ಭಾನುವಾರ, ನವೆಂಬರ್ 29, 2020
25 °C
ಮೈಸೂರಿನಲ್ಲಿ ಸರಣಿ ಪ್ರತಿಭಟನೆ: ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನಕಾರರ ಹಕ್ಕೊತ್ತಾಯ

ಭೂಮಿ ಕೊಟ್ಟ ರೈತರಿಗೆ ಉದ್ಯೋಗ ಕೊಡಿ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಏಷ್ಯನ್ ಪೇಂಟ್ಸ್‌ ಕಾರ್ಖಾನೆಗೆ ಭೂಮಿ ನೀಡಿದ ರೈತ ಕುಟುಂಬಗಳಿಗೆ ಕಾರ್ಖಾನೆಯಲ್ಲಿ ಉದ್ಯೋಗ ನೀಡುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮಂಗಳವಾರ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿ ತಮ್ಮೊಳಗಿನ ಆಕ್ರೋಶ ವ್ಯಕ್ತಪಡಿಸಿದರು. 

ಏಷ್ಯನ್ ಪೇಂಟ್ಸ್‌ ಕಾರ್ಖಾನೆಯವರು ಇಮ್ಮಾವು ಗ್ರಾಮದ ರೈತರಿಗೆ ಉದ್ಯೋಗದ ಭರವಸೆ ನೀಡಿ, ಅತಿ ಕಡಿಮೆ ದರದಲ್ಲಿ ಭೂಮಿ ಪಡೆದುಕೊಂಡಿದ್ದು, ಇದೀಗ ಸ್ಥಳೀಯರಿಗೆ ಉದ್ಯೋಗವನ್ನೇ ನೀಡಿಲ್ಲ. ಬೇರೆ ಕಡೆಯವರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದಾರೆ ಎಂದು ದೂರಿದರು.

ಇದೇ ಸಂದರ್ಭ ಪ್ರವಾಹ, ಬೆಂಬಲ ಬೆಲೆ ಕುರಿತಂತೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿರುವುದನ್ನು ಖಂಡಿಸಿದರು.

ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿ ಉಂಟಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಫಸಲು, ಆಸ್ತಿ, ಮನೆ–ಮಠಗಳನ್ನು ಅಲ್ಲಿನ ರೈತರು ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿನ ಬರ ಮತ್ತು ಅತಿವೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ–ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ಧೋರಣೆ ತಾಳಿವೆ. ಫಸಲು ನಷ್ಟ ಹೊಂದಿದ ರೈತರಿಗೆ ಸಂಪೂರ್ಣ ನಷ್ಟ ಪರಿಹಾರವನ್ನು ವೈಜ್ಞಾನಿಕವಾಗಿ ತುಂಬಿಕೊಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ರಘು ಹಿಮ್ಮಾವು, ಕಿರಣ್, ಪಿ.ಮರಂಕಯ್ಯ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಘೋಷಣೆಯಾಗದ ಬೋನಸ್‌: ಪ್ರತಿಭಟನೆ

ಉತ್ಪಾದನಾ ಆಧಾರಿತ ಬೋನಸ್ ಘೋಷಣೆ ಮಾಡದಿರುವುದನ್ನು ಖಂಡಿಸಿ, ಸೌತ್ ವೆಸ್ಟರ್ನ್ ರೈಲ್ವೆ ಮಜ್ದೂರ್ ಯೂನಿಯನ್ ವತಿಯಿಂದ ಪ್ರತಿಭಟಿಸಲಾಯಿತು.

ನಗರದ ರೈಲ್ವೆ ನಿಲ್ದಾಣದ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿ, ಬೋನಸ್ ನೀಡದಿರುವುದನ್ನು ಖಂಡಿಸಿದರು.

ಮೈಸೂರು ವಿಭಾಗವು ಬೋನಸ್ ದಿನ ಎಂಬ ಪ್ರತಿಭಟನ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿಯವರೆಗೂ ಉತ್ಪಾದನಾ ಆಧಾರಿತ ಬೋನಸ್ ಘೋಷಣೆ ಮಾಡಿಲ್ಲ. ರೈಲ್ವೆ ನೌಕರರಿಗೆ ಬೋನಸ್ ಇತರ ಭತ್ಯೆಗಳಂತಲ್ಲ. ಅದಕ್ಕೆ ಅದರದ್ದೇ ಆದ ಭಾವನಾತ್ಮಕ ಸಂಬಂಧ ಇದೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಇಲಾಖೆಯ ಈ ನಿರ್ಧಾರ ಖಂಡಿಸಿ ಮೈಸೂರು ವಿಭಾಗದ ಎಲ್ಲಾ ನಿಲ್ದಾಣಗಳು, ಕಚೇರಿಗಳು ಹಾಗೂ ಕೆಲಸದ ಸ್ಥಳಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ತಕ್ಷಣವೇ ಬೋನಸ್ ಘೋಷಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.

ಸಂಘಟನೆಯ ವಿಭಾಗೀಯ ಕಾರ್ಯದರ್ಶಿ ಪಿ.ಶಿವಪ್ರಕಾಶ್, ಎಸ್.ಸೋಮಶೇಖರ್, ಎ.ಎಂ.ಡಿಕ್ರೂಜ್, ಆರ್.ಆರ್.ನಾಯ್ಕ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸ್ಮಶಾನ ಅಭಿವೃದ್ಧಿಗೊಳಿಸಿ

ಪೌರ ಕಾರ್ಮಿಕರ ಸ್ಮಶಾನದ ಸ್ವಚ್ಛತೆಗೆ ಕ್ರಮ ವಹಿಸುವಂತೆ ಹಾಗೂ ಸ್ಮಶಾನದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಡಾ.ಬಿ.ಆರ್.ಅಂಬೇಡ್ಕರ್ ಆದಿ ದ್ರಾವಿಡ ಯುವಕರ ಅಭಿವೃದ್ಧಿ ಮಹಾಸಂಘ, ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಮಹಾನಗರ ಪಾಲಿಕೆ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಟರ್ಲಿಂಗ್ ಟಾಕೀಸ್ ರಸ್ತೆಯಲ್ಲಿರುವ ಆದಿದ್ರಾವಿಡ ಪೌರ ಕಾರ್ಮಿಕರ ಸ್ಮಶಾನದ ಒಳ ಆವರಣದಲ್ಲಿ ಹಲ ವರ್ಷಗಳಿಂದ ಸ್ವಚ್ಛತೆಯಿಲ್ಲದೆ, ಮೂಲ ಸೌಕರ್ಯಗಳಿಲ್ಲದೆ ತೊಂದರೆ ಆಗುತ್ತಿದೆ. ಈ ಬಗ್ಗೆ ಮನವಿ ಸಲ್ಲಿಸಿದ್ದರೂ ಪಾಲಿಕೆ ನಿರ್ಲಕ್ಷ್ಯ ವಹಿಸಿದೆ ಎಂದು ಹೋರಾಟ ನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಅಶೋಕಪುರಂನ ಅಂಬೇಡ್ಕರ್ ಕಾಲೊನಿ, ರಾಜೀವ್ ಗಾಂಧಿ ಕಾಲೊನಿ, ವಿಶ್ವೇಶ್ವರ ನಗರದ ಡಿ.ದೇವರಾಜ ಅರಸು ಕಾಲೊನಿ, ಧರ್ಮಸಿಂಗ್ ಕಾಲೊನಿ, ವಿದ್ಯಾರಣ್ಯಪುರಂನ ಸೂಯೇಜ್ ಫಾರಂ ಬಳಿಯ ಸುಭಾಷ್ ಕಾಲೊನಿ, ಸಾರ್ವಜನಿಕ ಹಾಸ್ಟೆಲ್ ಹಿಂಭಾಗದ ರಸ್ತೆಯ ಪಿ.ಕೆ.ಕಾಲೊನಿ, ಜೆ.ಪಿ.ನಗರದ ಆದಿದ್ರಾವಿಡ ಕಾಲೊನಿಯ ಜನರು ಪ್ರತಿಭಟನೆಯಲ್ಲಿ ಭಾಗಿಯಾಗಿ ತಮ್ಮ ಬೇಡಿಕೆಗಳ ಹಕ್ಕೊತ್ತಾಯ ಮಂಡಿಸಿದರು.

ಟೂಲ್‌ ಕಿಟ್‌ ವಿತರಿಸಿ

ಯಾವುದೇ ತಾರತಮ್ಯವಿಲ್ಲದೆ ಎಸ್‌ಸಿ/ಎಸ್‌ಟಿ ವರ್ಗದ ಐಟಿಐ ತರಬೇತುದಾರರಿಗೆ ತಕ್ಷಣವೇ ಲ್ಯಾಪ್ ಟಾಪ್ ಹಾಗೂ ಟೂಲ್ ಕಿಟ್ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ವಿತರಿಸುವಂತೆ ಒತ್ತಾಯಿಸಿ ಎಐಡಿವೈಒ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.

ಸರ್ಕಾರದಿಂದ ಪ್ರತಿ ವರ್ಷವೂ ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ತರಬೇತುದಾರರಿಗೆ ಅವರ ಕೌಶಲ ತರಬೇತಿಗೆ ಸಹಾಯಕವಾಗುವಂತೆ ಟೂಲ್ ಕಿಟ್, ಸಮವಸ್ತ್ರ ಮತ್ತು ಲ್ಯಾಪ್‍ಟಾಪ್ ನೀಡಲಾಗುತ್ತಿತ್ತು.

ಆದರೆ 2018ರಿಂದ 2020ನೇ ಸಾಲಿನಲ್ಲಿ ತರಬೇತಿ ಪಡೆಯುತ್ತಿರುವವರಿಗೆ, ದ್ವಿತೀಯ ವರ್ಷದವರಿಗೆ ಪರೀಕ್ಷೆ ಸಮಯ ಹತ್ತಿರ ಬಂದರೂ ತರಬೇತುದಾರರಿಗೆ ನೀಡಬೇಕಿದ್ದ ಯಾವುದೇ ಸಾಮಗ್ರಿಗಳನ್ನು ನೀಡದೇ ವಂಚಿಸಲಾಗಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುನಿಲ್.ಟಿ.ಆರ್, ಐಟಿಐ ವಿದ್ಯಾರ್ಥಿಗಳಾದ ಶರತ್, ವಿನಯ್, ಚಂದು, ಅಲೋಕ್‌, ಸಂಜಯ್, ಕಾರ್ತಿಕ್, ಗೌತಮ್, ಮಹದೇವಸ್ವಾಮಿ, ಕಿರಣ್, ಪ್ರವೀಣ್, ಮೋಹನ್ ಕುಮಾರ್, ಪ್ರಜ್ವಲ್, ಸುಂದರ್, ರಾಜೇಶ್, ಹರೀಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಜಿಲ್ಲಾಡಳಿತದ ವಿರುದ್ಧ ಆಕ್ರೋಶ

ಮೈಸೂರು ಅರಮನೆ ಮಂಡಳಿಯ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಮೇಲೆ ಕ್ರಮ ಕೈಗೊಳ್ಳದೇ, ಮಾತಿಗೆ ತಪ್ಪಿದ ಜಿಲ್ಲಾಡಳಿತದ ವಿರುದ್ಧ ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಯುತ್ತಿರುವ ಅನಿರ್ದಿಷ್ಟ ಅವಧಿಯ ಪ್ರತಿಭಟನೆ ಮಂಗಳವಾರ ಎರಡನೇ ದಿನ ಪೂರೈಸಿತು.

ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಜಿಲ್ಲಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಮೈಸೂರು ಅರಮನೆ ಮಂಡಳಿಯಲ್ಲಿ 10 ವರ್ಷಗಳಿಂದ ಉಪನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಟಿ.ಎಸ್.ಸುಬ್ರಹ್ಮಣ್ಯ, ತಮ್ಮ ಸೇವಾವಧಿಯಲ್ಲಿ ನಡೆಸಿರುವ ಅಕ್ರಮ ಅವ್ಯವಹಾರಗಳ ದಾಖಲಾತಿಗಳ ಸಾಕ್ಷಿ ನಾಶದ ಬಗ್ಗೆ ತನಿಖೆ ನಡೆಸಿ, ಸೇವೆಯಿಂದ ವಜಾಗೊಳಿಸುವಂತೆ ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ದಾಖಲೆಗಳ ಸಮೇತ ಒತ್ತಾಯ ಪತ್ರ ಸಲ್ಲಿಸಲಾಗಿತ್ತು. ಆದರೆ, ಸರ್ಕಾರ ಯಾವುದೇ ಕ್ರಮ ಜರುಗಿಸಲು ಮುಂದಾಗದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.

ಹಿಂದೆ ನೀಡಿದ್ದ ದೂರು ಜಿಲ್ಲಾಡಳಿತದ ಗಮನಕ್ಕೆ ಬಂದಿರುವುದರಿಂದ ಈಗಾಗಲೇ ಮೈಸೂರು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದರು.

ಜಿಲ್ಲಾಡಳಿತದ ಮಾತಿಗೆ ಗೌರವ ಕೊಟ್ಟು ತಾತ್ಕಾಲಿಕವಾಗಿ ಪ್ರತಿಭಟನೆ ವಾಪಸ್ ಪಡೆದಿದ್ದೆವು. ಆದರೆ ಜಿಲ್ಲಾಡಳಿತ ಇದುವರೆಗೂ ತನಿಖೆಗೆ ಆದೇಶಿಸಿಲ್ಲ. ಟಿ.ಎಸ್.ಸುಬ್ರಹ್ಮಣ್ಯರನ್ನು ರಕ್ಷಿಸುವ ಸಲುವಾಗಿಯೇ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಹೋರಾಟಗಾರರು ಕಿಡಿಕಾರಿದರು.

ಚೋರನಹಳ್ಳಿ ಶಿವಣ್ಣ, ಮಹದೇವಸ್ವಾಮಿ, ಸಂತೋಷ್ ತಳೂರು, ದೇವರಾಜು ಬಿಳಿಕೆರೆ, ವರುಣ ಮಹೇಶ್, ಪಿ.ಮಹದೇವ್, ಶಂಕರ್ ಬೊಮ್ಮನಹಳ್ಳಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು