ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕಾರಣಿಯ ಕೆಲಸ ಜನರೇ ಗುರುತಿಸಲಿ: ಸಂಸದ ವಿ.ಶ್ರೀನಿವಾಸಪ್ರಸಾದ್‌

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್‌ ಹೇಳಿಕೆ
Last Updated 27 ಆಗಸ್ಟ್ 2021, 11:33 IST
ಅಕ್ಷರ ಗಾತ್ರ

ಮೈಸೂರು: ಸಂಸದೀಯ ಪ್ರಜಾಪ್ರಭುತ್ವದಲ್ಲಿ ಸ್ಥಿರ ಸರ್ಕಾರ ಅಗತ್ಯ. ಇಲ್ಲದೆ ಇದ್ದರೆ ಅಭಿವೃದ್ಧಿಗೆ ಕಷ್ಟವಾಗುತ್ತದೆ. ಇತ್ತೀಚೆಗೆ ಮೋದಿ ಸರ್ಕಾರ ಬಿಟ್ಟರೆ ಬಹಳ ವರ್ಷಗಳ ಕಾಲ ನಿಶ್ಚತ ಬಹುಮತ ಹೊಂದಿದ ಸರ್ಕಾರ ಬಂದಿಲ್ಲ ಎಂದು ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್‌ ಇಲ್ಲಿ ಹೇಳಿದರು.

ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಸಂವಹನ ಪ್ರಕಾಶನವು ನಗರದ ರಾಣಿ ಬಹದ್ದೂರ್‌ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್‌ ಅವರ ಸಂಸತ್‌ ದರ್ಶನ ಕೃತಿ ಬಿಡುಗಡೆಮಾಡಿ ಅವರು ಮಾತನಾಡಿದರು.

ಒಂದು ಕಾಲದಲ್ಲಿ ಕಾಂಗ್ರೆಸ್‌ಗೆ ನಿಶ್ಚಿತವಾದ ಬಹುಮತ ಬರುತ್ತಿತ್ತು. ಇಂದು ಕಾಂಗ್ರೆಸ್‌ ಪ್ರಬಲ ವಿರೋಧ ಪಕ್ಷವಾಗುವ ಸ್ಥಿತಿಯಲ್ಲೂ ಇಲ್ಲ. ಬಲಿಷ್ಠ ವಿರೋಧ ಪಕ್ಷ ಇದ್ದರೆ ಮಾತ್ರ ಸಂಸತ್‌ನಲ್ಲಿ ಹೆಚ್ಚು ಚರ್ಚೆ ನಡೆಯಲು ಸಾಧ್ಯ. ಅಧಿಕಾರದ ವಿಕೇಂದ್ರೀಕರಣ ಆದರೂ ಗ್ರಾಮ ಪಂಚಾಯಿತಿ ಸದಸ್ಯ ಮಾಡುವ ಕೆಲಸವನ್ನು ಸಂಸತ್‌ ಸದಸ್ಯನಿಂದಲೂ ಜನ ನಿರೀಕ್ಷೆ ಮಾಡುತ್ತಾರೆ ಎಂದು ಅವರು ಹೇಳಿದರು.

‘ಯಾರು ಯಾವ ಅವಧಿಯಲ್ಲಿ ಸಂಸದರಾಗಿರುತ್ತಾರೋ ಅವರು ಆಯಾ ಕಾಲಘಟ್ಟಕ್ಕೆ ಉತ್ತಮವಾಗಿ ಕೆಲಸ ಮಾಡಿರುತ್ತಾರೆ. ಈಗ ನಾವು ಕೆಲಸ ಮಾಡಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುವುದು ಸರಿಯಲ್ಲ. ಜನ ಅದನ್ನು ಗುರುತಿಸಬೇಕು. ನಾವು ಹೆಮ್ಮೆ ಪಡಬೇಕು. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗಬಾರದು. ರಾಜಕಾರಣ ಎಂಬುದು ಸಾರ್ವಜನಿಕ ಸೇವೆ. ಜನರ ಪ್ರೀತಿ, ವಿಶ್ವಾಸ ಗಳಿಸಬೇಕು’ ಎಂದು ಕಿವಿಮಾತು ಹೇಳಿದರು.

ಮೈಸೂರು ವಿವಿ ಸಂಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಸಿ.ಡಿ.ಪರಶುರಾಮ ಅವರ ಕಾಡುಜನರ ಹಾಡುಪಾಡು ವಿಮರ್ಶಾ ಸಂಕಲನ ಬಿಡುಗಡೆ ಮಾಡಿದ ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಮಾತನಾಡಿ, 2019ರ ಚುನಾವಣೆಯಲ್ಲಿ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಜತೆಯಾಗಿ ಬಿಜೆಪಿ ವಿರುದ್ಧ ಚುನಾವಣೆ ಎದುರಿಸಿತು. ಈ ಸಂದರ್ಭದಲ್ಲಿ ಯಾರು ಯಾರ ಬೆನ್ನಿಗೆ ಚುಚ್ಚಿದರು ಎಂಬುದು ಉಲ್ಲೇಖವಾಗಬೇಕು ಎಂದರು.

‘ಜೆಡಿಎಸ್‌, ಕಾಂಗ್ರೆಸ್‌ ಸೇರಿ ದೇವೇಗೌಡರನ್ನು ತುಮಕೂರಿನಲ್ಲಿ ಬಲಿಕೊಟ್ಟರಾ ಎಂಬುದು ದೊಡ್ಡ ವಿಚಾರ. ತಮ್ಮ ಕರ್ಮಭೂಮಿಯಾದ ಹಾಸನದಲ್ಲೇ ಎಚ್‌.ಡಿ.ದೇವೇಗೌಡ ಅವರನ್ನು ಸ್ಪರ್ಧಿಸಲು ಅವರ ಮನೆಯವರೇ ಬಿಡಲಿಲ್ಲ. ಇದು ನೋವಿನ ಸಂಗತಿ. ದೇಶದ ಪ್ರಧಾನಿಯಾಗಿದ್ದವರು ಕೊನೆಯ ಚುನಾವಣೆ ಎದುರಿಸಲು ಮನೆಯವರಿಂದಲೇ ಅವಕಾಶ ತಪ್ಪಿತು. ತುಮಕೂರಿನಲ್ಲಿ ಕಾಂಗ್ರೆಸ್‌ನವರು ಅವರನ್ನು ಬಡಿದರು. ರಾಜಕಾರಣದ ಸತ್ಯ ದರ್ಶನ ಆಗಬೇಕು. ಯಾರು ಏನು ಎಂಬುದು ಜನರಿಗೆ ತಿಳಿಯಬೇಕು’ ಎಂದು ಹೇಳಿದರು.

ಓದದೆ ಗಲಾಟೆ

‌ಈ ದೇಶದಲ್ಲಿ ಓದದೆ ಗಲಾಟೆಯಾಗುತ್ತದೆಯೇ ಹೊರತು ಓದಿ ಆಗುವುದಿಲ್ಲ. ರಾಜಕಾರಣದ ಬಗ್ಗೆ ಪುಸ್ತಕ ಬರಬೇಕು. ಪ್ರತಿ ರಾಜಕಾರಣಿಯೂ ಬರೆಯಬೇಕು. ರಾಜಕಾರಣಿಗಳು ಬರೆಯುವುದನ್ನು ಸಾಹಿತಿಗಳು ಒಪ್ಪುವುದಿಲ್ಲ. ಚುನಾವಣೆಗಳಲ್ಲಿ ಜನರನ್ನು ಜ್ಞಾನವಂತರನ್ನಾಗಿಸಬೇಕು. ರಾಜಕಾರಣ, ರಾಜಕೀಯ, ರಾಜಕಾರಣಿಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ನಕಾರಾತ್ಮಕವಾಗಿ ತೆಗೆದುಕೊಂಡರೆ ಅದು ಜನತಂತ್ರ ವ್ಯವಸ್ಥೆಗೆ ಮಾರಕ. ರಾಜಕಾರಣವನ್ನು ಮೈಲಿಗೆಯಲ್ಲಿ ನೋಡುವುದೂ ಮಾರಕ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಮೈಸೂರು– ಕೊಡಗು ಸಂಸದ ಪ್ರತಾಪ ಸಿಂಹ ಮಾತನಾಡಿ, ರಾಜಕಾರಣಿಗಳು ಅಧಿಕಾರಕ್ಕಾಗಿ ಒಂದಾಗಬಹುದು. ರಾಜಕೀಯ ಭವಿಷ್ಯದ ನಿರೀಕ್ಷೆಯಲ್ಲಿ ಬೇರೆ ಬೇರೆ ಪಕ್ಷಕ್ಕೆ ಹೋಗುವರಿದ್ದಾರೆ. ಆದರೆ, ಅದನ್ನು ನೋಡುವಂಥ ದೃಷ್ಟಿ ಬದಲಾಗುತ್ತದೆ ಎಂದರು.

‘ಮೈಸೂರು ವಿಮಾನ ನಿಲ್ದಾಣದ ರನ್‌ವೇಯ 2.8 ಕಿ.ಮೀ. ವಿಸ್ತರಣೆಗೆ ₹ 170 ಕೋಟಿ ನೀಡುವಂತೆ ಮೂವರು ಮುಖ್ಯಮಂತ್ರಿಗಳ ಬಳಿ ಹೋದೆ. ಆದರೆ, ಅನುದಾನ ಸಿಗಲಿಲ್ಲ. ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ಲಭ್ಯವಾಗುತ್ತಿದ್ದರೆ ಟಾಟಾ ಕಂಪನಿಯ ಆರ್‌ ಅಂಡ್‌ ಡಿ ಘಟಕ ಮೈಸೂರಿಗೆ ಬರುತ್ತಿತ್ತು. ಅದು ಸಾಧ್ಯವಾಗದೆ ಇರುವುದರಿಂದ ಘಟಕ ಕೊಯಮತ್ತೂರಿಗೆ ಸ್ಥಳಾಂತರವಾಗಿದೆ. ಇದರಿಂದ ಸ್ಥಳೀಯರಿಗೆ ಸಿಗುತ್ತಿದ್ದ ಉದ್ಯೋಗಾವಕಾಶ ಕೈತಪ್ಪಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‌ಹಿಂದೆ ಸಾಮಾಜಿಕ ಚಳವಳಿ, ಭಾಷಣಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದವು. ವಾಜಪೇಯಿ ಅವರು ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿಯ ರಾಜಕಾರಣ ಮುನ್ನೆಲೆಗೆ ಬಂದಿದೆ. ನಾವು ಮಾಡಿರುವ ಕೆಲಸವನ್ನು ಹೇಳಬೇಕಾಗುತ್ತದೆ. ಆಡಿದ್ದನ್ನು ಮಾಡಬೇಕಾಗುತ್ತದೆ. ಇನ್ನು ಮುಂದಿನ ರಾಜಕಾರಣ ಅಭಿವೃದ್ಧಿ ಆಧಾರಿತವಾಗಿದ್ದು, ಅದು ಅನಿವಾರ್ಯವಾಗಲಿದೆ ಎಂದರು.

ಕೃತಿಗಳ ಕುರಿತು ಮಾತನಾಡಿದ ಸಾಹಿತಿ ಪ್ರೊ.ನೀಲಗಿರಿ ಎಂ.ತಳವಾರ್‌, ಇಂದು ಬರಹಗಾರರ ಸಂಖ್ಯೆ ಹೆಚ್ಚಿದೆ. ಆದರೆ ಓದುಗರ ಸಂಖ್ಯೆ ಕಡಿಮೆಯಾಗಿದೆ. ಅವಲೋಕನ, ವಿಮರ್ಶೆಗಳು ಕಡಿಮೆ ಆಗಿದೆ ಎಂದು ಅವರು ಹೇಳಿದರು.

ಎಂಡಿಎ, ಎಂಡಿಸಿಸಿ ಬ್ಯಾಂಕ್‌ ಮತ್ತು ಮೈಮುಲ್‌ ಮಾಜಿ ಅಧ್ಯಕ್ಷ ಸಿ.ಬಸವೇಗೌಡ, ಸಂವಹನ ಪ್ರಕಾಶನದ ಡಿ.ಎನ್‌.ಲೋಕಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಅಂಶಿ ಪ್ರಸನ್ನಕುಮಾರ್‌, ಡಾ.ಸಿ.ಡಿ.ಪರಶುರಾಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT