡಿಕೆಯ ಫಲಕಗಳನ್ನು ಹಿಡಿದುಕೊಂಡು, ಆನ್‌ಲೈನ್ ಮೂಲಕ, ತಮ್ಮ ಭಾವಚಿತ್ರವನ್ನು ಮತ್ತು ವಿಡಿಯೊಗಳನ್ನು ವಾಟ್ಸ್‌ಆ್ಯಪ್‌, ಫೇಸ್‍ಬುಕ್‌ನಲ್ಲಿ ಹಂಚಿಕೊಳ್ಳುವ ಮೂಲಕ ಈ ಆಗ್ರಹ ದಿನದಲ್ಲಿ ನೂರಾರು ಮಂದಿ ಪಾಲ್ಗೊಂಡರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲು ಒತ್ತಾಯ

ಕೇಂದ್ರ ಸರ್ಕಾರದ ಶಿಶು ಅಭಿವೃದ್ಧಿ ಯೋಜನೆಯಡಿಯಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮನವಿ ಪತ್ರ ಪ್ರದರ್ಶಿಸಿದರು.

ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕಾರ್ಯಕ್ರಮಗಳಾದ ಚುಚ್ಚುಮದ್ದು, ಕುಟುಂಬ ಕಲ್ಯಾಣ ಯೋಜನೆ, ಮಾತೃವಂದನ, ಮಾತೃಶ್ರೀ ಸೇರಿದಂತೆ ಹಲವು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಾರೆ. ಕೊರೊನಾ ವಿರುದ್ಧ ಇವರು ಅವಿರತವಾಗಿ ಶ್ರಮಿಸಿದ್ದಾರೆ. ಹೀಗಾಗಿ, ಇವರಿಗೆ ಸರ್ಕಾರ ₹ 3 ಸಾವಿರ ಪ್ರೋತ್ಸಾಹ ಧನ ವಿತರಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

ಸಂಘಟನೆಯ ರಾಜ್ಯ ಮಂಡಳಿ ಸದಸ್ಯ ಡಿ.ಜಗನ್ನಾಥ್ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT