ಕನ್ನಡ ಭಾಷೆ ಉಳಿವಿಗೆ ಒತ್ತಾಯಿಸಿ ಅಧ್ಯಾಪಕರ ಪ್ರತಿಭಟನೆ

7
ಹಿರಿಯ ಸಾಹಿತಿಗಳಾದ ಸಿಪಿಕೆ, ಜಿ.ಎಚ್.ನಾಯಕ, ಹೋರಾಟಗಾರ ಪ‍.ಮಲ್ಲೇಶ್ ಭಾಗಿ

ಕನ್ನಡ ಭಾಷೆ ಉಳಿವಿಗೆ ಒತ್ತಾಯಿಸಿ ಅಧ್ಯಾಪಕರ ಪ್ರತಿಭಟನೆ

Published:
Updated:
ಮೈಸೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಪದವಿ ಹಂತದಲ್ಲಿ ಕನ್ನಡ ಭಾಷೆಯ ಉಳಿವಿಗೆ ಒತ್ತಾಯಿಸಿ ಅಧ್ಯಾಪಕರು, ಸಾಹಿತಿಗಳು ಸೋಮವಾರ ಕ್ರಾಫರ್ಡ್‌ ಹಾಲ್‌ ಎದುರು ಪ್ರತಿಭಟನೆ ನಡೆಸಿದರು

ಮೈಸೂರು: ಭಾಷಾ ವಿಷಯವಾಗಿ ಕನ್ನಡ ಪದವಿ ಹಂತದಲ್ಲಿ ಉಳಿಯಬೇಕು ಎಂದು ಒತ್ತಾಯಿಸಿ ಮೈಸೂರು ವಿಶ್ವವಿದ್ಯಾನಿಲಯದ ಪದವಿ ಕನ್ನಡ ಅಧ್ಯಾಪಕರ ಸಂಘದ ನೇತೃತ್ವದಲ್ಲಿ ಸಾಹಿತಿಗಳು, ಪ್ರಗತಿಪರ ಚಿಂತಕರು, ಕನ್ನಡ ಅಧ್ಯಾಪಕರು ಸೋಮವಾರ ಕ್ರಾಫರ್ಡ್‌ ಹಾಲ್‌ ಮುಂದೆ ಪ್ರತಿಭಟನೆ ನಡೆಸಿದರು.

ಪದವಿ ಹಂತದಲ್ಲಿ 4 ಸೆಮಿಸ್ಟರ್‌ಗಳಲ್ಲಿ ಕನ್ನಡ ಭಾಷಾ ವಿಷಯ ಅಧ್ಯಯನ ಮಾಡಬೇಕಿತ್ತು. ಆದರೆ, ಕೆಲವು ಸ್ವಾಯತ್ತ ಕಾಲೇಜುಗಳು ಇದನ್ನು 2 ಸೆಮಿಸ್ಟರ್‌ಗಳಿಗೆ ಇಳಿಸಿವೆ. ಮುಂದೊಂದು ದಿನ ಕನ್ನಡ ವಿಷಯ ಪದವಿ ಹಂತದಲ್ಲಿ ಬೇಡವೇ ಬೇಡ ಎಂಬ ನಿರ್ಧಾರಕ್ಕೂ ಬರಬಹುದು. ಹಾಗಾಗಿ, ಈ ಹಿಂದೆ ಇದ್ದಂತೆ ನಾಲ್ಕು ಸೆಮಿಸ್ಟರ್‌ಗಳಲ್ಲಿ ಕನ್ನಡವನ್ನು ಭಾಷಾ ವಿಷಯವಾಗಿ ಅಧ್ಯಯನ ಮಾಡಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಪ್ರಸಕ್ತ ವರ್ಷದಿಂದ ಜಾರಿಗೆ ತರುತ್ತಿರುವ ಆಯ್ಕೆ ಆಧಾರಿತ ಗುಣಾಂಕ ಪದ್ಧತಿಯಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಲಾಗಿದೆ. ಈ ಪದ್ಧತಿಯಲ್ಲಿ ಕನ್ನಡಕ್ಕೆ ಪ್ರಾಧಾನ್ಯತೆ ನೀಡಬೇಕು ಹಾಗೂ ಹೊಸ ಪದ್ಧತಿಯಲ್ಲಿನ ಲೋಪದೋಷಗಳನ್ನು ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕನ್ನಡಪರ ಹೋರಾಟಗಾರ ಪ.ಮಲ್ಲೇಶ್, ‘ಕನ್ನಡದ ಉಳಿವಿಗೆ ಹೋರಾಟ ಇದು ಮೊದಲು ಅಲ್ಲ, ಕೊನೆಯೂ ಅಲ್ಲ. ಆದರೆ, ಕನ್ನಡದ ಉಳಿವಿಗೆ ಅಧ್ಯಾಪಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಒಳ್ಳೆಯ ಬೆಳವಣಿಗೆ’ ಎಂದರು‌.‌

ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಮೈಸೂರು ವಿ.ವಿ ಪ್ರಭಾರಿ ಕುಲಪತಿ ಉಮೇಶ್, ‘ಎಲ್ಲ ಬೇಡಿಕೆಗಳು ನ್ಯಾಯಸಮ್ಮತವಾಗಿವೆ. ಪ‍ದವಿ ಕಾಲೇಜುಗಳಲ್ಲಿ 4 ಸೆಮಿಸ್ಟರ್‌ಗಳಲ್ಲಿ ಕನ್ನಡ ವಿಷಯವನ್ನು ಬೋಧಿಸುವುದನ್ನು ಕಡ್ಡಾಯಗೊಳಿಸಲಾಗುವುದು’ ಎಂದು ಭರವಸೆ ನೀಡಿದರು.

ಹಿರಿಯ ಸಾಹಿತಿಗಳಾದ ಸಿ.ಪಿ.ಕೃಷ್ಣಕುಮಾರ್, ಹಿ.ಶಿ.ರಾಮಚಂದ್ರೇಗೌಡ, ಜಿ.ಎಚ್.ನಾಯಕ, ಚ.ಸರ್ವಮಂಗಳಾ, ಮಳಲಿ ವಸಂತಕುಮಾರ್, ಪ್ರೊ.ಕೃಷ್ಣೇಗೌಡ, ಸಂಘದ ಕಾರ್ಯದರ್ಶಿ ಕೃ.ಪ.ಗಣೇಶ್ ಸೇರಿದಂತೆ ಮೈಸೂರು ವಿ.ವಿ ವ್ಯಾಪ್ತಿಯ ಕನ್ನಡ ಅಧ್ಯಾಪಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !