ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಅವಳಿ ಪ್ರತಿಭಟನೆ

ಸೌಲಭ್ಯಕ್ಕೆ ಆಗ್ರಹಿಸಿದ ಗೃಹಕಾರ್ಮಿಕರು, ಕನ್ನಡ ನಾಮಫಲಕಕ್ಕೆ ಒತ್ತಾಯಿಸಿದ ಕಾರ್ಯಕರ್ತರು
Last Updated 20 ಜೂನ್ 2019, 4:25 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಬುಧವಾರ ಎರಡು ಪ್ರತಿಭಟನೆಗಳು ನಡೆದವು.

ಸೌಲಭ್ಯಗಳನ್ನು ಆಗ್ರಹಿಸಿ ಗೃಹಕಾರ್ಮಿಕರು ಜಿಲ್ಲಾಧಿಕಾರಿ ಕಚೇರಿ ಬಳಿ ಆಕ್ರೋಶ ವ್ಯಕ್ತಪಡಿಸಿದರೆ, ಖಾಸಗಿ ಶಾಲೆಗಳ ನಾಮಫಲಕ ಕನ್ನಡದಲ್ಲೇ ಇರಬೇಕು ಎಂದು ಆಗ್ರಹಿಸಿ ಕನ್ನಡಪರ ಹೋರಾಟಗಾರರು ಜಿಲ್ಲಾ ಪಂಚಾಯಿತಿ ಮುಂದೆ ಪ್ರತಿಭಟನೆ ನಡೆಸಿದರು.

ಕೊನ್‌ಫೆಡರೇಷನ್ ಆಫ್ ಟ್ರೇಡ್ ಯೂನಿಯನ್ಸ್ ಆಫ್ ಇಂಡಿಯಾ (ಸಿಎಫ್‌ಟಿಯುಐ) ನೇತೃತ್ವದಲ್ಲಿ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ತಮಟೆ, ತಾಳ, ಮದ್ದಲೆಗಳನ್ನು ಬಾರಿಸುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.

ಗೃಹಕಾರ್ಮಿಕರಿಗೆ ಮುಖ್ಯವಾಗಿ ಸ್ಮಾರ್ಟ್‌ಕಾರ್ಡ್‌ಗಳನ್ನು ವಿತರಿಸಬೇಕು. ಸಾಮಾಜಿಕ ಭದ್ರತೆಯನ್ನು ಅವರಿಗೆ ಒದಗಿಸಬೇಕು ಎಂದು ಅವರು ಘೋಷಣೆಗಳನ್ನು ಕೂಗಿದರು.

ಗೃಹ ಕಾರ್ಮಿಕರಿಗೆ ಈ ವರ್ಷದಿಂದಲೇ ಕನಿಷ್ಠ ವೇತನ ನಿಗದಿ ಮಾಡಬೇಕು. ಎಲ್ಲ ಗೃಹ ಕಾರ್ಮಿಕರಿಗೆ ವಸತಿ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಇಂದ್ರಾ, ಮಂಜುಳಾ, ಲಕ್ಷ್ಮೀ, ನಾಗಮ್ಮ, ಗಂಗಾ, ಶಾರದಮ್ಮ, ಶೋಭಾ, ನಿಶಾ ಇತರರು ಹಾಜರಿದ್ದರು.

ಕನ್ನಡ ನಾಮಫಲಕಕ್ಕೆ ಒತ್ತಾಯ

ನಗರದ ಎಲ್ಲ ಖಾಸಗಿ ಶಾಲಾ ಕಾಲೇಜಿನ ನಾಮಫಲಕಗಳು ಕನ್ನಡಲ್ಲೇ ಇರುವಂತೆ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಸೇನಾಪಡೆ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗ ಬುಧವಾರ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ದುರಂತ ಎಂದರೆ ನಗರದ ಬಹುತೇಕ ಖಾಸಗಿ ಶಾಲೆ ಮತ್ತು ಕಾಲೇಜುಗಳ ನಾಮಫಲಕಗಳು ಇಂಗ್ಲಿಷ್‌ ಭಾಷೆಯಲ್ಲೇ ಇವೆ. ಇದು ಕನ್ನಡ ಭಾಷೆಗೆ ಮಾಡಿದ ದೊಡ್ಡ ಅವಮಾನ ಎಂದು ಕಾರ್ಯಕರ್ತರು ಕಿಡಿಕಾರಿದರು.

‘ನಾಮಫಲ ಕನ್ನಡದಲ್ಲಿ ಇದ್ದರೆ ಶಾಂತಿ, ಇಲ್ಲದಿದ್ದರೆ ಕ್ರಾಂತಿ’ ಎಂಬ ಘೋಷಣೆಗಳನ್ನು ಕೂಗುತ್ತಾ ಮುಂದಿನ ದಿನಗಳಲ್ಲಿ ಕನ್ನಡ ನಾಮಫಲಕ ಅಭಿಯಾನ ಕೈಗೊಳ್ಳಲಾಗುವುದು’ ಎಂದು ಅವರು ಇದೇ ವೇಳೆ ಎಚ್ಚರಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳು ಬಳಸುವುದು ಕನ್ನಡದ ನೆಲ ಮತ್ತು ಜಲವನ್ನು. ಆದರೆ, ಇಲ್ಲಿಯ ಭಾಷೆಯನ್ನೇ ಅವು ಮರೆತಿವೆ ಎಂದು ಅವರು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ಸೇನಾ ಪಡೆಯ ಜಿಲ್ಲಾ ಘಟಕದ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪದಾಧಿಕಾರಿಗಳಾದ ಪಿ.ಪ್ರಜೀಶ್, ಆರ್.ಶಾಂತಮೂರ್ತಿ, ಶಾಂತರಾಜೇ ಅರಸ್, ದರ್ಶನ್ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT